ಹುಳಿಯಾರು:
ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಯಳನಾಡು ಸಿದ್ಧರಾಮೇಶ್ವರ ಸ್ವಾಮಿಯ ದಸರಾ ಮಹೋತ್ಸವನ್ನು ಅ.18ರಿಂದ 31ರವರೆಗೆ ಒಟ್ಟು 14 ದಿನಗಳ ಕಾಲ ವೈಭವಯುತವಾಗಿ ನಡೆಸಲು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹುಳಿಯಾರು ಹೋಬಳಿ ಯಳನಾಡುವಿನಲ್ಲಿ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿಯ ದಸರಾ ಮಹೋತ್ಸವ ಜಾತ್ರೆಯ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಿಪಟೂರು ಉಪವಿಭಾಗಾಧಿಕಾರಿ ಉಮೇಶ್ ಚಂದ್ರ ಪ್ರತಿ ವರ್ಷದಂತೆ ಈ ವರ್ಷವೂ ಸಹ ದಸರಾ ಮಹೋತ್ಸವ ನಡೆಯಲಿದ್ದು ಈ ಹಿಂದಿನಿಂದಲೂ ಜಾತ್ರಾ ಉತ್ಸವಗಳನ್ನು ನಡೆಸಿಕೊಂಡು ಬರುತ್ತಿರುವ ಸದ್ಭಕ್ತರು ಉತ್ಸವದ ಖರ್ಚು ವೆಚ್ಚಗಳನ್ನು ಭರಿಸಲು ಅದಕ್ಕೆ ತಗಲುವ ವೆಚ್ಚವನ್ನು ದೇವಾಲಯದ ಕಚೇರಿಯಲ್ಲಿ ಸಲ್ಲಿಸಿ ರಸೀದಿ ಪಡೆಯುವಂತೆ ಸೂಚಿಸಿದರು.
ಸಹಸ್ರಾರು ಜನ ಭಾಗವಹಿಸುವ ಜಾತ್ರೆ ಇದಾಗಿದ್ದು ಈ ಜಾತ್ರೆಗೆ ದೂರದ ಊರುಗಳಿಂದ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಸಲಹೆ ನೀಡಿದರು.ನಿರಂತರ ವಿದ್ಯುತ್ ಸರಬರಾಜಾಗುವಂತೆ ನೋಡಿಕೊಳ್ಳಲು ತಿಳಿಸಿದರು.
ಜಾತ್ರೆಯ ಉಸ್ತುವಾರಿಕೆಗಾಗಿ ವೈ.ಕೆ.ಸೋಮಶೇಖರಯ್ಯ,ಕಂಬಳಿ ರಾಮಯ್ಯ,ಮುದ್ದುಲಿಂಗಯ್ಯ, ಪ್ರಕಾಶ್ , ರುದ್ರೇಶ್ , ಮಹಲಿಂಗಯ್ಯ , ಸಿದ್ದರಾಮಯ್ಯ , ಶಶಿಧರ್ , ದಯಾನಂದ್ ,ಜಿ.ರಾಮಯ್ಯ,ಕೃಷ್ಣಪ್ಪ, ಕಾಟಲಿಂಗಯ್ಯ,ಮಲ್ಲಿಕಾರ್ಜುನಯ್ಯ,ಮಂಜುನಾಥ ಅವರುಗಳನ್ನೊಳಗೊಂಡ ಹದಿನಾಲ್ಕು ಜನರ ತಾತ್ಕಾಲಿಕ ಸಮಿತಿ ರಚಿಸಲಾಯಿತು.
ಯಾವುದೆ ಗೊಂದಲ,ಸಮಸ್ಯೆಗೆ ಕಾರಣವಾಗದಂತೆ ಗ್ರಾಮದಲ್ಲಿನ ಎಲ್ಲರೂ ಪ್ರೀತಿ,ವಿಶ್ವಾಸ,ಶಾಂತಿ ಸಹನೆಯಿಂದ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿಯ ದಸರಾ ಮಹೋತ್ಸವವನ್ನು ಆಚರಿಸಿಕೊಂಡು ಹೋಗುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸೋಮಪ್ಪ ಕಡಕೋಳ,ಸಿಪಿಐ ನರಸಿಂಹಮೂರ್ತಿ, ಹುಳಿಯಾರು ಪಿಎಸ್‍ಐ ವಿಜಯಕುಮಾರ್ , ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಲಿಂಗಯ್ಯ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮದ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
