ಶಿರಾ
ಕೋವಿಡ್-19 ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸುವ ವ್ಯಾಪಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಇಲ್ಲಿನ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್‍ಕುಮಾರ್ ಗ್ರಾಮೀಣ ಭಾಗದ ಜನತೆಯ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ದೇಶಾದ್ಯಂತ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ತಾಲ್ಲೂಕಿನ ಪ್ರತಿಯೊಂದು ಗ್ರಾಪಂಗೂ ದಿನ ನಿತ್ಯ ಭೇಟಿ ನೀಡುತ್ತಿರುವ ತಾ.ಪಂ. ಇ.ಓ. ಮನೆ ಮನೆ ಭೇಟಿಯಲ್ಲೂ ನಿರತರಾಗಿದ್ದಾರೆ.
ಗ್ರಾಮೀಣ ಭಾಗದ ಕುಡಿಯುವ ನೀರಿನ ಘಟಕ, ನ್ಯಾಯಬೆಲೆ ಅಂಗಡಿ, ದಿನಸಿ ಅಂಗಡಿಗಳ ಮುಂದೆಯೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಜನತೆಯನ್ನು ಪ್ರೇರೇಪಿಸಲು ದಿನ ನಿತ್ಯ ಧ್ವನಿವರ್ಧಕಗಳ ಮೂಲಕ ಹಳ್ಳಿಗಳಲ್ಲಿ ಪಂಚಾಯ್ತಿಯ ವತಿಯಿಂದ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಆಯಾ ಪಂಚಾಯ್ತಿ ಪಿ.ಡಿ.ಓ.ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜನ ಪ್ರತಿನಿಧಿಗಳು, ಪಂಚಾಯ್ತಿ ಸದಸ್ಯರು, ಆಶಾ ಕಾರ್ಯಕರ್ತೆಯರನ್ನೊಳಗೊಂಡಂತೆ ಟಾಸ್ಕ್‍ಫೋರ್ಸ್ ಸಮಿತಿಗಳ ರಚನೆ ಮಾಡಿ ಪ್ರೇರೇಪಿಸಿದ್ದಾರೆ.
ಹೊರಭಾಗದಿಂದ ಗ್ರಾಮೀಣ ಪ್ರದೇಶಗಳಿಗೆ ಆಗಮಿಸುವವರ ಬಗ್ಗೆಯೂ ನಿಗಾ ಇಡುವಂತೆ ಪಂಚಾಯ್ತಿ ಸಿಬ್ಬಂದಿಗೆ ಸೂಚನೆ ನೀಡಿರುವ ಇಓ, ವಿವಿಧ ಇಲಾಖೆಯ ಅಧಿಕಾರಿಗಳೊಡಗೂಡಿ ಕೊರೋನಾ ಮಹಾಮಾರಿಯನ್ನು ದೂರಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಗ್ರಾಮೀಣ ಭಾಗದ ಜನತೆಯ ಪ್ರಶಂಸೆಗೂ ಕಾರಣವಾಗಿದೆ.
ಲಾಕ್‍ಡೌನ್‍ನಿಂದ ಗ್ರಾಮೀಣ ಪ್ರದೇಶದ ಅನೇಕ ಮಂದಿ ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿದೆ. ಸರ್ಕಾರದ ಆದೇಶದಂತೆ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗಳನ್ನು ತಾಲ್ಲೂಕಿನ ಹಲವು ಗ್ರಾಪಂಗಳಲ್ಲಿ ಕೂಡಲೆ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್ ಅವರನ್ನು ಮಾಗೋಡು ಗ್ರಾ.ಪಂ. ವ್ಯಾಪ್ತಿಯ ಗಿರಿನಾಥನಹಳ್ಳಿ ಗ್ರಾಮಕ್ಕೆ ಆಹ್ವಾನಿಸಿ ನರೇಗಾ ಕಾಮಗಾರಿಯ ಉದ್ಘಾಟನೆಯನ್ನು ಮಾಡಿಸಿದ್ದಾರೆ. ಇದರೊಟ್ಟಿಗೆ ಅನೇಕ ಕೂಲಿ ಕಾರ್ಮಿಕರು ಮಾಸ್ಕ್‍ಗಳನ್ನು ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸೋಂಕು ನಿವಾರಕ ಸ್ಯಾನಿಟರೈಸ್ ಬಳಸುತ್ತಾ ಕಾಮಗಾರಿ ಕೆಲಸದಲ್ಲಿ ತೊಡಗುವಂತೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ