ಹೊನ್ನಾಳಿ:
ಮಳೆ ಕೊರತೆಯಿಂದಾಗಿ ಎಲ್ಲಾ ಬೆಳೆಗಳೂ ವಿಫಲವಾಗಿದ್ದು, ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳನ್ನು ಬರಪೀಡಿತ ಎಂಬುದಾಗಿ ಘೋಷಿಸಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಹಾಗೂ ನೂತನ ನ್ಯಾಮತಿ ತಾಲೂಕು ಅಭಿವೃದ್ಧಿಗೆ ಹಣ ಬಿಡುಗಡೆ ಮತ್ತು ನ್ಯಾಮತಿ ತಾಲೂಕಿನ ರೈತರ ಜಮೀನಿನ ದಾಖಲೆಗಳ ಭೂಮಿ ತಂತ್ರಾಂಶವನ್ನು ಸರಿಪಡಿಸುವಂತೆ ಮನವಿ ಪತ್ರ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಎರಡೂ ತಾಲೂಕುಗಳಲ್ಲಿ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಶೇಂಗಾ ಮತ್ತಿತರ ಬೆಳೆಗಳು ಮಳೆ ಕೊರತೆಯಿಂದ ಹಾಳಾಗಿವೆ. ಬಿತ್ತನೆ ಬೀಜ, ಗೊಬ್ಬರ ಮತ್ತಿತರ ಕಾರ್ಯಕ್ಕೆ ರೈತರು ಮಾಡಿದ ಸಾಲ ಮೈಮೇಲೆ ಬರುವಂತಾಗಿದೆ. ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ರೈತರ ಸಂಕಷ್ಟಕ್ಕೆ ಧಾವಿಸಬೇಕು ಎಂದು ಅವರು ವಿನಂತಿಸಿದರು.
ತಮ್ಮ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹಂತ ಹಂತವಾಗಿ ಬೇಡಿಕೆಗಳ ಈಡೇರಿಕೆಗೆ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ