`ಡಿವಿಜಿ ನೆನಪು-72’ರಲ್ಲಿ ಸ್ವಾಮಿ ಜಪಾನಂದಜಿ ಅಭಿಮತ: ಸಂಸ್ಕೃತಿ ಭಾಷಣಕ್ಕಲ್ಲ, ಬದುಕಿನಲ್ಲಿ ಅನುಷ್ಠಾನಕ್ಕೆ

ತುಮಕೂರು

       ದಿನವೂ ನಾವು ಸಂಸ್ಕತಿ ಎಂಬ ಶಬ್ದವನ್ನು ಪುಂಖಾನುಪುಂಖವಾಗಿ ಕೇಳುತ್ತಲೇ ಇರುತ್ತೇವೆ. ಆದರೆ ಸಂಸ್ಕತಿ ಎಂಬುದು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಬಾರದು, ಅದು ಬದುಕಿನಲ್ಲಿ ಅನುಷ್ಠಾನಕ್ಕೆ ಬರಬೇಕು ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿ ಅವರು ಪ್ರತಿಪಾದಿಸಿದರು.

      ತುಮಕೂರು ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಶುಕ್ರವಾರ ಅ.26 ರಂದು ಸಂಜೆ ಏರ್ಪಟ್ಟಿದ್ದ “ಡಿವಿಜಿ ನೆನಪು” ಮಾಸಿಕ ಉಪನ್ಯಾಸ ಮಾಲಿಕೆಯ 72 ನೇ ತಿಂಗಳಿನ ಕಾರ್ಯಕ್ರಮದಲ್ಲಿ ಅವರು “ಡಿವಿಜಿ ಚಿಂತನೆಯಲ್ಲಿ ಸಂಸ್ಕತಿ” ಎಂಬ ವಿಷಯವಾಗಿ ಮಾತನಾಡುತ್ತಿದ್ದರು.

       ವೇದ ಪಾರಾಯಣ, ಪೂಜೆ ಮಾಡುವುದು, ವೇಷಭೂಷಣಗಳನ್ನಷ್ಟೇ ಸಂಸ್ಕತಿ ಎನ್ನಲಾಗದು. ಇದು ಸಂಸ್ಕತಿಯ ಒಂದು ಅಂಶವಾಗಿರಬಹುದು. ಆದರೆ ಸಂಸ್ಕತಿ ಎಂಬುದು ಇವುಗಳನ್ನು ಮೀರಿದ ಸಂಸ್ಕಾರ. ಅದೊಂದು ಆತ್ಮಸಂಸ್ಕಾರ. ಆಂತರ್ಯದಿಂದ ಹೊರಹೊಮ್ಮುವ ಸೊಬಗು. ಇದನ್ನೇ ಡಿವಿಜಿಯವರು ತಾವು ರಚಿಸಿರುವ “ಸಂಸ್ಕತಿ” ಕೃತಿಯಲ್ಲಿ ಸಂಸ್ಕತಿವಂತನನ್ನು ಉದ್ದೇಶಿಸಿ “ವಿಶ್ವವಿಶಾಲಜೀವಿ” ಎಂಬ ಮನೋಜ್ಞ ಪದವನ್ನು ಪ್ರಯೋಗಿಸಿದ್ದಾರೆ. ಮನುಷ್ಯ ಸಂಕುಚಿತತೆ ಮತ್ತು ಸ್ವಾರ್ಥವನ್ನು ತೊರೆದು ಮನೋಬುದ್ಧಿಗಳನ್ನು ವಿಶಾಲಗೊಳಿಸಿಕೊಳ್ಳಬೇಕೆಂಬುದು ಹಾಗೂ ಆ ಮೂಲಕ ವಿಶ್ವವನ್ನೇ ಆವರಿಸಬೇಕೆಂಬುದು ಡಿವಿಜಿಯವರ ಆಶಯವಾಗಿದೆ ಎಂದು ಅವರು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.

 ರಾಜಕಾರಣಿಗಳಿಗೆ ಪಠ್ಯ

      ಡಿವಿಜಿಯವರು ಬರೆದಿರುವ “ಸಂಸ್ಕತಿ” ಪುಸ್ತಕವು ಸಂಸ್ಕತಿಯ ಅರಿವಿಗೊಂದು ಪಠ್ಯದಂತಿದೆ. ನಮ್ಮನ್ನಾಳುವ ಈಗಿನ ರಾಜಕಾರಣಿಗಳಿಗಂತೂ ಇದು ಪಠ್ಯವೇ ಆಗಬೇಕಾಗಿದೆ. ದೇಶದ ಅಭಿವೃದ್ಧಿಯು ಬಾಂಬೆ ಸ್ಟಾಕ್ ಎಕ್ಸ್‍ಚೇಂಜ್‍ನಿಂದ ಸಾಧ್ಯವಿಲ್ಲ. ಅದು ಈ ದೇಶದ ಸಂಸ್ಕತಿಯಿಂದ ಹಾಗೂ ದೈನಂದಿನ ಜೀವನದಲ್ಲಿ ಅದನ್ನು ಅನುಷ್ಠಾನಗೊಳಿಸುವುದರಿಂದ ಮಾತ್ರ ಸಾಧ್ಯ ಎಂದು ಸ್ವಾಮೀಜಿ ಒತ್ತಿ ಹೇಳಿದರು.

      ನಮ್ಮ ಯುವಪೀಳಿಗೆಯ ವ್ಯಕ್ತಿತ್ವ ವಿಕಸನಕ್ಕೆ ನಾವಿಂದು ಗಮನವನ್ನೇ ಕೊಡುತ್ತಿಲ್ಲ. ಈಗಿನ ಪೀಳಿಗೆಗೆ ನಮ್ಮ ಸಂಸ್ಕತಿ ಮತ್ತು ಪರಂಪರೆಯ ಅರಿವೇ ಇಲ್ಲದಂತಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ ಶ್ರೀ ಸ್ವಾಮಿ ಜಪಾನಂದಜಿ ಅವರು, ನಮ್ಮ ಯುವಜನರಿಗೆ ಸಂಸ್ಕತಿಯ ಅರಿವು ಮೂಡಿಸದಿದ್ದರೆ ಸಮಾಜ ಛಿದ್ರವಾಗುತ್ತದೆ ಎಂದು ಎಚ್ಚರಿಸಿದರು.

 ಇಂಗ್ಲಿಷ್ ಕೃತಿ ಬಿಡುಗಡೆ

        ಡಿವಿಜಿ ವಿರಚಿತ “ಸಂಸ್ಕತಿ” ಕೃತಿಯನ್ನು ಎಲ್.ಎಸ್.ಶೇಷಗಿರಿರಾವ್ ಅವರು ಇಂಗ್ಲಿಷ್‍ಗೆ ಅನುವಾದಿಸಿದ್ದು ಅದನ್ನು ಮಂಗಳೂರಿನ ಡಿವಿಜಿ ಬಳಗ ಪ್ರಕಟಿಸಿದ್ದು, ಸದರಿ ಕೃತಿಯನ್ನು ಮುಖ್ಯಅತಿಥಿಗಳಾಗಿದ್ದ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರು ಬಿಡುಗಡೆಗೊಳಿಸಿದರು. ತಮ್ಮ ಮನೆಯಲ್ಲಿ ಹಾಗೂ ಆರ್.ಎಸ್.ಎಸ್. ನೀಡಿದ ಸಂಸ್ಕಾರದ ಜೊತೆಗೆ ಡಿವಿಜಿಯವರ ಜೀವನ ಹಾಗೂ ಸಾಹಿತ್ಯವೂ ತಮಗೆ ಪ್ರೇರಣಾದಾಯಕವಾಗಿದೆ ಎನ್ನುತ್ತ, ತುಮಕೂರಿನಲ್ಲಿ ಸತತ 6 ವರ್ಷಗಳಿಂದ ಪ್ರತಿ ತಿಂಗಳೂ ಇಂತಹುದೊಂದು ಕಾರ್ಯಕ್ರಮ ನಡೆಯುತ್ತಿರುವುದು ಪ್ರಶಂಸಾರ್ಹವಾಗಿದೆ ಎಂದು ಹೇಳಿದರು.

ಸಮಯ ಮೀಸಲಿಡಬೇಕು

        ಮತ್ತೋರ್ವ ಮುಖ್ಯಅತಿಥಿಗಳಾಗಿದ್ದ ಬೆಂಗಳೂರಿನ ಸೋನಾ ಗ್ರೂಪ್ಸ್ ಕಂಪನಿಯ ಛೇರ್ಮನ್ ಹಾಗೂ ಅಖಿಲ ಭರತ ಕೂಟ ಮಹಾಜಗತ್ತಿನ ಅಧ್ಯಕ್ಷ ಯಜ್ಞನಾರಾಯಣ ಕಮ್ಮಾಜೆ ಅವರು ಮಾತನಾಡುತ್ತ, ನಾವಿಂದು ಒತ್ತಡದ ಬದುಕಿನಲ್ಲಿ ಮುಳುಗಿಹೋಗುವ ಮೂಲಕ ಸಮಯವೇ ಇಲ್ಲವೆಂಬ ಭ್ರಮೆಯಲ್ಲಿ ನಮ್ಮ ಮೂಲ ಸಂಸ್ಕøತಿಯನ್ನು ಕಡೆಗಣಿಸುತ್ತಿದ್ದೇವೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕತಿಯ ಪರಿಚಯವನ್ನೇ ಮಾಡಿಸಲಾಗದ ಸ್ಥಿತಿ ತಲುಪಿದ್ದೇವೆ. ಇದು ಸರಿಯಲ್ಲ. ದಿನದ 24 ಗಂಟೆಗಳಲ್ಲಿ ಒಂದೆರಡು ಗಂಟೆಗಳನ್ನಾದರೂ ನಮ್ಮ ಸಂಸ್ಕತಿಯ ಅರಿವಿಗೆ ಮೀಸಲಿಡಬೇಕಾದ ಅಗತ್ಯವಿದೆ ಎಂದರು. ಸರಸ್ ಫೌಂಡೇಷನ್ ಅಧ್ಯಕ್ಷ ಆರ್.ವಿಶ್ವನಾಥನ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಆರ್.ಎಸ್.ಅಯ್ಯರ್ ಸ್ವಾಗತಿಸಿ, ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link