ಗಾಂಧಿ ತಂಗಿದ್ದ ಕುಠೀರವನ್ನು ಗ್ರಂಥಾಲಯ ಮಾಡಿ

ದಾವಣಗೆರೆ:

      ಮಹಾತ್ಮ ಗಾಂಧೀಜಿ ತಂಗಿದ್ದ ಮಲೇಬೆನ್ನೂರಿನ ಕುಠೀರ(ಬಾಪೂಜಿ ಹಾಲ್)ವನ್ನು ಸಾರ್ವಜನಿಕ ಗ್ರಂಥಾಲಯವನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ಆಗ್ರಹಿಸಿದರು.

      ಇಲ್ಲಿನ ಪಾಲಿಕೆ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂಟಪದ ಬಳಿ ಮಂಗಳವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರುಗಳ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

     1927ರ ಆಗಸ್ಟ್ 14ರಂದು ಗಾಂಧೀಜಿ ಅವರು ಹರಿಹರ ಮಾರ್ಗವಾಗಿ ಶಿವಮೊಗ್ಗೆಗೆ ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆಯಲ್ಲಿರುವ ಮಲೇಬೆನ್ನೂರಿನ ಕುಠೀರದಲ್ಲಿ 37 ನಿಮಿಷಗಳ ಕಾಲ ತಂಗುವ ಮೂಲಕ ದಣಿವು ಆರಿಸಿಕೊಂಡು ಮುಂದೆ ಪಾದಯಾತ್ರೆ ಕೈಗೊಂಡಿದ್ದರು. 2.36 ಎಕರೆ ಜಾಗದಲ್ಲಿರುವ ಈ ಕುಠೀರವನ್ನು ಬಾಪೂಜಿ ಹಾಲ್ ಎಂಬುದಾಗಿಯೇ ಕರೆಯಲಾಗುತ್ತಿದ್ದು, ಇದು ದುರಸ್ತಿಗೆ ಬಂದಿತ್ತು. ಹೀಗಾಗಿ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್‍ನಿಂದ ಕುಠೀರದ ಕಟ್ಟಡಕ್ಕೆ ಕಿಟಕಿ, ಬಾಗಿಲು ಅಳವಡಿಸುವ ಮೂಲಕ ನಿರಂತರ ಸಾಹಿತ್ಯ ಚಟುವಟಿಕೆ ನಡೆಸಲು ಅನುವು ಮಾಡಿಕೊಡಲಾಗಿದೆ. ಈ ಬಾಪೂಜಿ ಹಾಲ್ ಅನ್ನು ಜಿಲ್ಲಾಡಳಿ ಸಾರ್ವಜನಿಕ ಗ್ರಂಥಾಲಯವಾಗಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.

       1927ರ ಆಗಸ್ಟ್ 11ರಂದು ದಾವಣಗೆರೆಗೆ ಬಂದಿದ್ದ ಬಾಪು ಮಹಿಳಾ ಸಮಾವೇಶವನ್ನು ಕುರಿತು ಮಾತನಾಡಿ, ಮಹಿಳೆಯರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲು ಪ್ರೇರಣೆ ನೀಡಿದ್ದರು ಎಂದು ಸ್ಮರಿಸಿದರು.

      ಇಡೀ ಗಜತ್ತಿನಲ್ಲಿಯೇ ಗುರುತಿಸಲ್ಪಡುವ ಭಾವಚಿತ್ರ ಯಾವುದಾದರು ಇದ್ದರೆ, ಅದು ಗಾಂಧೀಜಿ ಅವರ ಭಾವಚಿತ್ರ ಮಾತ್ರ. ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿದ ಮೋಹನ್‍ದಾಸ್ ತಮ್ಮ ಅಹಿಂಸಾತ್ಮಕ ಹೋರಾಟದ ಮೂಲಕ ಸೂರ್ಯ ಮುಳುಗದ ಸಾಮ್ರಾಜ್ಯದ ಬ್ರಿಟೀಷರನ್ನು ಈ ನೆಲದಿಂದ ಅಟ್ಟಿಸುವಲ್ಲಿ ಯಶಸ್ವಿಯಾದರು. ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆ ಇವರ ಜನ್ಮ ದಿನವನ್ನು ಅಹಿಂಸಾ ದಿನವನ್ನಾಗಿ ಘೋಷಿಸಿದೆ. ಅಲ್ಲದೆ, ವಿಶ್ವ ಸಂಸ್ಥೆಯ ಬಾವುಟ ಅರ್ಧಕ್ಕೆ ಇಳಿಸಿ ಗೌರವ ಸೂಚಿಸಿದ ವ್ಯಕ್ತಿತ್ವ ಯಾರದ್ದಾದರು ಇದ್ದರೆ, ಅದು ಗಾಂಧೀಜಿ ಅವರದ್ದು ಎಂದು ಹೇಳಿದರು.

      ಉಧಾತ ಚಿಂತನೆಗಳ ಮೂಲಕ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮುಖೇನ ಕಟ್ಟಕಡೆಯ ವ್ಯಕ್ತಿಗೂ ಸಮಾಜಿಕ ನ್ಯಾಯ ಕಲ್ಪಿಸಲು ಬಾಪೂಜಿ ಶ್ರಮಿಸಿದ್ದರು. ಸತ್ಯ, ಶಾಂತಿ, ಅಹಿಂಸೆ, ಸತ್ಯಾಗ್ರಹಗಳೆಂಬ ಮೂಲ ತತ್ವಗಳನ್ನು ಮೈಗೂಡಿಸಿಕೊಂಡು ಇಡೀ ಭಾರತೀಯರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಗಾಂಧೀಜಿಯವರಿಗೆ ಸಲ್ಲುತ್ತದೆ ಎಂದರು.

       ಅಗೆದಷ್ಟು ಮುಗಿಯದ, ಮುಗಿಯದಷ್ಟು ಅಗೆಯುವ ಗಣಿಯ ಹಾಗೆ ಗಾಂಧೀಜಿ ಅವರ ಚಿಂತನೆಗಳಿವೆ. ಬಾಪೂಗೆ ನಾವೆಷ್ಟು ಹತ್ತಿರ? ಅವರು ಕೇವಲ ನೆನಪು ಮಾತ್ರವೇ? ಎಂಬ ಪ್ರಶ್ನೆಗಳನ್ನು ನಾವು ಹಾಕಿಕೊಳ್ಳಬೇಕಾಗಿದೆ. ಧರ್ಮ ಮತ್ತು ನೈತಿಕತೆ ಪ್ರಶ್ನೆ ಬಂದಾಗ ಗಾಂಧೀಜಿ ನೈತಿಕತೆಯನ್ನೇ ಆಯ್ಕೆ ಮಾಡಿಕೊಂಡಿದ್ದರು. ಸಮಾಜವನ್ನು ಒಡೆದಾಳುವ ಇಂಗ್ಲೀಷ್ ಪಾಶ್ಚಾತ್ಯ ಶಿಕ್ಷಣವನ್ನು ಅವರು ವಿರೋಧಿಸಿದ್ದರು. ಗಾಂಧೀಜಿ ಅವರನ್ನು ಸ್ಮರಿಸುವ ನಾವು ಬಾಪು ಚಿಂತನೆಗೆ ವ್ಯತಿರಿಕ್ತವಾಗಿ ಬದುಕುತ್ತಿರುವುದು ಎಷ್ಟು ಸರಿ? ಪ್ರಮುಖ ವೃತ್ತಗಳಲ್ಲಿ ಗಾಂಧಿ ಪುತ್ಥಳಿ ಸ್ಥಾಪಿಸಿ, ಹಾದಿ-ಬೀದಿಗಳಿಗೆ ಗಾಂಧೀಜಿ ಹೆಸರಿಡುವ, ನೋಟಿನಲ್ಲಿ ಗಾಂಧೀ ಫೋಟೋ ಮುದ್ರಿಸಿರುವ ನಾವು ಸ್ವೆಚ್ಛಾಚಾರವಾಗಿ ಬದುಕ ಬಹುದೆ ಎಂದು ಪ್ರಶ್ನಿಸಿದರು.

        ಲಾಲ್ ಬಹಾದ್ದೂರ್ ಶಾಸ್ತ್ರೀ ಅವರು ಈ ದೇಶ ಕಂಡ ಅಪರೂಪದ ರಾಜಕಾರಣಿಯಾಗಿದ್ದಾರೆ. ಸ್ವಾತಂತ್ರ್ಯ ಭಾರತದ 2ನೇ ಪ್ರಧಾನಿಯಾಗಿದ್ದ ಶಾಸ್ತ್ರೀ ಅವರು ದೇಶ ಕಾಯುವ ಯೋಧನಿಗೆ ಹಾಗೂ ಆಹಾರ ನೀಡುವ ರೈತರಿಗಾಗಿ ಜೈಜವಾನ್-ಜೈಕಿಸಾನ್ ಘೋಷಣೆ ಕೊಡುವ ಮೂಲಕ ಗೌರವಿಸಿದ್ದರು.

         ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ಶೇ.10 ರಷ್ಟು ಪಾಲಿಸಿದರೂ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿ ನಿಲ್ಲಲಿದೆ. ಆದ್ದರಿಂದ ಈ ಇಬ್ಬರೂ ಮಹಾನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

       ಸರ್ವಧರ್ಮ ಪ್ರಾರ್ಥನೆಯಲ್ಲಿ ಸಿದ್ಧಗಂಗಾ ಪ್ರೌಢ ಶಾಲೆಯ ಮೇಘಾ ಮತ್ತು ಅನುಷಾ ಭಗವದ್ಗೀತೆ, ರಿದಾ ಅಜ್ವೈನ್ ಹಾಗೂ ನಿದಾ ಖುರಾನ್ ಹಾಗೂ ಅದೃಷಾ ಗ್ರೇಸ್ ಬೈಬಲ್ ಪಠಿಸಿದರು. ಈಶ್ವರಮ್ಮ ಶಾಲೆ ಮತ್ತು ಸಿದ್ಧಗಂಗಾ ಶಾಲೆಯ ಮಕ್ಕಳು ಜಭನಾ ಗೀತೆಗಳನ್ನು ಪ್ರಸ್ತುತಪಡಿಸಿದರು.

      ಈ ಸಂದರ್ಭದಲ್ಲಿ ಸಾಹಿತಿ ಬೋಳುವಾರು ಮಹಮ್ಮದ್ ಕುಂಞ ಅವರ ಪಾಪು ಗಾಂಧಿ ಬಾಪು ಆದ ಕಥೆ ಪುಸ್ತಕ ಬಿಡುಗಡೆ ಮಾಡಲಾಯಿತು. ವಾರ್ತಾ ಇಲಾಖೆಯಿಂದ ಗಾಂಧಿ ಕುರಿತು ನಿರ್ಮಿಸಿರುವ ಸಾಕ್ಷಾಚಿತ್ರವನ್ನು ಪ್ರದರ್ಶಿಸಲಾಯಿತು.

      ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಚಮನ್ ಸಾಬ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಪಾಲಿಕೆ ಆಯುಕ್ತ ಮಂಜುನಾಥ ಆರ್.ಬಳ್ಳಾರಿ, ಸದಸ್ಯರುರುಗಳಾದ ಹೆಚ್.ತಿಪ್ಪಣ್ಣ, ಮಂಜಮ್ಮ, ಆವರಗೆರೆ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ವಾರ್ತಾಧಿಕಾರಿ ಅಶೋಕ್‍ಕುಮಾರ್ ಸ್ವಾಗತಿಸಿದರು. ಬಿ.ಎಲ್.ಗಂಗಾಧರ್ ನಿಟ್ಟೂರು ಕಾರ್ಯಕ್ರಮ ನಿರೂಪಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap