ಭಾರಿ ಮಳೆಗೆ ಅಪಾರ ಬೆಳೆ ನಷ್ಟ…!

ಹೊಸಪೇಟೆ

     ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಕೈಗೆ ಬಂದ ಫಸಲು ನಷ್ಟವಾಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತಾಲೂಕಿನ ಬಸವನದುರ್ಗ, ನಾಗೇನಹಳ್ಳಿ, ಕರೇಕಲ್ಲು, ಮಲಪನಗುಡಿ, ಬುಕ್ಕಸಾಗರ, ಕಮಲಾಪುರ ಭಾಗದಲ್ಲಿ ಭತ್ತದ ಬೆಳೆ ನೆಲಕಚ್ಚಿದೆ. ಇನ್ನೂ ರಾಯರಕೆರೆ ಪ್ರದೇಶದಲ್ಲಿ 25 ಎಕರೆ ಮೆಕ್ಕೆಜೋಳ ಹಾಗೂ ಹತ್ತಾರು ಎಕರೆ ತೊಗರಿ ಸೇರಿ ನಾನಾ ಬೆಳೆಗಳು ಹಾನಿಯಾಗಿವೆ. ಭಾರಿ ಮಳೆ ಗಾಳಿಗೆ ಭತ್ತ ಉರುಳಿ ಬಿದ್ದಿದ್ದು, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯ ನಡೆಸಿದ್ದಾರೆ.

    ತಾಲೂಕಿನ ಮರಿಯಮ್ಮನಹಳ್ಳಿ ಭಾಗದಲ್ಲಿ ಡಣಾಯಕನಕೆರೆ ಹಾಗೂ ತಿಮ್ಲಾಪುರ ಕೆರೆ ಕೋಡಿಬಿದ್ದು, ಅಪಾರ ಪ್ರಮಾಣದ ನೀರು ರೈತರ ಗದ್ದೆಗಳಿಗೆ ನುಗ್ಗಿದ್ದು, ರೈತರು ಕಂಗಾಲಾಗಿದ್ದಾರೆ. ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 50 ಎಕರೆ ಮೆಕ್ಕೆಜೋಳ, 25 ಎಕರೆ ಕಬ್ಬು, 15 ಎಕರೆ ಸಜ್ಜೆ, 20 ಎಕರೆ ಭತ್ತ ಸೇರಿ ನೂರಾರು ಎಕರೆ ಬೆಳೆಗಳು ಹಾನಿಯಾಗಿದ್ದು, ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸುತ್ತಿದ್ದಾರೆ.

   ತಾಲೂಕಿನ ಮರಿಯಮ್ಮನಹಳ್ಳಿ ಭಾಗದ ಪೋತಲಕಟ್ಟಿ, ತಿಮ್ಲಾಪುರ ಹಾಗೂ ವ್ಯಾಸನಕೆರೆ ಭಾಗದಲ್ಲಿ ಹತ್ತಾರು ಮನೆಗಳು ಮಳೆಗೆ ಕುಸಿದಿವೆ. ನಾಗಲಾಪುರ ಗ್ರಾಮದ ಮನೆಗಳಿಗೂ ನೀರು ನುಗ್ಗಿದ್ದು, ಜನರು ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ. ತಿಮ್ಲಾಪುರ ಭಾಗದಲ್ಲಿ ಹೆದ್ದಾರಿ ನೀರು ಮನೆಗಳಿಗೆ ನುಗ್ಗಿದ್ದು, ಕೂಡಲೇ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap