ಜಾಗತೀಕರಣದ ವರ್ತುಲಕ್ಕೆ ಸಿಲುಕಿ ಸಂಸ್ಕೃತಿ ನಾಶ

ತುಮಕೂರು
   
     ಜಾಗತೀಕರಣದ ವರ್ತುಲದಲ್ಲಿ ಸಿಲುಕಿ ನಮ್ಮ ಜಾನಪದ ಸಂಸ್ಕೃತಿ ನಾಶವಾಗುತ್ತಿದೆ. ಇದನ್ನು ನಾಶವಾಗಲು ಬಿಡಬಾರದು ಎಂದು ತುಮಕೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಗಂಗಾನಾಯಕ್ ಕರೆ ನೀಡಿದರು.
 
        ತುಮಕೂರು ವಿ.ವಿ.ಯ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಂಸ್ಕೃತಿ -2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ತುಂಬಾ ಹಿಂದಿನಿಂದಲೂ ನಮ್ಮ ಸಂಸ್ಕೃತಿಯನ್ನು ಬೇರೂರಿ ಬಂದಿದೆ. ಅತ್ಯಂತ ವಿಶಿಷ್ಟ್ಯತೆ ಮತ್ತು ಹೆಗ್ಗಳಿಕೆ ಇದಕ್ಕಿದೆ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣದ ವ್ಯವಸ್ಥೆಯೊಳಗೆ ಇಂತಹ ಜಾನಪದ ಸಂಸ್ಕೃತಿಗಳು ಧಕ್ಕೆಗೆ ಒಳಗಾಗುತ್ತಿವೆ. ಯುವ ಜನತೆ ಇದನ್ನು ಸಂರಕ್ಷಿಸುವತ್ತ ಮುಂದಾಗಬೇಕು ಎಂದು ಕರೆ ನೀಡಿದರು.
 
       ವಿಶ್ವವಿದ್ಯಾಲಯದ ಕಲಾ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯ ಭಾಗವಾದ ವೀಳ್ಯ ನೀಡಿ ವೇದಿಕೆಗೆ ಬರಮಾಡಿಕೊಂಡ ಸಂಸ್ಕೃತಿಯನ್ನು ಶ್ಲಾಘಿಸಿ ಮಾತನಾಡಿದ ಅವರು, ತುಂಬಾ ಹಿಂದಿನಿಂದಲೂ ಬಂದಿರುವ ಕೆಲವು ಸಂಪ್ರದಾಯಗಳಿವು. ನಮ್ಮ ಹಿರಿಯರು ಇಂತಹುಗಳನ್ನು ಪಾಲಿಸಿಕೊಂಡು ಬಂದಿದ್ದರು. ಅವುಗಳನ್ನು ಉಳಿಸಿಬೆಳೆಸುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದರು.
 
      ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ನಾವು ಮಾತ್ರ ಸ್ವಚ್ಛತೆಯ ಬಗ್ಗೆ ಮಾತನಾಡಿದರೆ ಸಾಲದು. ಇತರೆಯವರಿಗೂ ಅದರ ಅರಿವು ಮೂಡಿಸಬೇಕು. ಅಂತಹ ಘನಕಾರ್ಯಕ್ಕೆ ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡಬೇಕು. ಪಠ್ಯ ಚಟುವಟಿಕೆಯಂತೆ ಪಠ್ಯೇತರ ಚಟುವಟಿಕೆಯೂ ಮುಖ್ಯ. ಇದರಿಂದ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
 
       ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ಜಿ.ಸುರೇಶ್ ಮಾತನಾಡಿ ಜಾನಪದ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇವೆಲ್ಲ ಹಾಸುಹೊಕ್ಕಾಗಿವೆ. ಜನಪದ ಕ್ರೀಡೆಗಳಾದ ಕಬಡ್ಡಿ, ಕೋಲಾಟ ಮೊದಲಾದವು ಅತ್ಯಂತ ಪ್ರಾಮುಖ್ಯತೆ ಪಡೆದಿದ್ದವು.
 
     ಇತ್ತೀಚಿನ ದಿನಗಳಲ್ಲಿ ಇಂತಹ ಆಟಗಳು ಕಡಿಮೆಯಾಗುತ್ತಿವೆ. ನಮ್ಮ ಸಂಪ್ರದಾಯದ ಮೂಲ ಬೇರುಗಳಾದ ಜಾನಪದ ಸಂಸ್ಕೃತಿ ಆಚರಣೆಗಳನ್ನು ಉಳಿಸಿ ಬೆಳೆಸುವತ್ತ ವಿದ್ಯಾರ್ಥಿ ಯುವಜನರು ಮುಂದಾಗಬೇಕು. ಅದಕ್ಕಾಗಿ ಇಂತಹ ಚಟುವಟಿಕೆಗಳು ಹೆಚ್ಚು ಸ್ಪೂರ್ತಿ ನೀಡಲಿ ಎಂದು ಆಶಿಸಿದರು.
      ಬಿ.ಕರಿಯಣ್ಣ ಅವರು ಈ ಕಾರ್ಯಕ್ರಮದಲ್ಲಿ ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ವಿದ್ಯಾರ್ಥಿಗಳ ಮೆಚ್ಚುಗೆ ಪಡೆದರು. ಪ್ರಾಂಶುಪಾಲ ಕೆ.ರಾಮಚಂದ್ರಪ್ಪ ಮಾತನಾಡಿ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಗಳಿವೆ. ಅವುಗಳ ಪ್ರದರ್ಶನವಾಗಬೇಕು. ಇಂತಹ ವೇದಿಕೆಗಳು ಸ್ಪೂರ್ತಿಯಾಗಲಿ ಎಂದರು.
 
      ಸಮಾರಂಭದಲ್ಲಿ ಪ್ರೊ.ಪರಮಶಿವಯ್ಯ, ಹರಿಪ್ರಸಾದ್, ಶಿವಣ್ಣ ಬೆಳವಾಡಿ, ವೇಣುಗೋಪಾಲ್, ಡಾ.ರಮೇಶ್ ಸಾಲಿಯಾನ, ಗುಂಡೇಗೌಡ್ರು, ಕುಲಕರ್ಣಿ, ನಾಗರಾಜು ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಹಿತೇಂದ್ರ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಗಮನ ಸೆಳೆದ ವಿದ್ಯಾರ್ಥಿಗಳು:
     ಗ್ರಾಮೀಣ ಜೀವನ ಶೈಲಿಯ ಉಡುಪು ತೊಟ್ಟು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯ ನಂತರ ವಿದ್ಯಾರ್ಥಿಗಳು ಸಂಜೆಯವರೆಗೂ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಹಾಡು, ಕುಣಿತ, ಕೋಲಾಟ ಮೊದಲಾದ ಕಲಾಪ್ರಕಾರಗಳು ವಿದ್ಯಾರ್ಥಿಗಳಿಂದಲೇ ಮೂಡಿಬಂದವು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap