ಕೊರಟಗೆರೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಶಿಕ್ಷಣ ಇಲಾಖೆಯ ಪಠ್ಯಪುಸ್ತಕದಲ್ಲಿ ಅವಹೇಳನ ಮತ್ತು ಚಾರಿತ್ರ್ಯ ವಧೆ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಗಳು ಶಿಕ್ಷಣ ಸಚಿವ ಮತ್ತು ಕಾರ್ಯದರ್ಶಿ ವಿರುದ್ದ ಬುಧವಾರ ಪ್ರತಿಭಟನೆ ನಡೆಸಿದರು.
ಶಿಕ್ಷಣ ಇಲಾಖೆಯು ಶಿಕ್ಷಕರ ಮತ್ತು ಮಕ್ಕಳ ಮನಸ್ಸಿನಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ದೊಡ್ಡಗೊಂದಲವನ್ನು ಸೃಷ್ಟಿ ಮಾಡಿದೆ. ಅಂಬೇಡ್ಕರ್ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆ ಹುಟ್ಟಿಸಲು ಮಾಡಿರುವ ಕುತಂತ್ರ ಮತ್ತು ದೇಶದ ಇತಿಹಾಸವನ್ನು ತಿರುಚುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ, ಅಂಬೇಡ್ಕರ್ ಒಬ್ಬರೆ ಸಂವಿಧಾನ ರಚನೆ ಮಾಡಿಲ್ಲ ಎಂದು ಶಿಕ್ಷಣ ಇಲಾಖೆ ಪಠ್ಯಪುಸ್ತಕದಲ್ಲಿ ನಮೂದಿಸಿದ್ದಾರೆ. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಅಡಿಯಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ತಕ್ಷಣ ರಾಜಿನಾಮೆ ನೀಡಬೇಕು ಎಂದು ಆಗ್ರಹ ಮಾಡಿದರು.
ಪಪಂ ಸದಸ್ಯ ಕಲೀಂವುಲ್ಲಾ ಮಾತನಾಡಿ ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನದ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನಾಯಕರು ಸರಕಾರ ನಡೆಸುತ್ತಿದ್ದಾರೆ. ಸಂವಿಧಾನಕ್ಕೆ ಬೆಲೆ ಕೊಟ್ಟು ಸುಪ್ರೀಂನ ಅಯೋಧ್ಯೆ ಕುರಿತ ಆದೇಶಕ್ಕೆ ನಾವೆಲ್ಲರೂ ಗೌರವ ನೀಡಿದ್ದೇವೆ. ಸಂವಿಧಾನದ ಒಂದೇ ಒಂದು ಅಕ್ಷರವನ್ನು ತಿರುಚಲು ಪ್ರಯತ್ನ ಪಟ್ಟರೆ ಅದಕ್ಕೆ ತಕ್ಕ ಪರಿಣಾಮ ಎದುರಿಸಲು ಸಿದ್ದರಿರಬೇಕು ಎಂದು ತಿಳಿಸಿದರು.
ಡಿಎಸ್‍ಎಸ್ ಜಿಲ್ಲಾ ಸಂಚಾಲಕ ರಾಮಾಂಜನೇಯ ಮಾತನಾಡಿ, ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಹೆಸರಿನ ಬಗ್ಗೆ ತಪ್ಪು ಭಾವನೆ ಮೂಡಿಸಿರುವ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯನ್ನು ತಕ್ಷಣ ಅಮಾನತು ಮಾಡಬೇಕು. ಸರಕಾರದ ಜವಾಬ್ದಾರಿ ಇರುವ ಶಿಕ್ಷಣ ಸಚಿವರು ತಕ್ಷಣ ರಾಜಿನಾಮೆ ನೀಡಿ ತಮ್ಮ ಮನೆಯ ಕಡೆಗೆ ಹೋಗಬೇಕು ಎಂದು ಆಗ್ರಹ ಮಾಡಿದರು.
ಪ್ರತಿಭಟನೆಯಲ್ಲಿ ಪಪಂ ಸದಸ್ಯ ನಟರಾಜ್, ಮಾಜಿ ಅಧ್ಯಕ್ಷ ನಯಾಜ್‍ಅಹಮ್ಮದ್, ದಲಿತ ಮುಖಂಡರಾದ ರಾಮಾಂಜಿನಪ್ಪ ತೊಂಡೋಟಿ, ನಾಗೇಶ್, ವೀರಕ್ಯಾತರಾಯ, ಜಯರಾಂ, ಮೂರ್ತಿ, ಚೇತನ ಕುಮಾರ್, ವಜೀರ ಅಹಮ್ಮದ್, ತಿಪ್ಪರಾಜು, ವೀರಣ್ಣಗೌಡ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ