ತಿಪಟೂರು
ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆ ತಡೆಗೆ ಕಠಿಣ ಕಾನೂನು ರೂಪಿಸಬೇಕು. ಭಾರತದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಸೌಹಾರ್ದ ತಿಪಟೂರು ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಬುಧವಾರ ಸಂಜೆ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ನೆರೆದ ಹಲವಾರು ಸಂಘಟನೆಗಳ ಕಾರ್ಯಕರ್ತರು ದೇಶ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರು ಮತ್ತು ದಲಿತ ಮೇಲಿನ ದೌರ್ಜನ್ಯ, ದಬ್ಬಾಳಿಕೆಯನ್ನು ಖಂಡಿಸಿದರು. ಮೇಣದ ಬತ್ತಿ ಹಚ್ಚಿ `ಭವ್ಯ, ಸೌಹಾರ್ದ ಭಾರತಕ್ಕಾಗಿ ನಾವೆಲ್ಲರೂ’ ಎಂಬ ಘೋಷಣೆ ಕೂಗಿದರು.
ದಲಿತ ಮುಖಂಡ ಕುಂದೂರು ತಿಮ್ಮಯ್ಯ ಮಾತನಾಡಿ, ದಲಿತ ಯುವಕನ ಬೆತ್ತಲೆ ಮೆರವಣಿಗೆ ಮತ್ತು ದಲಿತ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಧರ್ಮದ ಅಫೀಮಿನಲ್ಲಿ ದೇಶದ ಹಲವೆಡೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಈ ದೇಶ ಯಾರೊಬ್ಬರ, ಯಾವುದೇ ಧರ್ಮದವರ ಸೊತ್ತಲ್ಲ. ಇಲ್ಲಿ ಬಾಳುತ್ತಿರುವ ಎಲ್ಲರಿಗೂ ಅನ್ನ ನೀಡುತ್ತಿರುವ ಭಾರತ ಎಲ್ಲರಿಗೂ ಪವಿತ್ರ. ಜಾತೀಯತೆ ಮತ್ತು ಧರ್ಮಾಂಧತೆ ಅಪರಾಧವೆಂದು ಸಂವಿಧಾನವೆ ಹೇಳಿದೆ. ಆದರೆ ಸಂವಿಧಾನವನ್ನೆ ಧಿಕ್ಕರಿಸಿ ಮಾತನಾಡುವ ಒಂದು ಗುಂಪು ದೇಶದ ಸಮಗ್ರತೆಗೆ ಧಕ್ಕೆ ತರುತ್ತಿದೆ. ಇದಕ್ಕೆ ಸ್ವಾಭಿಮಾನಿ ಭಾರತೀಯರು ಅವಕಾಶ ನೀಡಬಾರದು ಎಂದರು.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ದಲಿತರು ಮತ್ತು ಮುಸ್ಲಿಮರ ಮೇಲಿನ ಶೋಷಣೆ ಹಾಗೂ ದೌರ್ಜನ್ಯ ಇನ್ನೂ ನಿಂತಿಲ್ಲವೆಂದರೆ ಭಾರತದ ಅಂತಃಸತ್ವಕ್ಕೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ. ಬೀದಿಯಲ್ಲಿ ಘೋಷಿಸಿಕೊಳ್ಳುವ ಪೊಳ್ಳು ರಾಷ್ಟ್ರಪ್ರೇಮಿಗಳಿಗೆ ಮಾತ್ರ ಈ ದೇಶ ಸೇರಿದ್ದಲ್ಲ. ಉಸಿರಿನಲ್ಲೇ ದೇಶಭಕ್ತಿ ತುಂಬಿಕೊಂಡು ಕಾಯಕ ಮಾಡುತ್ತಿರುವ ಬಹುತೇಕ ಸಮುದಾಯಗಳು ಈ ದೇಶಕ್ಕೆ ದೊಡ್ಡ ಶಕ್ತಿ. ಏಕತೆ, ಸಮಗ್ರತೆ ಮತ್ತು ಸಮಾನತೆಗೆ ಧಕ್ಕೆ ತರುವ ಯಾವುದೇ ಘಟನೆಗಳನ್ನು ತೀವ್ರವಾಗಿ ಖಂಡಿಸಬೇಕು ಎಂದು ತಿಳಿಸಿದರು.
ಪ್ರಾಂತ ರೈತ ಸಂಘ ಮುಖಂಡ ಚನ್ನಬಸವಣ್ಣ ಮಾತನಾಡಿ, ಧರ್ಮ ಮತ್ತು ಜಾತಿಗಳ ನಡುವೆ ವಿಷ ಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮೂಲಭೂತವಾದಿಗಳ ಹುನ್ನಾರವನ್ನು ಮೆಟ್ಟಿ ನಿಲ್ಲಬೇಕು ಎಂದರು.ಸೌಹಾರ್ದ ತಿಪಟೂರು ಸಂಘಟನೆ ಮುಖಂಡ ಅಲ್ಲಾ ಬಕಾಶ್ ಮಾತನಾಡಿ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಇಂದಿಗೂ ಮೂರನೇ ದರ್ಜೆ ಪ್ರಜೆಗಳನ್ನಾಗಿ ನೋಡುತ್ತಿರುವ ಮನಸ್ಥಿತಿಗಳಿಗೆ ಪಾಠ ಕಲಿಸಬೇಕು. ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಕರವೇ ವಿಜಯಕುಮಾರ್, ನಾಗತಿಹಳ್ಳಿ ಕೃಷ್ಣಮೂರ್ತಿ, ಲುಕ್ಮಾನ್, ಉಜ್ಜಜ್ಜಿ ರಾಜಣ್ಣ, ಮನೋಹರ್ ಪಟೇಲ್, ಶಫಿಉಲ್ಲಾ ಶರೀಫ್, ಮೊಹಮ್ಮದ್ ಮತ್ತಿತರರು ಮಾತನಾಡಿದರು. ರೈತ ಸಂಘದ ದೇವರಾಜು, ಬಿ.ಟಿ.ಕುಮಾರ್, ಬೌದ್ಧ ಧಮ್ಮ ಪ್ರತಿಷ್ಠಾನದ ಮೋಹನ್ ಸಿಂಗಿ, ಬೆಲೆ ಕಾವಲು ಸಮತಿಯ ಶ್ರೀಕಾಂತ್ ಕೆಳಹಟ್ಟಿ ಮತ್ತಿತರರು ಇದ್ದರು.
ದಲಿತ ಸಂಘರ್ಷ ಸಮಿತಿ, ಜನಸ್ಪಂದನ ಟ್ರಸ್ಟ್, ಡಾ. ಬಿ.ಆರ್. ಅಂಬೇಡ್ಕರ್ ಸೇನೆ, ರಾಜ್ಯ ರೈತ ಸಂಘ, ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಪ್ರಾಂತ ರೈತ ಸಂಘ, ಬೌದ್ಧ ಮಹಾಸಭಾ, ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
