ತುಮಕೂರು
ತುಮಕೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಮೇಲೆ ಕೊರೋನಾ ಕಾರ್ಮೋಡ ಮುಸುಕಿದೆ. ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಸ್ಮಾರ್ಟ ಸಿಟಿ ಕಂಪನಿಯು ಗುತ್ತಿಗೆದಾರರಿಗೆ ಮೇ ಮೊದಲ ವಾರ ನೋಟಿಸ್ ಜಾರಿಗೊಳಿಸಿದ ಪರಿಣಾಮ ಅಂದಿನಿಂದಲೂ ಕಾಮಗಾರಿಗಳು ಆರಂಭಗೊಂಡಿವೆಯಾದರೂ ವೇಗ ಪಡೆದುಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಕಾರ್ಮಿಕರ ಕೊರತೆ.
ಪತ್ರಿಕಾ ವರದಿಗಳು ಹಲವರ ಗಮನ ಸೆಳೆದ ಪರಿಣಾಮ ಹಾಗೂ ಹಲವು ಪ್ರಯತ್ನಗಳ ಬಳಿಕ ಕಾಮಗಾರಿಗಳು ಚುರುಕು ಪಡೆದುಕೊಂಡು ಮುನ್ನಡೆಯುತ್ತಿದವು. ಕೊರೋನಾ ಲಾಕ್‍ಡೌನ್ ಪರಿಣಾಮ ಏಕಾಏಕಿ ಸ್ಥಗಿತಗೊಂಡಿದ್ದವು. ಹೀಗೆ ಚುರುಕು ಪಡೆದ ಕಾಮಗಾರಿಗಳು ಒಂದು ಹಂತಕ್ಕೆ ಬಂದು ನಿಲ್ಲುವುದರೊಳಗೆ ಎಲ್ಲವೂ ಭಾರಿ ಹಿನ್ನಡೆ ಅನುಭವಿಸುವಂತಾಗಿವೆ.
ಕೊರೋನಾ ಲಾಕ್‍ಡೌನ್ ಘೋಷಣೆಗೊಳ್ಳುತ್ತಿದ್ದಂತೆಯೆ ಕಾಮಗಾರಿಗಳು ಸ್ಥಗಿತಗೊಂಡ ಜೊತೆ-ಜೊತೆಗೆ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ಮರಳಿ ಹೋಗುವ ಪ್ರಕ್ರಿಯೆ ನಡೆದುದು ಹಾಗೂ ಇನ್ನೂ ನಡೆಯುತ್ತಿರುವುದು ಈ ಹೊತ್ತಿಗೆ ಊಹಾತೀತವಾದ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ.
ನಾನಾ ಕಾರಣಗಳಿಂದ ಸ್ಮಾರ್ಟ್‍ಸಿಟಿ ಕಂಪನಿಯ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದವು. ಯಾವ ಕಾಮಗಾರಿ ಕೈಗೊಳ್ಳಲಾಗಿದೆ ಮತ್ತು ನಡೆಯುತ್ತಿದೆ ಎಂಬುದೆ ಅರ್ಥವಾಗದ ಗೋಜಲು-ಗೋಜಲು ವಾತಾವರಣ ಇತ್ತು. ಆದರೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಅದಕ್ಕೊಂದು ಸ್ಪಷ್ಟ ರೂಪ ದೊರಕತೊಡಗಿತು.. ಕೆಲವೊಂದು ಕಾಮಗಾರಿಗಳು ಬಹುತೇಕ ಪೂರ್ಣವಾಗುವ ಹಂತಕ್ಕೂ ಬಂದವು. ಆದರೆ ಅಷ್ಟರಲ್ಲಿ ಕೊರೋನಾ ಲಾಕ್‍ಡೌನ್ ಬರಸಿಡಿಲಿನಂತೆ ಅಪ್ಪಳಿಸಿದಾಗ, ಅದಕ್ಕೆ ಈ ಸ್ಮಾರ್ಟ್‍ಸಿಟಿ ಕಾಮಗಾರಿಗಳೂ ಒಳಪಟ್ಟಿದ್ದರಿಂದ, ಎಲ್ಲ ಕಾಮಗಾರಿಗಳೂ ಯಥಾಸ್ಥಿತಿಯಲ್ಲೇ ಸ್ಥಗಿತವಾದವು.
ರಾಜ್ಯ, ಹೊರರಾಜ್ಯಗಳಿಂದ ಬಂದಿದ್ದ ಕಟ್ಟಡ ಕಾರ್ಮಿಕರು ಭಯಭೀತರಾದರು. ಬಹುಪಾಲು ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಿದರು. ಅವರನ್ನು ಸಮಾಧಾನಿಸುವ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಯೂ ಅವರು ಇರಲಿಲ್ಲ. ಒಂದಷ್ಟು ವ್ಯವಸ್ಥಿತ ಪ್ರಯತ್ನಗಳಾಗಿದ್ದರೆ ಉಳಿಸಿಕೊಳ್ಳಬಹುದಿತ್ತೇನೊ? ಇಲ್ಲೆ ಉಳಿದವರಿಗಿಂತ ತಮ್ಮೂರಿನತ್ತ ಮರಳಿದವರೆ ಹೆಚ್ಚು. ಅದರ ಪರಿಣಾಮ ನಗರಾದ್ಯಂತ ಕಾಮಗಾರಿಗಳು ಹಾಗೆಯೆ ಉಳಿದಿದ್ದು, ಈಗ ಅವಶೇಷಗಳಂತೆ ಭಾಸವಾಗುತ್ತಿದೆ. ಲಾಕ್‍ಡೌನ್ ಸಡಿಲಗೊಂಡು ಹಲವು ವಿನಾಯಿತಿಗಳ ನಡುವೆಯೂ ಈ ಕಾಮಗಾರಿಗಳು ಕಾರ್ಮಿಕರಿಲ್ಲದೆ ಇನ್ನೂ ಅನಿಶ್ಚಿತವಾಗಿಯೇ ಉಳಿದಿವೆ. ಅದೇ ಈಗಿನ ಪ್ರಮುಖ ಸಮಸ್ಯೆಯಾಗಿ ಗೋಚರಿಸುತ್ತಿದೆ.
ತುಮಕೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ 1,000 ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯಲಿವೆ. ಈಗಾಗಲೇ ಹಲವು ಕಾಮಗಾರಿಗಳು ತೀವ್ರಗತಿಯ ಚಾಲನೆ ಪಡೆದಿದ್ದವು. ಇದಕ್ಕಾಗಿ ಸುಮಾರು 400 ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಆಯಾ ಕಾಮಗಾರಿಗಳ ಗುತ್ತಿಗೆದಾರರ ಮೂಲಕ ಶ್ರಮಿಸುತ್ತಿದ್ದರು. ಇವರೆಲ್ಲರೂ ಆಂಧ್ರಪ್ರದೇಶ, ಬಿಹಾರ, ಉತ್ತರಪ್ರದೇಶ ಮೊದಲಾದ ಉತ್ತರ ಭಾರತದ ರಾಜ್ಯಗಳಿಂದ ಬಂದಿದ್ದರು.
ಜೊತೆಗೆ ಕರ್ನಾಟಕದ ಉತ್ತರ ಭಾಗದವರೂ ಇದ್ದರು. ಇದೀಗ ಇವರಲ್ಲಿ ಶೇ.90 ರಷ್ಟು ಕುಶಲ (ಸ್ಕಿಲ್ಡ್) ಕಾರ್ಮಿಕರು ಕೊರೋನಾ ಭಯಭೀತಿಯಿಂದ ತಮ್ಮ ಸ್ವಗ್ರಾಮಗಳಿಗೆ ಮರಳಿದ್ದಾರೆ. ಈಗ ಇಲ್ಲಿ ಕುಶಲರಲ್ಲದ, ಕೇವಲ ಸಹಾಯಕರಂತಿದ್ದ ಸುಮಾರು 50-60 ಕಾರ್ಮಿಕರು ಮಾತ್ರ ಉಳಿದಿದ್ದಾರೆ. ಈ ಹಠಾತ್ ಬೆಳವಣಿಗೆ ಗುತ್ತಿಗೆದಾರರನ್ನು ಅಸಹಾಯಕರನ್ನಾಗಿ ಹಾಗೂ ವಿಚಲಿತರನ್ನಾಗಿ ಮಾಡಿದೆ. ಇದ್ದ ಕಾರ್ಮಿಕರನ್ನೆ ಬಳಸಿಕಂಡು ಕಾಮಗಾರಿ ಮುಂದುವರಿಸಲಾಗುತ್ತಿದೆ. ಸ್ಥಳೀಯರಾಗಿಯೆ ಸಿಗುವ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ಚುರುಕುಗೊಳಿಸುವ ಅನಿವಾರ್ಯತೆ ಈಗ ಬಂದೊದಗಿದೆ.
ಹೊರ ರಾಜ್ಯಗಳಿಗೆ ತೆರಳಿರುವ ಕಾರ್ಮಿಕರನ್ನು ಮತ್ತೆ ಕರೆ ತರುವುದು ಈಗಿನ ಕೊರೋನಾ ಸಂದರ್ಭದಲ್ಲಿ ಸುಲಭ ಸಾಧ್ಯವಲ್ಲ. ಅದರಲ್ಲೂ ಹೈರಿಸ್ಕ್ ಇರುವ ರಾಜ್ಯಗಳಿಂದ ಕಾರ್ಮಿಕರು ಬರುವುದು ಕ್ಲಿಷ್ಟಕರ. ಅವರನ್ನು ಒಂದು ವೇಳೆ ಇಲ್ಲಿಗೆ ಕರೆ ತಂದರೂ, ನಿಯಮಾವಳಿಗಳ ಪ್ರಕಾರ ಅವರ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ಗುತ್ತಿಗೆದಾರರೆ ಹೊರಬೇಕಾಗುತ್ತದೆ.
ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಬೇಕಾಗುತ್ತದಲ್ಲದೆ, ಸೂಕ್ತ ಆರೋಗ್ಯ ತಪಾಸಣೆ, ಚಿಕಿತ್ಸಾ ಸೌಲಭ್ಯವೆಲ್ಲವನ್ನೂ ಒದಗಿಸಬೇಕಾಗುತ್ತದೆ. ಇಂತಹ ರಿಸ್ಕ್ ತೆಗೆದುಕೊಳ್ಳುವುದು ಗುತ್ತಿಗೆದಾರರಿಗೆ ದೊಡ್ಡ ಸವಾಲಾಗುತ್ತದೆ. ಹೀಗಾಗಿ ಗುತ್ತಿಗೆದಾರರು ಸ್ಥಳೀಯವಾಗಿಯೆ ಕಾರ್ಮಿಕರನ್ನು ಸೇರಿಸುವ ಬಗ್ಗೆ ಪರ್ಯಾಲೋಚಿಸುತ್ತಿದ್ದಾರೆ. ಆದರೆ ಕುಶಲರಲ್ಲದ (ಸ್ಕಿಲ್ ಇಲ್ಲದಿರುವ) ಕಾರ್ಮಿಕರಿಂದ ಕೆಲಸ ಮಾಡಿಸುವುದು ತಲೆನೋವಿನ ಸಂಗತಿಯೆಂಬುದು ಗೊತ್ತಿರುವುದರಿಂದ ಸದ್ಯಕ್ಕೆ ಇದು ಅನಿಶ್ಚಿತವಾಗಿದೆ. ಆದರೂ ಕುಶಲ ಕಾರ್ಮಿಕರನ್ನು ಕರೆ ತರುವ ಪ್ರಯತ್ನಗಳು ಮುಂದುವರಿದಿವೆ. ಈಗಾಗಲೆ ಬಸ್ ಹಾಗೂ ರೈಲು ಸಾರಿಗೆ ವ್ಯವಸ್ಥೆ ಇರುವುದರಿಂದ ಇಂತಹ ಸಾಧ್ಯತೆಗಳ ಬಗ್ಗೆ ಯೋಚನೆಗಳು ನಡೆದಿವೆ.
ನಗರದ ಬಾಳನಕಟ್ಟೆಯಲ್ಲಿ (ಕಲಾ ಕ್ಷೇತ್ರದ ಹಿಂಬದಿ) ಮಾರಿಯಮ್ಮ ನಗರದ ಕೊಳಚೆ ಪ್ರದೇಶದ ನಿವಾಸಿಗರಿಗಾಗಿ ವಸತಿ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಅಲ್ಲಿ ಉತ್ತರ ಭಾರತದ ಸುಮಾರು 100 ಕ್ಕೂ ಅಧಿಕ ಜನ ಕುಶಲ ಕಾರ್ಮಿಕರು ಇದ್ದರು. ಅವರನ್ನು ಉಳಿಸಿಕೊಳ್ಳಲು ಗುತ್ತಿಗೆದಾರರು ಹರಸಾಹಸ ಪಟ್ಟರು. ಆದರೆ ಕೊನೆಗೂ ಕಾರ್ಮಿಕರು ಸ್ವಂತ ಸ್ಥಳಕ್ಕೆ ತೆರಳಿದ್ದರಿಂದ ಅಲ್ಲೀಗ ಅತಿ ಕಡಿಮೆ ಸಂಖ್ಯೆಯ ಕಾರ್ಮಿಕರು ಉಳಿದುಕೊಂಡಿದ್ದಾರೆ.
ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲೂ ಸಹ 30 ಜನ ಕಾರ್ಮಿಕರಲ್ಲಿ 20 ಜನ ಉಳಿದುಕೊಂಡಿದ್ದು, ಕಾರ್ಮಿಕರ ಸಂಖ್ಯೆ ಕುಸಿದಿದೆ. ಹೀಗೆ ನಗರಾದ್ಯಂತ ಸುಮಾರು 400 ರಷ್ಟಿದ್ದ ಕಾರ್ಮಿಕರಲ್ಲಿ ಎಲ್ಲರೂ ಸ್ವಸ್ಥಳಗಳಿಗೆ ಹೊರಟುಹೋಗಿದ್ದು, ಈಗ ಸ್ಕಿಲ್ ಇಲ್ಲದ ಕೇವಲ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸುಮಾರು 60-70 ಜನ ಕಾರ್ಮಿಕರು ಮಾತ್ರ ಉಳಿದಿದ್ದು, ಇವರಿಂದ ಕೆಲಸ ಮಾಡಿಸುವುದು ಹೇಗೆಂಬ ಪ್ರಶ್ನೆ ತಲೆಯೆತ್ತಿದೆ. ಇದು ಕಾಮಗಾರಿಯ ಮೇಲಷ್ಟೇ ಅಲ್ಲದೆ, ಕಾಮಗಾರಿಯ ವೇಗದ ಮೇಲೂ ಪರಿಣಾಮ ಬೀರುವಂತಾಗಿದೆ.
ಆಮೆ ಗತಿಯಲ್ಲಿ ಪ್ರಾರಂಭ
ಪ್ರಸ್ತುತ ನಗರದಲ್ಲಿ ಸ್ಥಗಿತಗೊಂಡಿದ್ದ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ಪುನರಾರಂಭಿಸುವಂತೆ ಸ್ಮಾರ್ಟ್‍ಸಿಟಿ ಕಂಪನಿಯು ಗುತ್ತಿಗೆದಾರರಿಗೆ ನೋಟೀಸ್ ಜಾರಿಗೊಳಿಸಿದ ಪರಿಣಾಮ, ನಿಧಾನಗತಿಯಲ್ಲಿ ಕೆಲವೊಂದು ಕಾಮಗಾರಿಗಳು ಆರಂಭವಾಗಿವೆಯಾದರೂ, ಕಾರ್ಮಿಕರ ಅಭಾವದಿಂದ ಎಲ್ಲವೂ ಪ್ರಸ್ತುತ ಆಮೆ ಗತಿಯಲ್ಲಿವೆಯೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಿರ್ಮಾಣ ಸಾಮಗ್ರಿಗಳ ಅಲಭ್ಯತೆ
ಲಾಕ್‍ಡೌನ್ ಪರಿಣಾಮ ಅನೇಕ ನಿರ್ಮಾಣ ಸಾಮಗ್ರಿಗಳ ಉತ್ಪಾದನೆ ಸ್ಥಗಿತವಾಗಿದೆ. ಲಭ್ಯವಿದ್ದ ವಸ್ತುಗಳ ಸಾಗಾಣಿಕೆ ಸ್ಥಗಿತವಾಗಿತ್ತಾದರೂ, ಆನಂತರ ಮಂದಗತಿಯಲ್ಲಿ ಆರಂಭವಾಗಿದೆ. ರಾಜ್ಯದೊಳಗಿನಿಂದ ಹಾಗೂ ರಾಜ್ಯದ ಹೊರಗಿನಿಂದ ಅನೇಕ ನಿರ್ಮಾಣ ಸಾಮಗ್ರಿಗಳು ರವಾನೆ ಆಗಬೇಕಿದೆ. ಅಂತಹ ನಿರ್ಮಾಣ ಸಾಮಗ್ರಿಗಳು ಸುಲಭವಾಗಿ ಇನ್ನೂ ಸಹ ಲಭ್ಯವಿಲ್ಲದಿರುವುದರಿಂದ ಅದೂ ಸಹ ಕಾಮಗಾರಿ ಮೇಲೆ ಪರಿಣಾಮ ಬೀರುತ್ತಿದೆ.
ಒಂದು ವೇಳೆ ರಾಜ್ಯದೊಳಗಿನ ಜಿಲ್ಲೆಗಳಿಂದ ಕಟ್ಟಡ ಕಾರ್ಮಿಕರನ್ನು ಕರೆಸಲು ಗುತ್ತಿಗೆದಾರರು ಮುಂದಾದರೆ ಅವರಿಗೆ ಅಗತ್ಯ ಆಡಳಿತಾತ್ಮಕ ಸಹಕಾರ ನೀಡಲು ಸ್ಮಾರ್ಟ್‍ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಭರವಸೆ ನೀಡಿದ್ದರೂ, ಪ್ರಚಲಿತ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳಲು ಗುತ್ತಿಗೆದಾರರು ಹಿಂದೆ-ಮುಂದೆ ನೋಡುವಂತಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ