ಇನ್ನೋವಾ ಕಾರಿಗೆ ಪೆಟ್ರೋಲ್ ಬಾಟಲ್ ಎಸೆದಿದ್ದ ಆರೋಪಿ ಮಧುಗಿರಿಗೆ

ಮಧುಗಿರಿ

      ಬೆಂಗಳೂರಿನ ಜೈಲಿನಲ್ಲಿದ್ದು ಕೊಂಡೆ ಶ್ರೀಮಂತರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯದ ಅನುಮತಿ ಮೇರೆಗೆ ಮಧುಗಿರಿ ಕಸಬಾ ವ್ಯಾಪ್ತಿಯ ಸೋಂಪುರದ ವಾಸಿ, ತುಮಕೂರು ಮಾಜಿ ಮೇಯರ್ ರವಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಲ್ಲೇಶ್‍ನನ್ನು ಸೋಮವಾರ ಸಂಜೆ ಬಿಗಿ ಭದ್ರತೆಯಲ್ಲಿ ಕರೆ ತಂದು ಮಧುಗಿರಿ ಪೊಲೀಸರು ಸ್ಥಳ ತನಿಖೆಯನ್ನು ನಡೆಸಿದರು.

      ಇತ್ತೀಚೆಗೆ ಪಟ್ಟಣದ ವೆಂಕಟರವಣ ಸ್ವಾಮಿ ದೇವಾಲಯ ರಸ್ತೆಯ ಸಮೀಪ ಪುರಸಭಾ ಸದಸ್ಯರ ಮನೆಯ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಬಾಂಬ್ ಎಸೆದು ಹಾನಿ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆರೋಪಿ ಮಲ್ಲೇಶ್ ಕೃತ್ಯ ಎಸಗಲು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು ಕೊಂಡು, ಸಂಚು ರೂಪಿಸಿದ್ದು ಮಾವರು ಆರೋಪಿಗಳ ಮುಖಾಂತರ ಲಕ್ಷಾಂತರ ರೂಪಾಯಿಗಳಿಗೆ ದೂರವಾಣಿ ಕರೆ ಮಾಡುವುದರ ಮೂಲಕ ಬೇಡಿಕೆ ಇಟ್ಟಿದ್ದ ಎನ್ನಲಾಗುತ್ತಿದೆ. ಪುರಸಭಾ ಸದಸ್ಯ ಎಂ.ಎಲ್.ಗಂಗರಾಜುರವರ ಅಳಿಯ ರವಿಕಾಂತ್ ಎನ್ನುವವರ ದೂರವಾಣಿಗೆ ಆರೋಪಿಗಳು ಕರೆ ಮಾಡಿ ಬೆದರಿಸಿದ್ದು, ರವಿಕಾಂತ್ ಹಣ ಕೊಡಲು ನಿರಾಕಸಿದ್ದರ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ಬಾಟಲುಗಳಲ್ಲಿ ಪೆಟ್ರೋಲ್ ತುಂಬಿ, ಕಾರಿಗೆ ಎಸೆದು ಹಾನಿ ಮಾಡಿ ಪರಾರಿಯಾಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೊಲೀಸ್ ವರಿಷ್ಠಾಧಿಕಾರಿ ಕೋನಂ ವಂಶಿಕೃಷ್ಣ ಹಾಗೂ ಎಎಸ್‍ಪಿ ಉದೇಶ್ ಮಾರ್ಗದರ್ಶನದಲ್ಲಿ ಮಧುಗಿರಿಯ ಡಿವೈಎಸ್‍ಪಿ ಎಂ.ಪ್ರವೀಣ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಿದ್ದರು. ಮಧುಗಿರಿ ಪ್ರಭಾರ ಸಿ ಐ ನದಾಫ್, ಪಿಎಸ್‍ಐ ಕಾಂತರಾಜು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳಾದ ಗೌರಿಬಿದನೂರು ಮೂಲದ ನಿಖಿಲ್ ಅಲಿಯಾಸ್ ಟೋನಿ, ಮಧುಗಿರಿ ಪಟ್ಟಣದ ವಾಸಿ ನಾಗೇಂದ್ರ ಹಾಗೂ ಲಿಂಗೇನಹಳ್ಳಿಯ ವಾಸಿ ಲಕ್ಷೀಕಾಂತ್ ಎನ್ನುವವರನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link