ದಲಿತರು ಬೆಂಕಿ ಹಚ್ಚಿಲ್ಲ, ಬೆಳಕು ಮೂಡಿಸಿದ್ದಾರೆ

ದಾವಣಗೆರೆ :

    ಎಲ್ಲೂ ದಲಿತರು ಬೆಂಕಿ ಹೆಚ್ಚುವ ಕೆಲಸ ಮಾಡಿಲ್ಲ. ಬದಲಿಗೆ, ಬೆಳಕು ಹಾಗೂ ಬೆಳದಿಂಗಳು ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಚ್.ಬಿ.ಕೊಲ್ಕೂರ ತಿಳಿಸಿದರು.

     ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪರಿಷತ್‍ನ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿಗೂ ಸಮಾಜದಲ್ಲಿ ಜಾತಿ, ಕುಲ ಪ್ರಜ್ಞೆ ಹೆಚ್ಚುತ್ತಿದೆ. ಸಮಾಜ ಕಟ್ಟುವವರಿಗಿಂತ ಕೆಡವುವವರು ಮುನ್ನೆಲೆಗೆ ಬರುತ್ತಿದ್ದಾರೆ ಎಂದ ಅವರು, ನಾವು (ದಲಿತರು) ಎಂದೂ ಎಲ್ಲೂ ಬೆಂಕಿ ಹಚ್ಚಿಲ್ಲ. ಬದಲಿಗೆ ಬೆಳಕು ಮೂಡಿಸಿ, ಬೆಳದಿಂಗಳಾಗಿದ್ದೇವೆ ಎಂದರು.

      ಹಿಂದೆಂದಿಗಿಂತಲೂ ಇಂದು ದಲಿತರು ಬರೆಯುವುದು, ಮಾತನಾಡುವುದು ಅನಿವಾರ್ಯವಾಗಿದೆ. ನಮ್ಮ ಕಾವ್ಯದ ಭಾಷೆಗೆ ನಿರ್ಧಿಷ್ಟ ಗೆರೆಗಳಿಲ್ಲ. ದಲಿತ ಕಾವ್ಯ ಸ್ವಾಭಿಮಾನದಿಂದ ಹುಟ್ಟುವಂಥದ್ದಾಗಿದೆ. ಒಡಲ ನೋವಿನಿಂದ ಮೂಡಿದ ಕಾವ್ಯ ಮಾತ್ರ ಶ್ರೇಷ್ಠ ಕಾವ್ಯ ಆಗಲಬಲ್ಲದು ಎಂದು ನುಡಿದರು.

      ಸಾಹಿತ್ಯ ರಚನೆಗೆ ಒಂದು ಆಯಾಮ ಹಾಕಿಕೊಂಡು, ಸಮಾಜ ಪರಿವರ್ತನೆಗೆ ಅತ್ಯವಶ್ಯವಾಗಿ ಬೇಕಾಗಿರುವ ಸಾಹಿತ್ಯ ರಚಿಸುವ ಮೂಲಕ ಚಳವಳಿಯ ಹೆಜ್ಜೆಯ ಮೇಲೆ ಹೆಜ್ಜೆ ಜೋಡಿಸಬೇಕಾದ ಜವಾಬ್ದಾರಿ ದಲಿತ ಸಾಹಿತಿಗಳ ಮೇಲಿದೆ. ಸಾಮಾಜಿಕ ಸ್ವಾತಂತ್ರ್ಯ ಹಾಗೂ ಆರ್ಥಿಕ ಸಬಲತೆಯನ್ನು ಗುರಿಯನ್ನಾಗಿಸಿಕೊಂಡು, ಸಮಾಜದ ಪರಿವರ್ತನೆಗೆ ದಲಿತ ಸಾಹಿತ್ಯ ಪರಿಷತ್ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

     ಆಶಯ ನುಡಿಗಳನ್ನಾಡಿದ ಪರಿಷತ್‍ನ ಉಪಾಧ್ಯಕ್ಷ ಡಾ.ಎಂ.ವೈ.ಭಜಂತ್ರಿ, ಪರಿಷತ್ 25 ವರ್ಷಗಳ ಕಾಲ ಬರಿಗಾಲ ನಡಿಗೆಯಲ್ಲಿ ನಡೆದಿರುವ ಬಿಸಲು, ಬೆಳದಿಂಗಳನ್ನು ಉಂಡಿರುವ ಸಂಭ್ರಮದಲ್ಲಿ ನಾವಿದ್ದೇವೆ. ಬುದ್ಧ, ಬಸವ, ಅಂಬೇಡ್ಕರ್ ಅವರುಗಳ ಹೆಜ್ಜೆಯ ಒಳಗೇ ನಮ್ಮ ಬದುಕು ಅರಳುತ್ತಿದೆ. ಸಮಾಜದಲ್ಲಿ ಯಾರೂ ಶೋಷಣೆಗೆ ಒಳಗಾಗಿದ್ದಾರೋ ಅವರಿಗೆ ನಮ್ಮ ಮಾತು ಹಾಗೂ ಸಾಹಿತ್ಯವನ್ನು ತಲುಪಿಸುವ ಕೆಲಸವನ್ನು ಪರಿಷತ್ ಮಾಡಬೇಕಾಗಿದೆ ಎಂದರು.

      ಹೊರ ಜಗತ್ತಿಗೆ ಕಾಣದಂತೆ ಮುಚ್ಚಿಕೊಂಡಿರುವ ನಮ್ಮ ತಳಮಳ, ತುಮುಲವನ್ನು ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸಬೇಕಾಗಿದ್ದು, ನಮ್ಮದು ಉಂಡು ಆರಾಮಾಗಿ ಬೆಳೆದಿರುವ ಕಾವ್ಯವಲ್ಲ. ನೋವಿನ ಕಾವ್ಯವಾಗಿದೆ. ನೋವು, ಸಂಕಟ ಇಲ್ಲದೇ ಹುಟ್ಟುವ ಕಾವ್ಯದಿಂದ ಯಾವುದೇ ಪ್ರಯೋಜನಗಳಿಲ್ಲ. ಆದರೆ, ಹೆರಿಗೆಯ ಪ್ರಸವದಂತೆ ನೋವುಂಡು ಹುಟ್ಟುವ ಕಾವ್ಯ ಹೊಸ ಹುಟ್ಟಿಗೆ ಕಾರಣವಾಗಲಿದೆ ಎಂದು ಹೇಳಿದರು.

       ದಲಿತ ಕಾವ್ಯಕ್ಕೆ ಬೆವರೇ ವಿಟಮಿನ್ ಆಗಿದ್ದು, ಶ್ರಮದಿಂದ ಮಾತ್ರ ಸಶಕ್ತ ಕವಿತೆ ಹುಟ್ಟಲು ಸಾಧ್ಯ. ನೋವಿನಿಂದ ಹುಟ್ಟಿದ ಕಾವ್ಯವನ್ನು ಹಾಡುತ್ತಾ ಸಂಭ್ರಮಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ, ಸಂಭ್ರಮ ಉಳ್ಳವರ ಸ್ವತ್ತಲ್ಲ. ಮತ್ತದನ್ನೂ ಯಾರೂ ಗುತ್ತಿಗೆ ಪಡೆದಿಲ್ಲ. ಶ್ರಮ ಸಂಸ್ಕೃತಿಯಿಂದ ನಮ್ಮವರೇ ಕಟ್ಟಿದ ದೇವಾಲಯದ ಒಳಗೆ, ಕೆತ್ತಿದ ದೇವರ ಮೂರ್ತಿಯಿಂದ ಯಾರೂ ಹೊರಗುಳಿದರು ಮತ್ತು ಯಾರು ಒಳಗಾದರೂ ಎಂಬುದನ್ನು ಅವಲೋಕಿಸಿದರೆ, ದಲಿತ ಸಾಹಿತ್ಯದ ಅವಶ್ಯಕತೆಯ ಮನವರಿಕೆ ಆಗುತ್ತದೆ. ದಲಿತ ಸಾಹಿತ್ಯ ಪರಿಷತ್ತು ಹಾಗೂ ದಲಿತ ಸಂಘರ್ಷ ಸಮಿತಿ ನಮಗೆ ಎರಡು ಕಣ್ಣುಗಳಂತಿದ್ದು, ದ.ಸಂ.ಸ ಸಾಮಾಜಿಕ ಹೋರಾಟ ಕಟ್ಟಿದರೇ, ಪರಿಷತ್ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದು ಮಾಹಿತಿ ನೀಡಿದರು.

       ಸಂಸ್ಕೃತಿ ಚಿಂತಕ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಕಾಣದ ಬದುಕಿಗೆ ಹಂಬಲಿಸಿದವರು ನಾವಾಗಿದ್ದೇವೆ. ಇಂದಿಗೂ ಅರ್ಧಕರ್ಧ ಮಂದಿಗೆ ಸ್ವಂತ ಮನೆಗಳಿಲ್ಲ. ಅನ್ನ, ನೀರು, ವಸತಿ, ಬಟ್ಟೆ ಎಷ್ಟೋ ದಲಿತರಿಗಿಲ್ಲ. ಅನ್ನ ಸಿಗದ ಕಾರಣಕ್ಕೆ ಮೊನ್ನೆ ತಾನೇ ಧಾರವಾಡದಲ್ಲಿ ಇಬ್ಬರು ಹುಡುಗಿಯರು ಮಣ್ಣು ತಂದು ಸತ್ತರೂ ಈ ಬಗ್ಗೆ ಯಾವ ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿಗಳು ಮಾತನಾಡಲೇ ಇಲ್ಲ. ಏಕೆ ಬಡವರ ಬದುಕಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.

        ದೆಹಲಿಯಲ್ಲಿ ನಿರ್ಭಯ ಪ್ರಕರಣದ ಬಗ್ಗೆ ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳು, ನಮ್ಮ ಅಕ್ಕ-ತಂಗಿಯರು ಕೇರಿಗಳಲ್ಲಿ ನಿರಂತರ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಏಕೆ ಸುದ್ದಿ ಮಾಡುವುದಿಲ್ಲ ಎಂದು ಪ್ರಶ್ನಿಸಿದ ಅವರು, ಕಸಾಪ ದಲಿತ ಬದುಕಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಪ್ರಕಟಿಸಿರುವುದು ಅತ್ಯಂತ ವಿರಳ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಓ.ಎಸ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದಲಿತ ಮುಖಂಡ ಆಲೂರು ನಿಂಗರಾಜ್, ರಾಜ್ಯ ಎಸ್ಸಿ-ಎಸ್ಟಿ ವಾರ್ಡನ್‍ಗಳ ಸಂಘದ ಮಂಜುನಾಥ್ ಕೆ, ಪರಿಷತ್‍ನ ಗೌರವ ಸಲಹೆಗಾರ ಬುಳಸಾಗರ ಸಿದ್ದರಾಮಣ್ಣ ಉಪಸ್ಥಿತರಿದ್ದರು. ಹುಚ್ಚಂಗಿ ಪ್ರಸಾದ್ ನಿರೂಪಿಸಿದರು. ಅನಿಲ್ ಬಾಪುಲೆ ಸ್ವಾಗತಿಸಿದರು. ಕಲಾವಿದರಾದ ಗಂಗನಕಟ್ಟೆ ಹನುಮಂತಪ್ಪ, ಮಹಾಂತೇಶ್ ಜಾಗೃತಿ ಗೀತೆಗಳನ್ನು ಹಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap