ಶಿರಾ
ಹೈನುಗಾರಿಕೆಯು ರೈತ ಕುಟುಂಬಗಳಿಗೆ ಆಸರೆಯಾಗಿದ್ದು, ಜಾನುವಾರುಗಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಸರ್ಕಾರ ಪಶು ಆಸ್ಪತ್ರೆ ಸ್ಥಾಪನೆ ಮಾಡಿ ಪಶುಗಳ ಹಿತ ಕಾಯುತ್ತಿದ್ದು, ಹೈನುಗಾರಿಕೆಯ ಅಭಿವೃದ್ಧಿಯತ್ತ ರೈತರು ಕ್ರಿಯಾಶೀಲಗೊಳ್ಳಬೇಕಿದೆ ಎಂದು ಶಾಸಕ ಬಿ.ಸತ್ಯನಾರಾಯಣ ಹೇಳಿದರು.
ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಶು ಆಸ್ಪತ್ರೆಗೆ ಮಂಗಳವಾರ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಯಾದಲಡಕು, ಗೋಪಿಕುಂಟೆ, ಕ್ಯಾದಿಗುಂಟೆ, ವೀರಬೊಮ್ಮನಹಳ್ಳಿ ಗ್ರಾಮಗಳಲ್ಲಿ ರೈತ ಕುಟುಂಬಗಳು ಹೆಚ್ಚಾಗಿರುವ ಕಾರಣ ಪಶುಗಳ ಸಂಖ್ಯೆ ಹೆಚ್ಚಾಗಿದೆ. ಮಳೆಯಿಲ್ಲದೆ ಬರ ಆವರಿಸಿದ್ದರೂ ಸಹ ಹಾಲಿನ ಉತ್ಪಾದನೆ ರೈತರಿಗೆ ಬದುಕಿಗೆ ಭದ್ರ ಬುನಾದಿ ಹಾಕಿದ್ದು, ಆದಾಯ ತರುವಂತಹ ಹಸುಗಳ ಆರೋಗ್ಯ ತಪಾಸಣೆಗೆ ಈ ಆಸ್ಪತ್ರೆ ಅನುಕೂಲವಾಗಲಿದೆ ಎಂದರು.
ಅರ್ಹರಿಗೆ ನಿವೇಶನ :
ಈ ಹಿಂದೆ ಇದ್ದ ಸರ್ಕಾರ ಯಾವುದೇ ಜನಪರ ಯೋಜನೆಗಳ ಬಗ್ಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಶಾಸಕ ಬಿ.ಸತ್ಯನಾರಾಯಣ, ಶಿರಾ ತಾಲ್ಲೂಕಿನಲ್ಲಿ ಬಡ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸಿದ್ದಗೊಂಡಿದ್ದು, 93 ಲೇಜೌಟ್‍ಗಳಲ್ಲಿ 8500 ನಿವೇಶನ ಸಿದ್ದವಾಗಿವೆ. ಜನವರಿ ಅಥವಾ ಫೆಬ್ರ್ರುವರಿ ತಿಂಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ಈಗಾಗಲೇ ಗ್ರಾಮ ಪಂಚಾಯತಿಗಳಲ್ಲಿ ನಡೆಸುವ ಗ್ರಾಮ ಸಭೆಯಲ್ಲಿ ಅರ್ಹ ವ್ಯಕ್ತಿಗೆ ನಿವೇಶನ ದೊರಕಿದರೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಉಳ್ಳವರಿಗೆ ನಿವೇಶನ ಹಂಚಿಕೆಯಾಗಿವೆ ಎಂಬ ದೂರು ಕೇಳಿ ಬಂದರೆ, ಅಂತಹ ಗ್ರಾಮಗಳಲ್ಲಿ ಮರು ಗ್ರಾಮ ಸಭೆ ಮಾಡಿ ನಿವೇಶನ ಹಂಚಿಕೆ ಮಾಡಲಾಗುವುದೆಂದರು.
ನಾದೂರು ಜಿಲ್ಲಾ ಪಂಚಾಯತಿ ಸದಸ್ಯೆ ಗಿರಿಜಮ್ಮಶ್ರೀರಂಗಯಾದವ್, ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮಪಾಂಡುರಂಗಯ್ಯ, ಉಪಾಧ್ಯಕ್ಷೆ ಗುರುಶಾಂತಮ್ಮ, ಸದಸ್ಯರಾದ ಈಶ್ವರಯ್ಯ, ವಿಮಲಮ್ಮ, ಜಗದೀಶ್, ರಾಮದಾಸ್, ಜೆಡಿಎಸ್ ಮುಖಂಡರಾದ ಕೆ.ಎಲ್.ಮಹಾದೇವಪ್ಪ, ಟಿ.ರಾಮಚಂದ್ರಪ್ಪ, ರುದ್ರಪ್ಪ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರಂಗನಾಥ್, ಪಶು ವೈದ್ಯರಾದ ಡಾ. ದಿನೇಶ್, ಡಾ.ಸುಪ್ರಿಯಾ, ಡಾ.ಗಂಗಾಧರ್, ಡಾ.ಮಹಾದೇವಪ್ಪ, ಪಿಡಿಓ ಬಿ.ಕೆ.ತಿಪ್ಪೇಸ್ವಾಮಿ, ನಿರ್ಮಿತಿ ಕೇಂದ್ರದ ಆಭಿಯಂತರ ಪುಟ್ಟಲಿಂಗಯ್ಯ, ಭೈರಪ್ಪ, ಜೆಡಿಎಸ್ ಯುವ ಮುಖಂಡ ಎಚ್.ಎಸ್. ಪ್ರಕಾಶ್, ಹನುಮಂತರಾಯ, ನಿಜಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
