ಪಾಲಿಕೆಗೆ  ಪೂರ್ಣಾವಧಿ ಆಯುಕ್ತರನ್ನು ನೇಮಕಕ್ಕೆ ಆಗ್ರಹ..!

ತುಮಕೂರು
    `ತುಮಕೂರು ಮಹಾನಗರ ಪಾಲಿಕೆಗೆ ಕೂಡಲೇ ಪೂರ್ಣಾವಧಿ ಆಯುಕ್ತರನ್ನು ನೇಮಿಸಬೇಕು’ ಎಂದು ಆಗ್ರಹಿಸಿ ತುಮಕೂರು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಹಾಗೂ ಟೂಡಾ ಸದಸ್ಯ ಜೆ.ಕುಮಾರ್ (7ನೇ ವಾರ್ಡ್-ಅಗ್ರಹಾರ) ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
     `ಪಾಲಿಕೆಯ ಆಯುಕ್ತರಾಗಿದ್ದ ಐ.ಎ.ಎಸ್. ಅಧಿಕಾರಿ ಟಿ.ಭೂಬಾಲನ್ ಅವರನ್ನು ಸರ್ಕಾರ ಸೆಪ್ಟೆಂಬರ್ ಮಾಹೆಯಲ್ಲಿ ಹಠಾತ್ತನೆ ವರ್ಗಾಯಿಸಿದೆ. ಅಂದಿನಿಂದ ಈವರೆಗೆ ಪಾಲಿಕೆಗೆ ಪೂರ್ಣಾವಧಿ ಆಯುಕ್ತರು ಇಲ್ಲದಂತಾಗಿದೆ. ಕೆಲ ದಿನಗಳ ಮಟ್ಟಿಗೆ ಪಾಲಿಕೆಯ ಉಪ ಆಯುಕ್ತ (ಕಂದಾಯ)ರನ್ನೇ ಪ್ರಭಾರವನ್ನಾಗಿ ನೇಮಿಸಲಾಗಿತ್ತು. ನಂತರ ತುಮಕೂರು ಉಪವಿಭಾಗಾಧಿಕಾರಿಗಳನ್ನು ಪ್ರಭಾರ ಆಯುಕ್ತರನ್ನಾಗಿ ನೇಮಿಸಲಾಗಿದೆ.
       ಉಪವಿಭಾಗಾಧಿಕಾರಿಗಳಿಗೆ ಇತರೆ ಪ್ರಭಾರ ಇದ್ದು, ಅದರ ಜೊತೆಗೆ ಪಾಲಿಕೆಯ ಜವಾಬ್ದಾರಿಯನ್ನೂ ವಹಿಸಲಾಗಿದೆ. ಹೀಗಾಗಿ ಅವರು ಪೂರ್ಣ ಕಾಲವನ್ನು ಪಾಲಿಕೆಗೆ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಾಲಿಕೆಯ ದೈನಂದಿನ ಆಡಳಿತದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದು ,ಪಾಲಿಕೆ ಆಡಳಿತ ಕುಸಿದಂತಾಗಿದೆ’ ಎಂದು ಮುಖ್ಯಮಂತ್ರಿಗಳಿಗೆ ಮತ್ತು ನಗರಾಭಿವೃದ್ಧಿ ಇಲಾಖೆ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ. 
      ಈ ಬಗ್ಗೆ `ಪ್ರಜಾಪ್ರಗತಿ’ಯೊಡನೆ ಮಾತನಾಡಿದ ಜೆ.ಕುಮಾರ್, ಭೂಬಾಲನ್ ಅವರ ವರ್ಗಾವಣೆ ನಂತರ ಪಾಲಿಕೆಯ ಆಡಳಿತದಲ್ಲಿ ಹಿಡಿತ ಇಲ್ಲದಂತಾಗಿದೆ. ಯಾವುದೇ ಆಡಳಿತಾತ್ಮಕ ನಿರ್ಧಾರವನ್ನು ಕೈಗೊಳ್ಳಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಅಧಿಕಾರಿ-ನೌಕರರು ಯಾರ ಮಾತನ್ನೂ ಮಾನ್ಯ ಮಾಡುತ್ತಿಲ್ಲ. ಇದರಿಂದ ಜನಪರವಾದ ಕೆಲಸ ಮಾಡಲು ಜನಪ್ರತಿನಿಧಿಗಳಾದ ನಮಗೆ ತೊಂದರೆ ಆಗುತ್ತಿದೆ. ಇದರ ನಿವಾರಣೆ ಆಗಬೇಕೆಂದರೆ ಇಲ್ಲಿಗೆ ಪೂರ್ಣಕಾಲೀನ ಆಯುಕ್ತರು ಇರಲೇಬೇಕು’ ಎಂದು ಹೇಳಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link