ಗೃಹ ಮಂತ್ರಿ ದಬ್ಬಾಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ದಾವಣಗೆರೆ:

       ಮೈತ್ರಿ ಸರ್ಕಾರದ ವಿರುದ್ಧದ ಧ್ವನಿ ಅಡಗಿಸಲು ಪೊಲೀಸ್ ಯಂತ್ರಾಂಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ದಬ್ಬಾಳಿಕೆ ವಿರೋಧಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

       ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ಬಿಜೆಪಿ ಕಾರ್ಯಕರ್ತರು, ಎಸಿ ಕಚೇರಿಗೆ ತೆರಳಿ ಪೊಲೀಸ್ ಯಂತ್ರಾಂಗವನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ಗೃಹ ಮಂತ್ರಿ ಎಂ.ಬಿ. ಪಾಟೀಲ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ ಮುಖಂಡರು, ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು, ಪೊಲೀಸರನ್ನು ಬಳಸಿಕೊಂಡು ಗೃಹ ಸಚಿವ ಎಂ.ಬಿ.ಪಾಟೀಲ್ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ರಾಜ್ಯದ ರಾಜಕೀಯ ಎದುರಾಳಿಗಳುನ್ನು, ರಾಜಕೀಯ ನಾಯಕರನ್ನು ಹತ್ತಿಕ್ಕುವ ಸೇಡಿನ ಕ್ರಮವನ್ನು ಅನುಸರಿಸುತ್ತಿದೆ. ಈ ಬಗ್ಗೆ ಸಾಕಷ್ಟು ದೂರು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವಂತೆ ಶಿವಮೊಗ್ಗ ಜಿಲ್ಲೆಯ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕರೆ ನೀಡಿದ್ದರು. ಅಲ್ಲದೇ, ಜೆಡಿಎಸ್ ಶಾಸಕ ನಾರಾಯಣಗೌಡ ಚಿತ್ರನಟರಾದ ದರ್ಶನ್ ತೂಗುದೀಪ, ಯಶ್‍ಗೆ ಬೆದರಿಕೆ ಹಾಕಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವಾಗಲೀ, ಪೊಲೀಸ್ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಳ್ಳದೇ, ಪಕ್ಷಪಾತ ಮಾಡುತ್ತಿದೆ ಎಂದು ದೂರಿದರು.

       ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು ಮರುಕಳಿಸುವಂತಹ ಅನೇಕ ಪ್ರಕರಣಗಳು ಮೈತ್ರಿ ಆಳ್ವಿಕೆಯಲ್ಲಿ ನಡೆಯುತ್ತಿದ್ದು, ಜವಾಬ್ಧಾರಿಯುತ ಮುಖ್ಯಮಂತ್ರಿ, ಗೃಹ ಸಚಿವರು ತಮ್ಮ ಮೈತ್ರಿ ಪಕ್ಷಗಳ ನಾಯಕರ ರಕ್ಷಣೆಗೆ ಮಾತ್ರ ಮುಂದಾಗಿದ್ದಾರೆ. ಅಧಿಕಾರ ದಾಹ ಹಾಗೂ ಪುತ್ರನ ಮೇಲಿನ ವ್ಯಾಮೋಹ, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಸಿಎಂ ಕುಮಾರಸ್ವಾಮಿ ಮಾಧ್ಯಮಗಳನ್ನು ದೂಷಿಸಿರುವುದು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭಕ್ಕೆ ಮಾಡಿರುವ ಅಪಚಾರವಾಗಿದೆ ಎಂದು ಕಿಡಿಕಾರಿದರು.

        ರಾಜ್ಯ ಸರ್ಕಾರದ ಧೋರಣೆಯು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ. ಎಲ್ಲರ ಹಕ್ಕು, ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ಧಾರಿ ನಿಭಾಯಿಸುವಂತೆ ಮೈತ್ರಿ ಸರ್ಕಾರಕ್ಕೆ ತಕ್ಷಣವೇ ರಾಜ್ಯಪಾಲರು ನಿರ್ದೇಶನ ನೀಡಬೇಕು ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲರ ದಬ್ಬಾಳಿಕೆಗೆ ಕಡಿವಾಣ ಹಾಕುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎನ್.ಶಿವಕುಮಾರ, ಬಿ.ರಮೇಶ ನಾಯ್ಕ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ, ಮುಖಂಡರಾದ ಎಲ್.ಡಿ.ಗೋಣೆಪ್ಪ, ಶಿವನಗೌಡ ಪಾಟೀಲ್, ದೇವಿರಮ್ಮ ರಾಮಚಂದ್ರ ನಾಯ್ಕ, ಸವಿತಾ ರವಿಕುಮಾರ, ಚೇತು ಬಾಯಿ, ಟಿಂಕರ್ ಮಂಜಣ್ಣ, ಎಂ.ಮನು ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link