ಮತದಾನ ಜಾಗೃತಿ ಸೈಕಲ್ ಜಾಥಾ

ಚಿತ್ರದುರ್ಗ :

       ಜಿಲ್ಲೆಯಲ್ಲಿ 18 ವರ್ಷ ವಯಸ್ಸು ಪೂರ್ಣಗೊಳಿಸಿದ ಎಲ್ಲಾ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಹಾಗೂ ಕುಟುಂಬದಲ್ಲಿನ ಎಲ್ಲ ಮತದಾರರಿಗೂ ತಪ್ಪದೆ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಶಾಲಾ ಮಕ್ಕಳಿಗೆ ಹೇಳಿದರು.

        ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಸ್ವೀಪ್ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಮತದಾನ ಜಾಗೃತಿ ಅಭಿಯಾನದಡಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಸೈಕಲ್ ಜಾಥಕ್ಕೆ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

        ಪ್ರತಿಯೊಬ್ಬ ಮತದಾರನು ಮತದಾನದಿಂದ ದೂರ ಉಳಿಯಬಾರದು. ಕಡ್ಡಾಯವಾಗಿ ಮತ ಚಲಾಯಿಸುವಂತೆ ಪಾಲಕರು, ಪೋಷಕರಿಗೆ ಜಾಗೃತಿ ಮೂಡಿಸಬೇಕು. ಭವಿಷ್ಯದಲ್ಲಿ ಮತದಾರರಾಗುವ ನೀವು ಕೂಡ ಮತದ ಮೌಲ್ಯ ತಿಳಿದು ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಗೌರವಿಸಬೇಕು ಎಂದು ಅವರು ಹೇಳಿದರು.

       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮುಂದಿನ ದಿನಗಳಲ್ಲಿ ಮತದಾರರಾಗುವರು ನೀವು, ಹಾಗಾಗಿ ನಿಮ್ಮ ಮನೆಯಲ್ಲಿರುವ, ಕುಟುಂಬದ ಹಾಗೂ ನೆರೆಹೊರೆಯ ಎಲ್ಲಾ ಅರ್ಹ ಮತದಾರರನ್ನು ತಪ್ಪದೆ ಮತ ಚಲಾಯಿಸುವಂತೆ ಜಾಗೃತಿಗೊಳಿಸಿ, ಪ್ರೇರೇಪಿಸಬೇಕು ಎಂದು ಹೇಳಿದರು.

     ‘ಓಟ್ ಮಾಡಿದವನೆ ಹೀರೋ ಓಟ್ ಮಾಡಿದವಳೆ ಹೀರೋಯಿನ್’, ‘ಓಟ್ ಮಾಡದವನೆ ಜೀರೋ ಓಟ್ ಮಾಡದವಳೆ ಜೀರೋಯಿನ್’ ಎಂಬ ಘೋಷ ವಾಕ್ಯಗಳು ಮಕ್ಕಳಿಂದ ಕೇಳಿಬಂದವು.

       ನಗರದ ವಿವಿಧ ಶಾಲೆಗಳ ಮಕ್ಕಳು ಸೈಕಲ್ ಜಾಥದಲ್ಲಿ ಪಾಲ್ಗೊಂಡು ‘ನಿಮ್ಮ ನಡೆ ಮತದಾನದ ಕಡೆ’, ‘ನಿಮ್ಮ ಮತ ನಿಮ್ಮ ಹಕ್ಕು’, ‘ಮತದಾನ ನಿಮ್ಮ ಹಕ್ಕು’, ‘ಸೂಕ್ತ ವ್ಯಕ್ತಿಯ ಆಯ್ಕೆ ಪ್ರಜಾಪ್ರಭುತ್ವದ ಉಳಿವು’ ಹಾಗೂ ‘ಜವಾಬ್ದಾರಿಯಿಂದ ಯೋಚಿಸಿ ಮತ ಚಲಾಯಿಸಿ’ ಎಂಬಿತ್ಯಾದಿ ಘೋಷವಾಕ್ಯಗಳನ್ನು ತಮ್ಮ ಸೈಕಲ್‍ಗಳಿಗೆ ಪ್ಲೇಬೋರ್ಡ್‍ಗಳಿಗೆ ಅಳವಡಿಸಿಕೊಂಡು, ಜಿಲ್ಲಾಧಿಕಾರಿಗಳ ಕಛೇರಿಯಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಘೋಷಣೆಯನ್ನು ಹಾಕುತ್ತ ಮತದಾನದ ಜಾಗೃತಿ ಮೂಡಿಸಿದರು. ಮತದಾನ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಜೆ. ಆಂಥೋನಿ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಬಿ.ಆರ್.ಸಿ ಈಶ್ವರಪ್ಪ.ಟಿ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link