ಬೆಂಗಳೂರು
ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದು ಕೇವಲ 20 ದಿನಗಳಲ್ಲೇ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ್ದ ಕುಖ್ಯಾತ ಕನ್ನಗಳ್ಳ ಸಂತೋಷ್ ಅಲಿಯಾಸ್ ಎಮ್ಮೆ ಸೇರಿ 12 ಮಂದಿ ಕನ್ನಗಳ್ಳರನ್ನು ಬಂಧಿಸಿರುವ ತಲಘಟ್ಟಪುರ ಪೊಲೀಸರು 58 ಲಕ್ಷ 85 ಸಾವಿರ ಮೌಲ್ಯದ ಚಿನ್ನ ಬೆಳ್ಳಿ ಇನ್ನಿತರ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸುಕಂದಕಟ್ಟೆಯ ಶ್ರೀಗಂಧ ಕಾವಲುವಿನ ಸಂತೋಷ (32), ಗಿರಿನಗರ, ಸುಬ್ರಮಣ್ಯಪುರ, ಪುಟ್ಟೇನಹಳ್ಳಿ, ಕೋಣನಕುಂಟೆ, ತಲಘಟ್ಟಪುರ ಸೇರಿ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 70ಕ್ಕೂ ಹೆಚ್ಚು ಕನ್ನಗಳವು ಮಾಡಿರುವ ಕುಖ್ಯಾತಿ ಹೊಂದಿದ್ದಾನೆ.ಬಂಧಿತ ಕನ್ನಗಳ್ಳ ಸಂತೋಷ್ ಕಳವು ಮಾಡುತ್ತಿದ್ದ ಚಿನ್ನ- ಬೆಳ್ಳಿ ಆಭರಣಗಳನ್ನು ಖರೀದಿಸುತ್ತಿದ್ದ ಮೈಸೂರಿನ ಅಮೃತಾ ಬಡಾವಣೆಯ ಕೃಷ್ಣಮೂರ್ತಿ ಅಲಿಯಾಸ್ ಕೃಷ್ಣ (42)ನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ 27 ಲಕ್ಷ ಮೌಲ್ಯದ 700 ಗ್ರಾಂ ಚಿನ್ನಾಭರಣಗಳು, 5 ಕೆಜಿ ಬೆಳ್ಳಿಯ ವಸ್ತುಗಳು, ಪಲ್ಸರ್ ಬೈಕ್‍ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಕನ್ನಗಳ್ಳ ಸಂತೋಷ್‍ನಿಂದ ಕಳವು ಮಾಡಿದ ಚಿನ್ನಾಭರಣಗಳನ್ನು ಖರೀದಿಸಿ ಗಟ್ಟಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಕೃಷ್ಣಮೂರ್ತಿ, ಪೊಲೀಸ್ ಬಂಧನದ ವೇಳೆ ಆತ್ಮಹತ್ಯೆ ಪ್ರಯತ್ನ ನಡೆಸಿದ್ದು, ಅದನ್ನು ವಿಫಲಗೊಳಿಸಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದರು.
ಕಳೆದ 10 ವರ್ಷಗಳಿಂದ ಕನ್ನಗಳವು ಕೃತ್ಯದಲ್ಲಿ ತೊಡಗಿದ್ದ ಸಂತೋಷ್, ಜೈಲಿಗೆ ಹೋಗಿ ಬರುವುದು ಮಾಮೂಲಾಗಿತ್ತು. ಇಲ್ಲಿಯವರೆಗೆ ಆತ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೇ ಹೆಚ್ಚಿನ ಕಳವು ಮಾಡಿದ್ದು, 70 ಕನ್ನಗಳವು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದು ತಿಳಿಸಿದರು.
ತಲಘಟ್ಟಪುರದ ಕರಿಷ್ಮಾ ಲೇಔಟ್‍ನಲ್ಲಿ ಸರ್ಕಾರಿ ನಿವೃತ್ತ ಅಧಿಕಾರಿ ಪುಟ್ಟೇಗೌಡ ಎಂಬುವರ ಮನೆಯಲ್ಲಿ ಕನ್ನಗಳವು ಮಾಡಿ ತಲೆಮರೆಸಿಕೊಂಡಿದ್ದ ಸಂತೋಷ್‍ನನ್ನು ಖಚಿತ ಮಾಹಿತಿ ಮೇರೆಗೆ ತಲಘಟ್ಟಪುರ ಪೊಲೀಸ್ ಇನ್ಸ್‍ಪೆಕ್ಟರ್ ರಾಮಪ್ಪ ಬಿ. ಗುತ್ತೇರ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಆರೋಪಿಯು ಬೀಗ ಹಾಕಿದ ಮನೆಗಳ ಮುಂಭಾಗ ಪೇಪರ್, ಹಾಲು ತೆಗೆದುಕೊಳ್ಳದೆ ಹಾಗೇ ಬಿಟ್ಟಿರುವುದನ್ನು ಹಾಗೂ ಬೀಗ ಹಾಕಿರುವುದನ್ನು ಗಮನಿಸಿ ರಾಡ್ ಬಳಸಿ ಮನೆಗಳ ಬೀಗ ಮುರಿದು ಕಳವು ಮಾಡುವುದರಲ್ಲಿ ಪರಿಣಿತಿ ಹೊಂದಿದ್ದ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








