ಚಿತ್ರದುರ್ಗ:
ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆಗನುಗುಣವಾಗಿ ಶೇ.7.5 ರಷ್ಟು ಮೀಸಲಾತಿ ನೀಡುವ ಸಂಬಂಧ ಹೊಸ ಸಮಿತಿ ರಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಲ್ಲಿ ಮನವಿ ಮಾಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ನಿಯೋಗ ಭೇಟಿ ಮಾಡಿ ವಾಲ್ಮೀಕಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಾಗ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಮೀಸಲಾತಿ ನೀಡಬೇಕೆಂಬುದು ನಿಮ್ಮ ಬಹುದಿನಗಳ ಬೇಡಿಕೆಯಾಗಿರುವುದರಿಂದ ಶೀಘ್ರದಲ್ಲಿಯೇ ಹೊಸ ಸಮಿತಿಯನ್ನು ರಚನೆ ಮಾಡುವುದಾಗಿ ಭರವಸೆ ನೀಡಿ ಸಮಿತಿ ನೀಡುವ ವರದಿಯ ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.
ವಾಲ್ಮೀಕಿ ಸಮುದಾಯಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮೀಸಲಾತಿ ಕಲ್ಪಿಸಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಶೇ.50 ಕ್ಕಿಂತ ಹೆಚ್ಚು ಮೀಸಲಾತಿ ನೀಡಬಾರದೆಂಬ ನಿರ್ದೇಶನವಿದೆ. ಇತರೆ ರಾಜ್ಯಗಳಲ್ಲಿ ಸಮುದಾಯದ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ ಎನ್ನುವುದನ್ನು ಉದಾಹರಿಸಿದರು.
ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ಶೇ.7.5 ರಷ್ಟು ಮೀಸಲಾತಿ ನೀಡಬೇಕೆಂಬುದು ನಮ್ಮ ಸಮುದಾಯದ ಐದು ದಶಕಗಳ ಬೇಡಿಕೆಯಾಗಿದೆ. ರಾಜ್ಯದಲ್ಲಿ ಅಂದಾಜು 60 ರಿಂದ 70 ಲಕ್ಷದಷ್ಟು ಜನಸಂಖ್ಯೆಯಿದ್ದೇವೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವುದರಿಂದ ನಮಗೆ ಶೇ.7.5 ರಷ್ಟು ಮೀಸಲಾತಿ ನೀಡಲೇಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ಬಿಜೆಪಿ.ಯನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆ ನಡೆಸಿ ಹಿಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಶೇ.7.5 ರಷ್ಟು ಮೀಸಲಾತಿಗಾಗಿ ಒತ್ತಡ ಹೇರಲಾಗಿತ್ತು ಎಂದು ಮುಖ್ಯಮಂತ್ರಿ ಗಮನಕ್ಕೆ ತಂದರು.ಚಿತ್ರದುರ್ಗ ಮೇದಾರ ಕೇತೇಶ್ವರ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ನಿಯೋಗದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
