ಬೆಂಗಳೂರು
ಕೊರೊನಾ ಲಾಕ್‌ಡೌನ್ ನಿಂದ ಕೆಲಸವಿಲ್ಲದೆ ರಾಜ್ಯಾದ್ಯಂತ ಸುಮಾರು 2.5 ಲಕ್ಷಕ್ಕೂ ಹೆಚ್ಚು ಮಂದಿ ಕ್ಷೌರಿಕರು ಸಂಕಷ್ಟ ಕ್ಕೆ ಸಿಲುಕಿದ್ದು ಕೆಲಸವಿಲ್ಲದೆ ದಿನಸಿಗೆ ಹಣ ವಿಲ್ಲದೆ ಪರಿತಪಿಸುತ್ತಿದ್ದಾರೆ.
ಕೊರೊನಾ ಹರಡುವುದನ್ನು ನಿಯಂತ್ರಿಸಲು ಲಾಕ್ ಡೌನ್ ಜಾರಿಗೊಳಿಸಿ ಸಲೂನ್ ಗಳಿಗೆ ನಿಷೇಧ ವಿಧಿಸಿರುವುದರಿಂದ ಕ್ಷೌರಿಕ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದ ಸಮುದಾಯಕ್ಕೆ ಕೆಲಸವಿಲ್ಲದೆ ತುತ್ತು ಅನ್ನಕ್ಕೂ ಪರಿತಪಿಸುವ ಕಾಲ ಎದುರಾಗಿದೆ.ರಾಜ್ಯದಲ್ಲಿ ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ಗದಗ, ಬೀದರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಹಸಿರು ವಲಯ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹೇರ್ ಕಟಿಂಗ್ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಕ್ಷೌರಿಕ ಸಮುದಾಯದವರು ಅಳಲು ನೋಡಿಕೊಳ್ಳುತ್ತಾರೆ
ಕ್ಷೌರಿಕರಿಗೆ ಈವರೆಗೆ ಯಾವುದೇ ರೀತಿಯ ಸಹಾಯ ದೊರೆತಿಲ್ಲ. ಕೆಲವು ಜನಪ್ರತಿನಿಧಿಗಳು ಪ್ರಚಾರಕ್ಕಾಗಿ ಕೆಲವೆಡೆ ಆಹಾರದ ಕಿಟ್‌ಗಳನ್ನು ನೀಡಿದರಾದರೂ ಕ್ಷೌರಿಕ ಕುಟುಂಬಗಳು ಇವರಿಂದಲೂ ವಂಚನೆಗೊಳಗಾಗಿವೆ.ಲಾಕ್‌ಡೌನ್ ಆರಂಭವಾಗಿನಿಂದಲೂ ಯಾವುದೇ ಆದಾಯವಿಲ್ಲದೆ ಜೀವನ ಕಷ್ಟಕರವಾಗಿದ್ದು, ತಮ್ಮ ಹೇರ್ ಕಟಿಂಗ್ ಅಂಗಡಿಗಳ ಬಾಡಿಗೆ ಪಾವತಿಗೂ ಸಮಸ್ಯೆಯಾಗುತ್ತಿದೆ,ರಾಜ್ಯದಲ್ಲಿ ಸವಿತಾ ಸಮಾಜ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇದರಲ್ಲಿ 2.5 ಲಕ್ಷಕ್ಕೂ ಹೆಚ್ಚು ಮಂದಿ ಕ್ಷೌರಿಕರ ವೃತ್ತಿಯಿಂದಲೇ ಜೀವನ ನಿರ್ವಹಿಸುತ್ತಿದ್ದು, ಇಂದಿಗೂ ಶೇ.85 ರಷ್ಟು ಕ್ಷೌರಿಕರು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿ ಜೀವನ ಸಾಗಿಸುತ್ತಿದ್ದಾರೆ.
ಮೇ. 3ರ ವರೆಗೆ ಲಾಕ್‌ಡೌನ್ ಇರಲಿದ್ದು, ಇದಾದ ನಂತರ ಹೇರ್ ಕಟಿಂಗ್ ಸೇವೆಗೆ ಅವಕಾಶ ನೀಡಬೇಕು. ಸರಕಾರದಿಂದಲೇ ಮಾಸ್ಕ, ಸ್ಯಾನಿಟೈಸರ್‌ನ್ನು ನಗರಸಭೆ ಅಥವಾ ಪಂಚಾಯತಿ ಮೂಲಕ ನೀಡುವಂತಾಗಬೇಕು.ಒಂದು ವೇಳೆ ಲಾಕ್‌ಡೌನ್ ಮತ್ತೆ ಮುಂದುವರೆದರೆ ನಮ್ಮ ಬದುಕು ಹೀನಾಯ ಸ್ಥಿತಿ ತಲುಪಲಿದೆ. ಕ್ಷೌರಿಕ ವೃತ್ತಿಯನ್ನು ನಂಬಿಕೊಂಡಿರುವ ನಮಗೆ ಬೇರೆ ಕೆಲಸ ಗೊತ್ತಿಲ್ಲ. ಹಾಗಾಗಿ ಸರ್ಕಾರ ಕ್ಷೌರಿಕರಿಗೆ ನೆರವು ನೀಡಬೇಕೆಂದು ಸವಿತಾ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾಧ್ಯಕ್ಷ ಮಂಜುನಾಥ ಒತ್ತಾಯಿಸಿದ್ದಾರೆ.
ಮತ್ತೆ ಬಂದ ಹಡಪ
ಲಾಕ್‌ಡೌನ್‌ನಿಂದಾಗಿ ಈಗ ಕ್ಷೌರಿಕರಿಗೆ ಹಿಂದಿನ ಕಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೇರ್ ಕಟ್ ಮಾಡಲು ತಾವೇ ಪೆಟ್ಟಿಗೆಯೊಂದನ್ನು ಹಿಡಿದುಕೊಂಡು ಮನೆ ಮನೆಗೆ ತೆರಳುವಂತಾಗಿದೆ.
ಕೆಲವು ಗ್ರಾಮಸ್ಥರು ಕ್ಷೌರಿಕರನ್ನು ತಮ್ಮ ಗ್ರಾಮಗಳಿಗೆ ಕರೆಸಿಕೊಂಡು ಹೇರ್ ಕಟಿಂಗ್ ಮಾಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಕೆಲವರು ಊರೂರು ತಿರುಗಿ ಹೇರ್ ಕಟಿಂಗ್ ಮಾಡುತ್ತಿದ್ದಾರೆ. ಆದರೆ ಬಹುತೇಕರು ಕೆಲಸವಿಲ್ಲದೆ ಮನೆಯಲ್ಲಿಯೇ ಇರುವಂತಾಗಿದೆ .ಆದ್ದರಿಂದ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕ್ಷೌರಕ್ಕಾಗಿ ಪರದಾಟ
ಲಾಕ್‌ಡೌನ್‌ನಿಂದಾಗಿ ಹೇರ್ ಕಟಿಂಗ್, ಸಲೂನ್‌ಗಳು ಬಂದ್ ಆಗಿದ್ದು ಸಾರ್ವಜನಿಕರು ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕ್ಷೌರಿಕರು ಮನೆ ಮನೆಗೆ ತೆರಳಿ ಹೇರ್ ಕಟಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಕೆಲವರು ಹೇರ್ ಕಟಿಂಗ್ ಅಂಗಡಿ ಬಂದ್ ಆಗಿರುವುದರಿಂದ ತಾವೇ ಕಟಿಂಗ್ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಈ ಪ್ರವೃತ್ತಿ ಇನ್ನಷ್ಟು ದಿನ ಮುಂದುವರೆದರೆ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.ರಾಜ್ಯದಲ್ಲಿ ಕೊರೊನಾ ಸೋಂಕು ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿದ್ದು, ಕೆಂಪು ವಲಯ ಹೊರತುಪಡಿಸಿ ಹಸಿರು ವಲಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ.
ಆರ್ಥಿಕ ಚಟುವಟಿಕೆಗಳಿಗೆ ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೆಲವು ವ್ಯಾಪಾರ, ವಹಿವಾಟುಗಳಿಗೆ ಅವಕಾಶ ನೀಡಲಾಗಿದೆ. ಕ್ಷೌರಿಕ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ 2.5 ಲಕ್ಷಕ್ಕೂ ಹೆಚ್ಚು ಮಂದಿಯ ಕ್ಷೌರಿಕರ ಬದುಕಿಗೆ ಸರಕಾರ ಪೂರಕವಾದ ಕ್ರಮ ಕೈಗೊಳ್ಳಬೇಕೆಂದು ಸವಿತಾ ಸಮಾಜ ಆಗ್ರಹಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








