ದಾವಣಗೆರೆ
ಸಿಂಗಾಪೂರ್‍ನ ಸ್ವಚ್ಛತೆ ನಿರ್ವಹಣೆಯ ಅಧ್ಯಯನಕ್ಕೆ 17 ಮಂದಿ ಪೌರಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಇಲ್ಲಿನ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಮಹಾನಗರಪಾಲಿಕೆಯ ವತಿಯಿಂದ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಂಗಾಪೂರ್‍ನ ಸ್ವಚ್ಛತೆ ಕಾರ್ಯನಿರ್ವಹಣೆಯನ್ನು ಅಧ್ಯಯನ ಮಾಡಲು ಪಾಲಿಕೆಯ 17 ಮಂದಿ ಪೌರ ಕಾರ್ಮಿಕರನ್ನು ಆಯ್ಕೆ ಮಾಡಿ ವಿದೇಶಿ ಪ್ರವಾಸಕ್ಕೆ ಕಳುಹಿಸಲಾಗುತ್ತಿದ್ದು, ಅವರುಗಳ ಪಾಸ್‍ಪೋರ್ಟ್ ಮಾಡಿಸುವ ಕಾರ್ಯಪ್ರಗತಿಯಲ್ಲಿದೆ ಎಂದು ಹೇಳಿದರು.
ಪ್ರಸ್ತುತ ಸರ್ಕಾರ ಪೌರಕಾರ್ಮಿಕರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದ ಅವರು, ಸರ್ಕಾರ ಮಹನೀಯರ ಮೌಲ್ಯ, ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಅವರ ಜಯಂತಿಗಳ ಆಚರಣೆ ಮಾಡುತ್ತಿದೆ. ಇದೇರೀತಿ ಪೌರ ಕಾರ್ಮಿಕರ ಸೇವೆಯನ್ನೂ ಗುರುತಿಸಿ, ಗೌರವ ನೀಡುವ ನಿಟ್ಟಿನಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದೆ ಬಸವಲಿಂಗಪ್ಪನವರು ಪೌರಾಡಳಿತÀ ಸಚಿವರಿದ್ದಾಗ ಪೌರ ಕಾರ್ಮಿಕರ ಏಳಿಗೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿ ಕೊಟ್ಟರು. ಅವರ ಹೋರಾಟದ ಪರಿಶ್ರಮದಿಂದಾಗಿ ಕೈಯಿಂದ ಮಲ ಬಾಚುವ ಮತ್ತು ತಲೆಯ ಮೇಲೆ ಹೊರುವ ಪದ್ಧತಿ ನಿಷೇಧವಾಗಿದೆ ಎಂದು ಸ್ಮರಿಸಿದರು.
ಪೌರಕಾರ್ಮಿಕರ ಹಾಗೂ ನಗರ ಸ್ವಾಸ್ಥ್ಯ ದೃಷ್ಟಿಯಿಂದ ಕಾರ್ಮಿಕರಿಗೆ ಕೈಗವಸು, ಗಮ್ ಬೂಟು, ಸ್ವಚ್ಛತಾ ಪರಿಕರಗಳು ಸೇರಿದಂತೆ ವಿವಿಧ ಸಲಕರಣೆಗಳನ್ನು ನೀಡಲಾಗಿದೆ. ಉತ್ತಮ ಆರೋಗ್ಯ ದೃಷ್ಟಿಯಿಂದ ಅವರುಗಳ ಆರೋಗ್ಯ ತಪಾಸಣೆಯೊಂದಿಗೆ ಎಲ್ಲಾ ಪೌರಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಸರ್ಕಾರದ ಆದೇಶದಂತೆ ಮೂರು ಡೋಸ್ ಹೆಪಟೈಟಿಸ್ ಬಿ ಲಸಿಕೆಯನ್ನು ಹಾಕಿಸಲಾಗುತ್ತಿದೆ. ಈ ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಪೌರ ಕಾರ್ಮಿಕರಿಗಾಗಿ ಗೃಹ ಭಾಗ್ಯ ಯೋಜನೆಯಡಿ ಖಾಯಂ ನೌಕರರಿಗೆ ಜಿ+1 ಮಾದರಿಯಲ್ಲಿ 381 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರಸ್ತುತ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.
ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ನೀಲಗಿರಿಯಪ್ಪ ಮಾತನಾಡಿ, ಪೌರಕಾರ್ಮಿಕರ ಆರೋಗ್ಯದ ಹಿತ ದೃಷ್ಟಿಯಿಂದ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಕಾರ್ಡ್ ಮಾಡಿಸಿ ಅದರ ಸದುಪಯೋಗದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಪೌರಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ ಮಾತನಾಡಿ, ಪೌರಕಾರ್ಮಿಕರ ಏಳಿಗೆಗಾಗಿ ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರವು 36 ಕೋಟಿ ಅನುದಾನ ನೀಡಿ, ಸುಮಾರು 10 ಎಕರೆ ಜಮೀನಿನಲ್ಲಿ 400 ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ. ನಗರದಲ್ಲಿ 400 ಖಾಯಂ ಪೌರಕಾರ್ಮಿಕರು, 270 ನೇರ ಪಾವತಿ ನೌಕರರಿದ್ದಾರೆ. ಸರ್ಕಾರ ಖಾಯಂ ಪೌರಕಾರ್ಮಿಕರಿಗೆ ಮಾತ್ರವಲ್ಲದೆ ನೇರ ಪಾವತಿ ಕಾರ್ಮಿಕರಿಗೂ ಸಹ ಮುಂದಿನ ದಿನಗಳಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕು. ಉಳಿದ ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಒತ್ತಾಯಿಸಿದರು.
ನಗರ ಸ್ವಚ್ಛ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಡಿ.ಗೋಣೆಪ್ಪ ಮಾತನಾಡಿ, ಪೌರಕಾರ್ಮಿಕರು ನಗರದ ಸ್ವಚ್ಛತೆಗಾಗಿ ಸಮಯ ಹಾಗೂ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸಿ ಆರೋಗ್ಯ ವಿಚಾರದಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ. ಅಧಿಕಾರಿಗಳು ಪ್ರಸಕ್ತ ಸಾಲಿನಲ್ಲಿ ಯಾವ ಆರೋಗ್ಯ ತಪಾಸಣೆಯನ್ನು ಕೈಗೊಂಡಿಲ್ಲ. ಕನಿಷ್ಟ ಪಕ್ಷ 6 ತಿಂಗಳಿಗೊಮ್ಮೆ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ನಡೆಸಬೇಕು. ಪೌರಕಾರ್ಮಿಕರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿಸಿ ಉನ್ನತ ಹುದ್ದೆಗಳಲ್ಲಿ ಅಲಂಕರಿಸುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಂ.ಹಾಲೇಶ್ ಮಾತನಾಡಿ, ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಪೌರಕಾರ್ಮಿಕರಿಗೆ ಒಂದೇ ತರನಾದ ಸಮವಸ್ತ್ರ ನೀಡುವ ವ್ಯವಸ್ಥೆ ಮಾಡಬೇಕು. ಹಿಂದೆ ಕಾರ್ಮಿಕರು ಬೆಳಿಗ್ಗೆ 5.15 ಕ್ಕೆ ಗಾಂಧೀನಗರದಿಂದ ನಿಟ್ಟುವಳ್ಳಿಗೆ ಹೋಗಿ ಹಾಜರಾತಿ ಕೊಡಬೇಕಿತ್ತು. ಅದನ್ನು ತಡೆದು ಬೆಳಿಗ್ಗೆ 6.15 ಕ್ಕೆ ಹಾಜರಾತಿ ಪಡೆಯುವಂತೆ ಸೂಚಿಸಲಾಯಿತು. ಪೌರಕಾರ್ಮಿಕರನ್ನು ವಿದೇಶಗಳಿಗೆ ಕಳುಹಿಸಿ ಅಲ್ಲಿನ ಸ್ವಚ್ಛತೆಯ ಕಾರ್ಯವಿಧಾನವನ್ನು ನೋಡಿ ಇಲ್ಲಿನ ಕಾರ್ಮಿಕರೂ ಅದನ್ನು ಅನುಸರಿಸುವ ಕಾರ್ಯವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ 2019-20ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಎಂಟು ಜನ ಪೌರಕಾರ್ಮಿಕರಿಗೆ ಮತ್ತು ಉತ್ತಮ ಸಾಧನೆಗೈದ ಪೌರಕಾರ್ಮಿಕರ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಸಂಘದ ಉಪಧ್ಯಾಕ್ಷ ಎಲ್.ಎಚ್.ಸಾಗರ್, ಕಾರ್ಯಾಧ್ಯಕ್ಷ ಬಿ.ಲೋಹಿತ್, ಪೌರ ಸೇವ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜ, ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ, ಪಾಲಿಕೆಯ ಆರೋಗ್ಯಾ ಧಿಕಾರಿ ಚಂದ್ರಶೇಖರ್ ಸುಂಕದ್, ಪರಿಸರ ಅಭಿಯಂತರರಾದ ಚಿನ್ಮಯಿ ಸೇರಿದಂತೆ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳು, ಪೌರಕಾರ್ಮಿಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








