ತುಮಕೂರು: ಮೂವರು ಯುವಕರಿಂದ ದಂಪತಿಯನ್ನು ಬೆದರಿಸಿ ಸುಲಿಗೆ..!!

ತುಮಕೂರು

     ಕಗ್ಗತ್ತಲಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ದಂಪತಿಯನ್ನು ನಡುದಾರಿಯಲ್ಲಿ ಅಡ್ಡಗಟ್ಟಿದ ಮೂವರು ಯುವಕರು, ಸದರಿ ದ್ವಿಚಕ್ರ ವಾಹನದಲ್ಲಿದ್ದ ದಂಪತಿಗೆ ಚಾಕು ತೋರಿಸಿ ಬೆದರಿಸಿ, ಪತಿಯ ಬಳಿಯಿದ್ದ ನಗದು ಮತ್ತು ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದಲ್ಲದೆ, ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಜರುಗಿದೆ.

     ಕುಣಿಗಲ್ ತಾಲ್ಲೂಕು ಎಡೆಯೂರು ಮಾರ್ಗವಾಗಿ ಮಾಗಡಿಪಾಳ್ಯ ಗೇಟ್‍ನಿಂದ ನಾಗಸಂದ್ರ ರಸ್ತೆಯಲ್ಲಿ ಕೊಪ್ಪ ಗ್ರಾಮದ ಶನಿದೇವರ ದೇವಾಲಯದ ಹತ್ತಿರ ಜುಲೈ 9 ರಂದು ರಾತ್ರಿ ಸುಮಾರು 8 ಗಂಟೆಯಲ್ಲಿ ಕಗ್ಗತ್ತಲಲ್ಲಿ ಈ ಪ್ರಸಂಗ ನಡೆದಿದೆ.

    ರಮೇಶ್ ಮತ್ತು ಅವರ ಪತ್ನಿ ನೇತ್ರಾವತಿ ಅವರು ಗುಬ್ಬಿ ತಾಲ್ಲೂಕು ಇಡಗೂರಿಗೆ ಟಿ.ವಿ.ಎಸ್. ಎಕ್ಸೆಲ್ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ಸ್ಥಳದಲ್ಲಿ ಹೋಗುವಾಗ ಕತ್ತಲಲ್ಲಿ ಯಾರೋ ಮೂವರು ಹುಡುಗರು ಬಜಾಜ್ ಡಿಸ್ಕವರ್ ಬೈಕ್ ಅನ್ನು ನಿಲ್ಲಿಸಿಕೊಂಡು ನಿಂತಿದ್ದುದು ಕಂಡುಬಂದಿದೆ. ಹತ್ತಿರ ಹೋಗುವಾಗ ಸದರಿ ಹುಡುಗರು, ದಂಪತಿಯನ್ನು ತಡೆದು ನಿಲ್ಲಿಸಿದರು. ಒಬ್ಬ ಹುಡುಗ ಚಾಕು ತೋರಿಸುತ್ತ ಹಣ-ಒಡವೆ ಕೊಡಿ.

     ಇಲ್ಲದಿದ್ದರೆ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಕೂಡಲೇ ಮತ್ತೊಬ್ಬನು ಧಾವಿಸಿ ರಮೇಶ್‍ರನ್ನು ಹಿಡಿದುಕೊಂಡನು. ಆಗ ಇನ್ನೊಬ್ಬ ಹುಡುಗನು ಇವರ ಪ್ಯಾಂಟ್ ಜೇಬಿನಲ್ಲಿದ್ದ 700 ರೂ. ನಗದು ಮತ್ತು ಮೊಬೈಲ್ ಫೋನ್ ಅನ್ನು ದೋಚಿದನು. ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಸಿದರು.

       ಅದೇ ಹೊತ್ತಿಗೆ ಮಾಗಡಿ ಪಾಳ್ಯದ ಕಡೆಯಿಂದ ಯಾವುದೋ ವಾಹನ ಬರುವುದನ್ನು ನೋಡಿದ ಈ ದಂಪತಿಯು ಸಹಾಯಕ್ಕಾಗಿ ಕೂಗಿಕೊಂಡರು. ಆಗ ಚಾಕು ಹಿಡಿದಿದ್ದ ಹುಡುಗನು ತಕ್ಷಣವೇ ರಮೇಶ್ ರವರ ಬಲಪಕ್ಕೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದನು. ಬಳಿಕ ಇವರ ಟಿವಿಎಸ್ ದ್ವಿಚಕ್ರ ವಾಹನದ ಕೀಯನ್ನು ಕಸಿದುಕೊಂಡು, ಕತ್ತಲಲ್ಲಿ ತಮ್ಮ ಬೈಕ್‍ನಲ್ಲಿ ನಾಗಸಂದ್ರ ಕಡೆಗೆ ಪರಾರಿಯಾಗಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

     ನಂತರ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ರಮೇಶ್‍ರನ್ನು ಉಪಚರಿಸಿ, ತಕ್ಷಣವೇ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಈ ಬಗ್ಗೆ ಜುಲೈ 10 ರಂದು ಬೆಳಗ್ಗೆ ದೂರನ್ನು ಸಲ್ಲಿಸಿದ್ದು, ಅಮೃತೂರು ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ. ಕಲಂ 394 ರ ಪ್ರಕಾರ ಮೊಕದ್ದಮೆ ದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link