ದಾವಣಗೆರೆ:
ಕಲಾವಿದರ ಕೊರತೆಯಿಂದ ಪ್ರಸ್ತುತ ರಂಗಭೂಮಿಯೂ ತುಂಬಾ ನಷ್ಟ ಅನುಭವಿಸುತ್ತಿದೆ ಎಂದು ರಂಗ ಕಲಾವಿದ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಜಣ್ಣ ಜೇವರ್ಗಿ ಆತಂಕ ವ್ಯಕ್ತಪಡಿಸಿದರು.
ನಗರದ ಶಿವಯೋಗಿ ಮಂದಿರದಲ್ಲಿ ಸೋಮವಾರ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಹಯೋಗದಲ್ಲಿ ಸಂಘದ 23ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ನಾಟಕ ಕಂಪನಿಗಳು ಗುಣಮಟ್ಟದ ನಾಟಕಗಳನ್ನು ಕೊಡಲಾಗುತ್ತಿಲ್ಲ. ಈಗಿನ ರಂಗಭೂಮಿಯಲ್ಲಿ ಧ್ವಂಧ್ವಾರ್ಥ ಸಂಭಾಷಣೆ ಹಾಗೂ ಆಶ್ಲೀಲ ಪದಗಳಿಂದ ಕೂಡಿರುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ನಿಜಕ್ಕೂ ತಪ್ಪು ಕಲ್ಪನೆ. ರಾಜ್ಯದಲ್ಲಿನ ಹಲವಾರು ರಂಗ ತರಬೇತಿ ಶಾಲೆಗಳಿಂದ ಸಾಕಷ್ಟು ಕಲಾವಿದರು ಕಲಿತು ಹೊರಬರುತ್ತಿದ್ದಾರೆ. ಆದರೆ ಅವರು ಯಾರು ವೃತ್ತಿ ರಂಗಭೂಮಿ ಕಡೆಗೆ ಬರುತ್ತಿಲ್ಲ.
ಸರ್ಕಾರ ಸಹಾಯ ಧನ ನೀಡುತ್ತಿರುವುದರಿಂದ ಮಾತ್ರ ಇಂದು ಕೆಲವು ನಾಟಕ ಕಂಪನಿಗಳು ನಡೆಯುತ್ತಿವೆ ಎಂದರು.ಸರ್ಕಾರ 1 ಕೋಟಿ ರೂ ವೆಚ್ಚದಲ್ಲಿ ಕೊಂಡಜ್ಜಿಯಲ್ಲಿ ರಂಗ ತರಬೇತಿ ಕೇಂದ್ರ ನಿರ್ಮಿಸಲಿದೆ. ಆ ಕಾರ್ಯ ಶಿಸ್ತು ಬದ್ಧವಾಗಿ ನಡೆಯಬೇಕು. ಸಾಮಾನ್ಯ ಪ್ರೇಕ್ಷಕರಿಗೆ ಮನ ಮುಟ್ಟುವಂತೆ ಸಂದೇಶ ನೀಡುವ ಶಕ್ತಿ ರಂಗಭೂಮಿಗಿದೆ. ಸರ್ಕಾರಕ್ಕೆ ವೃತ್ತಿ ರಂಗಭೂಮಿ ಉಳಿಸುವ ಆಕಾಂಕ್ಷೆ ಇದ್ದರೆ, ಆಸಕ್ತರಿಗೆ ನಾಟಕ ಕಂಪನಿಗಳಲ್ಲಿ ತರಬೇತಿ ನೀಡುವುದು ಸೂಕ್ತ ಎಂದು ಹೇಳಿದರು.
ರಂಗ ತಜ್ಞ ಮಲ್ಲಿಕಾರ್ಜುನ ಕಡಕೊಳ ಮಾತನಾಡಿ, ವೃತ್ತಿ ರಂಗಭೂಮಿಯ ಪರಂಪರೆಗಳನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಆಗ ಮಾತ್ರ ನಾಟಕಗಳು ಹಾಗೂ ಕಂಪನಿಗಳು ಉಳಿದುಕೊಳ್ಳುವ ಸಾಧ್ಯತೆ ಇದೆ. ವೃತ್ತಿ ರಂಗಭೂಮಿ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಕಲಾವಿದರು ರಂಗಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಕಲಾವಿದರಲ್ಲಿ ಅಹಂಕಾರ ಇರಬಾರದು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಬಸವಪ್ರಭು ಸ್ವಾಮೀಜಿ ಮಾತನಾಡಿ, ಮಾನವನ ಬದುಕು ಅಜ್ಞಾನ, ಜಾತಿ, ಅಸಮಾನತೆ, ದ್ವೇಷ, ಅಸಹನೆ, ಅಶಾಂತಿ ಎಂಬ ಕತ್ತಲಿನಲ್ಲಿ ನಡೆಯುತ್ತಿದೆ. ಮೊದಲು ನಾವುಗಳು ಈ ಕತ್ತಲೆಯಿಂದ ಬೆಳಕಿನೆಡೆಗೆ ಬರಬೇಕಿದೆ. ಬದುಕನ್ನು ಪರಿವರ್ತನೆ ಮಾಡುವ ಶಕ್ತಿ ರಂಗಭೂಮಿಗಿದೆ. ಜೀವನವನ್ನು ಶ್ರೇಷ್ಠತೆ ಕಡೆಗೆ ರಂಗಭೂಮಿ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಎಸ್. ಎನ್. ರಂಗಸ್ವಾಮಿ ಚಿರಡೋಣಿ, ಕೊಗಳಿ ಪಂಪಣ್ಣ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕತ ಪ್ರಕಾಶ್ ಕುಗ್ವೆ ಹಾಗೂ ಹಿರಿಯ ರಂಗ ಕಲಾವಿದ ರಾಜಣ್ಣ ಜೇವರ್ಗಿ ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಎಸ್. ಎನ್. ರಂಗಸ್ವಾಮಿ ಚಿರಡೋಣಿ ಉದ್ಘಾಟಿಸಿದರು. ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ. ಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಎಸ್.ಮಲ್ಲಿಕಾರ್ಜುನ, ಎಸ್.ನೀಲಕಂಠಪ್ಪ ಮತ್ತಿತರರು ಉಪಸ್ಥಿತರಿದ್ದರುಕಲಾವಿದೆ ರೇಣುಕಾ ಪ್ರಾರ್ಥಿಸಿದರು, ಮಹೇಶ್ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
