ಮಾರುಕಟ್ಟೆಯಲ್ಲಿ ಹೂವು ಹಣ್ಣಿಗಿಂತ, ಪಟಾಕಿಗಳ ಸದ್ದೇ ಜೋರು!

ದೀಪಾವಳಿ ಹಬ್ಬದ ಬಿಸಿ, ಹೂವು ಹಣ್ಣುಗಳ ಬೆಲೆಯಲ್ಲಿ ಶೇ.30ರಷ್ಟು ಹೆಚ್ಚಳ

ತುಮಕೂರು:

ವರದಿ :-ಯೋಗೇಶ್ ಮಲ್ಲೂರು

        ಕತ್ತಲೆಯ ಅಂಧಕಾರವನ್ನು ಅಳಿಸಿ ಬಾಳಲ್ಲಿ ಬೆಳಕಿನ ಹೊಂಗಿರಣವನ್ನು ಸೂಸುವ ದೀಪಾವಳಿ ಹಬ್ಬವು, ಎಲ್ಲರ ಮನೆ ಮತ್ತು ಮನಗಳಲ್ಲಿ ದಿವ್ಯ ಬೆಳಕನ್ನು ತರಲಿ ಎಂಬುದು ಈ ಹಬ್ಬದಲ್ಲಿ ಹಿರಿಯರ ಆಶೀರ್ವಾದ ನುಡಿ. ಅಂತೆಯೆ ದೀಪಾವಳಿಯು ಯುವಕರಿಂದ ಮುದುಕರವರಗೆ ಎಲ್ಲರಿಗೂ ಮುದು ನೀಡುವ ಹಬ್ಬವಾಗಿದೆ. ಇದು ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾಗಿದ್ದು, ನಗರದಲ್ಲಿ ಈ ಬಾರಿಯ ದೀಪಾವಳಿ ವ್ಯಾಪಾರದ ಭರಾಟೆ ಕೊಂಚ ಮಟ್ಟಿಗೆ ಸದ್ದು ಮಾಡುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಿಗಳನ್ನು ಮಾತಾಡಿಸುತ್ತಾ ಹಾಗೆ ಒಂದು ರೌಂಡ್ ಹಾಕಿಕೊಂಡು ಬರುವಾಗ ಹಬ್ಬದ ಬಿಸಿ ತಟ್ಟಿರುವ ಹಲವು ಬೆಲೆಗಳಲ್ಲಿನ ಏರಿಳಿತಗಳನ್ನು ಗಮನಿಸುತ್ತಾ ಹೋದಂತೆ ವಿವರ ಈ ಕೆಳಕಂಡಂತಿದೆ.

ಹೂವಿನ ಮಳಿಗೆಗಳಲ್ಲಿ ತಕ್ಕಮಟ್ಟಿನ ವ್ಯಾಪಾರ:

     ನಗರದ ಪ್ರಮುಖ ವ್ಯಾಪಾರ ಸ್ಥಳಗಳಾದ ಮಂಡಿಪೇಟೆ, ಚಿಕ್ಕಪೇಟೆ, ಹೊರಪೇಟೆ, ಅಶೋಕ ರಸ್ತೆ ಹಾಗೂ ಮಹಾತ್ಮ ಗಾಂಧಿ ರಸ್ತೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಹಬ್ಬದ ಬಿಸಿ ತಕ್ಕ ಮಟ್ಟಿಗೆ ತಟ್ಟಿದೆ. ಬೆಲೆಗಳಲ್ಲಿ ಕೊಂಚ ಮಟ್ಟಿನ ಏರಿಳಿತ ಕಂಡು ಬಂದಿದೆ. ಮಂಡಿಪೇಟೆಯ ಹಲವು ಕಡೆಗಳಲ್ಲಿ ಹೂವು ಹಣ್ಣುಗಳ ಮಳಿಗೆಗಳು ದಾರಿಯುದ್ದಕ್ಕೂ ಮೇಳೈಸಿದ್ದರೂ, ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ.

     ಇನ್ನು ಹೂವು ಹಣ್ಣಿನ ವ್ಯಾಪಾರವನ್ನು ನೋಡಿದರೆ, ಕಳೆದೊಂದು ವಾರದ ಹಿಂದೆ ಇದ್ದ ಬೆಲೆಗಿಂತ ಈಗ ಶೇ.25 ರಿಂದ ಶೇ.30ರಷ್ಟು ಹೆಚ್ಚಳವಾಗಿದೆ. ಸೇವಂತಿಗೆ ಒಂದು ಮಾರಿಗೆ ರೂ. 50 ರಿಂದ 70 ಇದ್ದರೆ ಮಲ್ಲಿಗೆ, ಕಾಕಡ ಹಾಗೂ ಕನಕಾಂಬರ ಮಾರಿಗೆ ಈ ಹಿಂದೆ ಇದ್ದುದ್ದಕ್ಕಿಂತ ದಿಢೀರನೆ ರೂ.200ರಿಂದ 300ರೂ ನಷ್ಟು ಏರಿಕೆಯಾಗಿದೆ. ಹೂವಿನ ಹಾರಗಳಂತೂ 150ರ ಒಳಗೆ ಕೇಳಿದರೆ ವ್ಯಾಪಾರಿಯ ಬಾಯಿಂದ ಮಾತು ಹೊರಳುವುದೇ ಇಲ್ಲ. ಗುಲಾಬಿ ಹೂವಿನ ಹಾರಗಳು 400 ರೂ ತನಕ ಏರಿದೆ.

ಹೂವು ಹಣ್ಣುಗಳ ಬೆಲೆಯಲ್ಲಿ ಶೇ.30ರಷ್ಟು ಹೆಚ್ಚಳ:

     ಇನ್ನು ಹಣ್ಣಿನ ಅಂಗಡಿಗಳಲ್ಲಿ ಹಬ್ಬದ ವಾತಾವರಣ ಕೊಂಚ ಕ್ಷೀಣಿಸಿದರೂ ಬೆಲೆಗಳಲ್ಲಿ ಅಲ್ಪ ಮಟ್ಟಿನ ಏರಿಕೆ ಕಂಡು ಬಂದಿದೆ. ಕಳೆದ ವಾರದ ವ್ಯಾಪಾರಕ್ಕೆ ಹೋಲಿಸಿದರೆ ಹಬ್ಬದ ವಾರದಲ್ಲಿ ಎಲ್ಲಾ ವಿಧದ ಹಣ್ಣುಗಳಲ್ಲಿ ಕೆ,ಜಿಗೆ ಶೇ.20 ರಿಂದ ಶೇ.30ರಷ್ಟು ಹೆಚ್ಚಾಗಿದೆ. ಸೇಬು ಕೆ.ಜಿಗೆ ರೂ.100ರಿಂದ 120 ಇದ್ದರೆ, ಕಿತ್ತಲೆ ಕೆ.ಜಿಗೆ ರೂ.80ರಿಂದ 100, ದ್ರಾಕ್ಷಿ ಕೆಜಿಗೆ ರೂ150 ಹಾಗೂ ದಾಳಿಂಬೆ ಕೆ,ಜಿಗೆ 140 ಇದೆ.

ಎಲ್ಲೆಲ್ಲೂ ದೀಪಗಳದ್ದೇ ಹಾವಳಿ:

     ನಗರದ ಹೊರಪೇಟೆಯಿಂದ ಹಿಡಿದು ಮಂಡಿಪೇಟೆಯವರೆಗೂ, ಅಶೋಕರಸ್ತೆಯಿಂದ ಚರ್ಚ್ ಸರ್ಕಲ್ ವರೆಗೂ ಎಲ್ಲೆಲ್ಲೂ ಮಣ್ಣಿನ ಬಗೆಬಗೆಯ ಅಲಂಕೃತ ದೀಪಗಳದ್ದೇ ಕಾರುಬಾರು ಜೋರು. ಅಂತಯೆ ದೀಪಗಳನ್ನು ಕೊಳ್ಳಲು ಮುಗಿಬಿದ್ದ ಗ್ರಾಹಕರು. ದೀಪಗಳ ವ್ಯಾಪಾರ ಕಳೆದ ವರ್ಷ ಹಬ್ಬಕ್ಕಿಂತ ಈ ಬಾರಿ ಹೆಚ್ಚಿದೆ ಎನ್ನಬಹುದು. ಕಳೆ ಬಾರಿ ಅಲ್ಲೊಂದು ಇಲ್ಲೊಂದು ಅಂಗಡಿಗಳು ಕಾಣಿಸಿಕೊಂಡರೆ ಈವರ್ಷ ಸಾಲು ಸಾಲು ದೀಪದ ಅಂಗಡಿಗಳು ರಸ್ತೆ ಇಬ್ಬದಿಯಲ್ಲಿ ಬಣಗುತ್ತಿದೆ. ಅದರಂತೆ ಗ್ರಾಹಕರು ಸಹ ವಿವಿಧ ಬಗೆಯ ದೀಪಗಳನ್ನು ಹಾರಿಸಿಕೊಳ್ಳು ಮುಗಿಬಿದ್ದಿದ್ದಾರೆ. ಕನಿಷ್ಠವೆಂದರೆ 5ರೂ ನಿಂದ ಪ್ರಾರಂಭಗೊಳ್ಳುವ ದೀಪಗಳ ಬೆಲೆ ಗರಿಷ್ಟ 50 ರಿಂದ 60 ರೂ ವರೆಗಿನ ವೆರೈಟಿ ದೀಪಗಳು ಮಾರುಕಟ್ಟೆಯಲ್ಲಿವೆ.

ಜೋರು ಸದ್ದು ಮಾರುತ್ತಿರುವ ಪಟಾಕಿಗಳು:

      ನಗರದ ಬಿ.ಎಚ್ ರಸ್ತೆಯುದ್ದಕ್ಕೂ ಸುಮಾರು ಏಳೆಂಟು ಪಟಾಕಿ ಮಳಿಗೆಗಳು ಜನರಿಂದ ತುಂಬಿವೆ. ಪಟಾಕಿಗಳನ್ನು ಕೊಳ್ಳಲು ಜನರು ನಗರವಷ್ಟೇ ಅಲ್ಲದೆ ನಗರದ ಹೊರವಲಯದಿಂದಲೂ ಬರುತ್ತಿದ್ದಾರೆ. ಎಲ್ಲಾ ವಿವಿಧ ಪಟಾಕಿಗಳನ್ನೊಳಗೊಂಡ ಒಂದು ಬಾಕ್ಸಿಗೆ ಕನಿಷ್ಠ ರೂ.300ರಿಂದ 1,800 ರೂಗಳ ವರೆಗೆ ಇವೆ. ಯುವಕರು, ವಯಸ್ಕರು ಹಾಗೂ ಮಹಿಳೆಯರನ್ನೊಳಗೊಂಡ ಎಲ್ಲರೂ ಪಟಾಕಿಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಪಟಾಕಿ ವ್ಯಾಪಾರಿಗಳಿಗೆ ಈ ಸಲದ ದೀಪಾವಳಿ ಸಂತಸ ಮೂಡಿಸಿದ್ದು, ವ್ಯಾಪಾರ ಖುಷಿಯಿಂದ ಸಾಗುತ್ತಿದೆ ಎನ್ನುತ್ತಾರೆ.

ಎಂ.ಜಿ ರೋಡ್‍ನಲ್ಲೂ ದೀಪಾವಳಿ ಆಫರ್ಸ್‍ಗಳು:

      ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಜನ ಸಂಖ್ಯೆ ಎಂದಿಗಿಂತ ಕೊಂಚ ಹೆಚ್ಚಾಗಿ ಕಂಡು ಬರುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಹಲವು ಮೊಬೈಲ್ ಅಂಗಡಿಗಳು, ವಿವಿಧ ಉಪಕರಣಗಳ ಅಂಗಡಿಗಳು ಹಾಗೂ ಬಟ್ಟೆ ಅಂಗಡಿಗಳಲ್ಲಿ ಹಬ್ಬಕ್ಕಾಗಿ ವಿವಿಧ ಬಗೆಯ ಕೊಡುಗೆಗಳನ್ನು ನೀಡಿ ಹಬ್ಬವನ್ನು ಆಚರಿಸಲಾಗುತ್ತಿದೆ. ತಮಗೆ ಬೇಕಾದ ಅಗತ್ಯವಸ್ತುಗಳನ್ನು ಕೊಳ್ಳಲು ಜನರು ಆಫರ್ಸ್‍ನತ್ತ ಓಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap