ಚಳ್ಳಕೆರೆ
ನಗರದ ಪಾವಗಡ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ 10ರ ಸಮಯದಲ್ಲಿ ಪರಶುರಾಮಪುರದಿಂದ ಬಂದ ಲಾರಿಯ ಮುಂಭಾಗದ ಟಯರ್ ಬರಸ್ಟ್ ಆದ ಹಿನ್ನೆಲೆಯಲ್ಲಿ ಟಯರ್‍ನ ಕಬ್ಬಿಣದ ರಿಂಗ್ ಸಿಡಿದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗಳ ಮೇಲೆ ಅಚಾನಕ್ ಬಿದ್ದ ಪರಿಣಾಮವಾಗಿ ತಲೆಗೆ ಪೆಟ್ಟುಬಿದ್ದ ಇಬ್ಬರೂ ತೀರ್ವ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದ ತಿಪ್ಫೇಶ್(45), ಆತನ ಪತ್ನಿ ಶಿವಮ್ಮ(40) ಮೃತಪಟ್ಟ ದುದೈವಿಗಳಾಗಿದ್ದು, ಸಾವಿನಲ್ಲೂ ಸಹ ತನ್ನ ಪತಿಯನ್ನು ಅನುರಿಸಿದ ಪತ್ನಿ ಶಿವಮ್ಮ. ಮೃತ ತಿಪ್ಪೇಶ್ ತನ್ನ ಪತ್ನಿಯೊಂದಿಗೆ ಚಳ್ಳಕೆರೆ ನಗರಕ್ಕೆ ಆಗಮಿಸಿ ಅವರ ಸಹೋದರ ಸಂಬಂಧಿಯ ಮನೆಗೆ ತೆರಳಿ ಅಲ್ಲಿ ಕಾಫಿ ಸೇವಿಸಿ ತನ್ನ ಪುತ್ರಿಯನ್ನು ಅವರ ಮನೆಯಲ್ಲೇ ಬಿಟ್ಟು ಸ್ವಲ್ಪ ಕೆಲಸ ಮುಗಿಸಿ ಬರುವುದಾಗಿ ಪತ್ನಿಯೊಂದಿಗೆ ಪಾವಗಡ ರಸ್ತೆಗೆ ಬಂದು ಅಲ್ಲಿನ ಗುಜರಿ ಅಂಗಡಿಯಲ್ಲಿ ಸಾಮಾನುಗಳನ್ನು ಮಾರಿ ಪತ್ನಿಯೊಂದಿಗೆ ಮಾತನಾಡುತ್ತಾ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಲಾರಿಯ ಟಯರ್‍ನ ಬರಸ್ಟ್ ಆಗಿದ್ದು, ಟಯರ್ ಸುತ್ತಲು ಹಾಕಲಾಗಿದ್ದ ಡಿಸ್ಕ್‍ನ ರಿಂಗ್ ಸಿಡಿದು ಇಬ್ಬರ ತಲೆ ಹಾಗೂ ಮುಖಕ್ಕೆ ಬಿದ್ದ ಪರಿಣಾಮವಾಗಿ ತೀರ್ವ ರಕ್ತ ಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮೃತ ತಿಪ್ಪೇಶ್ ಗುಜರಿ ಮತ್ತು ಐಸ್ಕ್ಯಾಂಡಿ ವ್ಯಾಪಾರ ಮಾಡುತ್ತಿದ್ದು, ಚಳ್ಳಕೆರೆಯಲ್ಲಿಯೇ ಪ್ರತಿನಿತ್ಯ ಐಸ್ಕ್ಯಾಂಡಿಯನ್ನು ಖರೀದಿಸಿ ಸುತ್ತಮುತ್ತಲ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದ. ಮೃತ ತಿಪ್ಫೇಶ್ ಮತ್ತು ಶಿವಮ್ಮ ದಂಪತಿಗಳಿಗೆ ಬಸವರಾಜು, ಮಾರುತಿ, ಪರಶುರಾಮ, ದಿನೇಶ್, ಲಕ್ಷ್ಮಿ ಮತ್ತು ಶಕುಂತಲ ಎಂಬ ಮಕ್ಕಳಿದ್ದು, ಈ ಪೈಕಿ ಪರಶುರಾಮ ಮತ್ತು ಶಕುಂತಲ ಮಾತುಬಾರದ ಮೂಕರಾಗಿದ್ಧಾರೆ.
ಶಿವಮ್ಮ ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ಎಣ್ಣೆಗೆರೆ ಗ್ರಾಮದವರು ಎನ್ನಲಾಗಿದೆ. ಕಳೆದ 25 ವರ್ಷಗಳ ಹಿಂದೆ ಚಳ್ಳಕೆರೆ ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದ ತಿಪ್ಫೇಶ್ ಎಂಬುವವರೊಡನೆ ವಿವಾಹವಾಗಿತ್ತು. ಕಷ್ಟ ಸುಖದಲ್ಲಿ ಜೊತೆಯಾಗಿಯೇ 25 ವರ್ಷಗಳ ಸಾಗಿಸಿದ ಈ ದಂಪತಿಗಳು ಸಾವಿನಲ್ಲೂ ಸಹ ಒಂದಾಗಿದ್ದಾರೆ. ನಿತ್ಯದ ಕಾಯಕದಲ್ಲೂ ಒಂದಾಗಿಯೇ ಕೆಲಸ ಮಾಡಿ ಬಂದ ಅಲ್ಪಸ್ವಲ್ಪ ಹಣದಲ್ಲಿ 6 ಜನ ಮಕ್ಕಳು ಹಾಗೂ ಸಂಸ್ಕಾರವನ್ನು ಸಾಗಿಸುತ್ತಿದ್ದರು.
ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಈ.ಆನಂದ್, ಪಿಎಸ್‍ಐ ನೂರ್ ಆಹಮ್ಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.