ಬೆಂಗಳೂರು
ಕಳವು ಮಾಡಿದ ಕಾರುಗಳ ನಂಬರ್ ಪ್ಲೇಟ್ ಬದಲಿಸಿ ಮಂಕಿ ಕ್ಯಾಂಪ್ ಧರಿಸಿ ಪೆಟ್ರೋಲ್ ಬಂಕ್‍ಗಳಿಗೆ ನುಗ್ಗಿ ಸಿಬ್ಬಂದಿ ಮೇಲೆ ಮಾರಾಕಾಸ್ತ್ರಗಳಿಂದ ಬೆದರಿಸಿ ಹಲ್ಲೆ ನಡೆಸಿ ಸಿನಿಮೀಯ ಶೈಲಿಯಲ್ಲಿ ಕಳವು ಮಾಡುತ್ತಿದ್ದ ಎಂಟು ಮಂದಿ ದರೋಡೆಕೋರ ಗ್ಯಾಂಗ್‍ನ್ನು ಬಿಡದಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆಕೋರರಾದ ಬ್ಯಾಟರಾಯನಪುರದ ಅಭಿಷೇಕ್, ತಲಘಟ್ಟಪುರದ ರಮೇಶ್,ಬಾಪೂಜಿನಗರದ ಚೇತನ, ಸುನೀಲ್ ಕುಮಾರ್, ತೇಜಸ್, ದೊಡ್ಡಬಸ್ತಿಯ ಉದಯ್, ಆರುಂಧತಿನಗರದ ಸಂಜಯ್ ಕುಮಾರ್, ಮದ್ದೂರು ತಾಲ್ಲೂಕು ಹೊಸಕರೆಹಳ್ಳಿಯ ಯೋಗಾನಂದನನ್ನು ಬಂಧಿಸಿ ಈ ಗ್ಯಾಂಗ್ ನಗರದ ಮುತ್ತೂಟ್ ಫೈನಾನ್ಸ್‍ವೊಂದರ ದರೋಡೆಗೆ ರೂಪಿಸಿದ್ದ ಸಂಚನ್ನು ವಿಫಲಗೊಳಿಸಲಾಗಿದೆ
ಬಂಧಿತರಿಂದ 3 ಕಾರು, 1 ಬೈಕ್, ಲಾಂಗ್, ಮಚ್ಚು, ಡ್ರಾಗರ್, ಪೆಪ್ಪರ್ ಸ್ಪ್ರೇ,ಮಂಕಿ ಕ್ಯಾಂಪ್,ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಮನಗರ ಎಸ್‍ಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ
ಕಾರುಗಳನ್ನ ಕಳ್ಳತನ ಮಾಡಿ ನಂಬರ್ ಪ್ಲೇಟ್ ಬದಲಿಸಿ ಮಂಕಿ ಕ್ಯಾಪ್ ಧರಿಸಿ ಪೆಟ್ರೋಲ್ ಬಂಕ್‍ಗಳನ್ನು ಗುರಿಯಾಗಿಸಿಕೊಂಡು ಸಿಬ್ಬಂದಿಯನ್ನು ಮಾರಕಾಸ್ತಗಳಿಂದ ಬೆದರಿಸಿ ಹಣ,ಬೆಲೆ ಬಾಳುವ ವಸ್ತುಗಳನ್ನು ದರೋಡೆ ನಡೆಸುತ್ತಿದ್ದರು.ರಾಮನಗರ ಜಿಲ್ಲೆಯಲ್ಲದೇ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ 12 ಕಡೆಗಳಲ್ಲಿ ದರೋಡೆ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಗ್ಯಾಂಗ್ ಲೀಡರ್ ಯೋಗ
ದರೋಡೆಕೋರರ ಗ್ಯಾಂಗ್ ನಾಯಕ ಯೋಗಾನಂದ್, ಕಳೆದ 5 ತಿಂಗಳ ಹಿಂದೆ ತಮಿಳಿನ ಅರ್ಜುನ್ ಸರ್ಜಾ ಹಾಗೂ ವಿಶಾಲ್ ನಟನೆಯ ಇರುಂಬು ತಿರೈ ಸಿನಿಮಾವನ್ನ ನೋಡಿದ್ದ ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ಮೊಬೈಲ್ ಬಳಕೆ ಮಾಡದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಪರಿಯನ್ನ ಕಂಡು ತಾನೂ ಕೂಡಾ ಮೊಬೈಲ್ ಬಳಕೆ ಮಾಡುವುದನ್ನ ಬಿಟ್ಟಿದ್ದನು.ದರೋಡೆಗೆ ಕದ್ದ ಕಾರಿನ ನಂಬರ್ ಪ್ಲೇಟ್, ನಂಬರ್‍ಗಳನ್ನ ಬದಲಿಸಿ ದರೋಡೆಗೆ ಇಳಿಯುತ್ತಿದ್ದರು. ಹಿಂದೊಮ್ಮೆ ಮಾರುತಿ ಓಮ್ನಿ ಕಾರನ್ನು ಕದ್ದು ದರೋಡೆ ಮಾಡಿ ಬಳಿಕ ಕಾರನ್ನ ಸುಟ್ಟು ಹಾಕಿದ್ದಾರೆ.
ಡಿಸೆಂಬರ್ 3ರಂದು ರಾಮನಗರ ತಾಲೂಕಿನ ಶೇಷಗಿರಿಹಳ್ಳಿಯಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ಗೆ ನುಗ್ಗಿದ್ದ ಈ ಗ್ಯಾಂಗ್ ಬಂಕ್ 82 ಸಾವಿರ ನಗದು ದೋಚಿ ಅಲ್ಲಿದ್ದವರಿಗೆ ಖಾರದಪುಡಿ ಎರಚಿ ಸಿಸಿಕ್ಯಾಮೆರಾದ ಡಿವಿಆರ್ ಕಿತ್ತುಕೊಂಡು ಪರಾರಿಯಾಗಿದ್ದರು .ಬಂಧಿತರ ವಿಚಾರಣೆ ವೇಳೆ ರಾಜ್ಯದ ವಿವಿಧೆಡೆ ನಡೆಸಿದ್ದ ಪೆಟ್ರೋಲ್ ಬಂಕ್ ಗಳ 12 ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
