ಡೇಟಾ ನವಭಾರತದ ಹೊಸ ಇಂಧನ….!

ವಿಶೇಷ ವರದಿ : ಯೋಗೇಶ್ ಮಲ್ಲೂರು

     ಎಲ್ಲವನ್ನು ಬೆರಳ ತುದಿಯಲ್ಲೇ ನಿರ್ವಹಿಸುವ ವರ್ಚುವಲ್ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ನಾವೀಗ ಡೇಟಾ ಬಡಾವಣೆಗಳೆಂಬ ನವಯುಗ ವಸಾಹತುಶಾಹಿ ಕಾಲಕ್ಕೆ ಬಂದು, ಈ ಯುಗದಲ್ಲಿ ಸೈಬರ್ ದೊರೆಗಳು ಎಲ್ಲಾ ಮೂಲೆ ಮೂಲೆಗಳನ್ನು ಆಕ್ರಮಿಸಿ ತಮ್ಮ ಅಸ್ತಿತ್ವವನ್ನು ಇಮ್ಮಡಿಗೊಳಿಸುತ್ತಿದ್ದಾರೆ.

     “ಕಳೆದ ಶತಮಾನಗಳಲ್ಲಿ ತೈಲ ಏನಾಗಿತ್ತೋ, ಈ ಶತಮಾನದಲ್ಲಿ ಅದು ದತ್ತಾಂಶ(ಡೇಟಾ) ಆಗಿದೆ. ಅಂದರೆ ಅಭಿವೃದ್ಧಿ ಮತ್ತು ಬದಲಾವಣೆಯ ಚಾಲಕಶಕ್ತಿ. ದತ್ತಾಂಶದ ಪ್ರವಹಿಸುವಿಕೆಯ ಹೊಸ ಮೂಲಸೌಕರ್ಯ, ಹೊಸ ವ್ಯವಹಾರ, ಹೊಸ ಏಕಸ್ವಾಮ್ಯತೆ, ಹೊಸ ರಾಜಕೀಯ ಮತ್ತು ಅತ್ಯಂತ ಪ್ರಮುಖವಾಗಿ ಹೊಸ ಅರ್ಥಶಾಸ್ತ್ರವನ್ನು ಸೃಷ್ಟಿಸಿದೆ”.

     ಹೀಗೆ ಕಳೆದ ವರ್ಷ ಲಂಡನ್‍ನ ‘ದಿ ಎಕನಾಮಿಕ್ಸ್ ಟೈಮ್ಸ್’ ಪತ್ರಿಕೆ ಬರೆದಾಗ ಈ ಡೇಟಾ ಜಗತ್ತು ಕೊಂಚ ದಂಗು ಬಡಿಯಿತು. ನಂತರದಲ್ಲಿ ರಿಲಯನ್ಸ್ ಜಿಯೋದ ಮುಖ್ಯಸ್ಥ ಮುಖೇಶ್ ಅಂಬಾನಿ ಈ ಡೇಟಾಗೆ ಸಂಬಂಧಿಸಿದಂತೆ ಮಾತನಾಡಿ ‘ದತ್ತಾಂಶವೀಗ ಹೊಸ ತೈಲ. ಅದು ಭಾರತದ ಹೊಸ ಸಂಪತ್ತು. ಭಾರತದ ದತ್ತಾಂಶವು ಭಾರತೀಯರಿಂದಲೇ ನಿಯಂತ್ರಿಸಲ್ಪಡಬೇಕೇ ಹೊರತು ವಿದೇಶೀ ಕಾರ್ಪೊರೇಟ್ ಸಂಸ್ಥೆಗಳಿಂದಲ್ಲ. ಪ್ರಧಾನಿಯವರೆ, ನಾವು ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ’ ಎಂದು ಗುಜರಾತ್ ಶೃಂಗಸಭೆಯಲ್ಲಿ ಎಚ್ಚರಿಸಿದ್ದು ಎಲ್ಲರಲ್ಲೂ ಸಂಚಲನ ಉಂಟು ಮಾಡಿತ್ತು.

    “ದತ್ತಾಂಶ ಸ್ವಾತಂತ್ರ್ಯವು 1947ರ ಸ್ವಾತಂತ್ರ್ಯದಷ್ಟೇ ಅತ್ಯಮೂಲ್ಯವಾದದ್ದು. ಗಾಂಧೀಜಿಯವರು ರಾಜಕೀಯ ವಸಾಹತೀಕರಣದ ವಿರುದ್ಧದ ಚಳವಳಿಯನ್ನು ರೂಪಿಸಿದ್ದರು, ಆದರೆ ನಾವಿಂದು ದತ್ತಾಂಶ ವಸಾಹತೀಕರಣದ ವಿರುದ್ಧ ಹೊಸದೊಂದು ಚಳವಳಿಯನ್ನು ಹೂಡಬೇಕಿದೆ” ಎಂಬ ಅವರ ಮಾತು ಅತ್ಯಂತ ಗಂಭೀರವಾದದ್ದು.

    ಸ್ಮಾರ್ಟ್ ಫೋನ್‍ಗಳ ಸ್ಕ್ರೀನ್ ಅನ್ನು ಬೆರಳ ತುದಿಯಿಂದ ತಿಕ್ಕುವ ವೇಗಕ್ಕಿಂತಲೂ ಜಗತ್ತು ಶರವೇಗದಲ್ಲಿ ಓಡುತ್ತಿದೆ. ಮನುಷ್ಯ ತಾನು ಬಯಸಿದ್ದೆಲ್ಲವೂ ಕುಂತಲ್ಲೇ ಆಗಿಬಿಡಬೇಕೆಂಬ ಆರ್ಟಿಫಿಷಿಯಲ್ ಗೊಂಬೆಯಾಗುತ್ತಿದ್ದಾನೆ. ಮನುಷ್ಯನ ಬೇಕು ಬೇಡಗಳೆಲ್ಲವನ್ನೂ ತಿಳಿದಿರುವ ಮೊಬೈಲ್ ಆ್ಯಪ್‍ಗಳು, ಕಾಲ ಸರಿದಂತೆ ನಮ್ಮ ಬದುಕನ್ನು ಯಾಂತ್ರೀಕರಣಗೊಳಿಸುತ್ತಿವೆ.

   ಆನ್‍ಲೈನ್, ಬಳಕೆ ಹೆಚ್ಚಿದಂತೆ ವಾಸ್ತವ ಬದುಕಿನಲ್ಲಿ ನಮ್ಮ ಸ್ವಾತಂತ್ರ್ಯ ಪ್ರಮಾಣ ಇಳಿಕೆಯಾಗುತ್ತಿದೆ. ವ್ಯಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್, ಯುಟ್ಯೂಬ್, ಇ-ಮೇಲ್, ಜಿ-ಮೇಲ್, ಮುಂತಾದ ನವ ನವೀನ ಆ್ಯಪ್‍ಗಳಿಗೆ ನಿತ್ಯ ಬದುಕನ್ನು ಒತ್ತೆಯಿಡುತ್ತಿದ್ದೇವೆ. ಈ “ಸೆಲ್ಯೂಲಾರ್ ಡೇಟಾ” ಎಂಬ ಮಿಸೈಲ್ ವೇಗಕ್ಕೆ ಮಾನಸಿಕ ಶಕ್ತಿಯನ್ನು ಬಲಿಕೊಟ್ಟು, ಸ್ವಂತಿಕೆಯನ್ನು ಮಾರಿಕೊಂಡು ಡೇಟಾ ಕಾಲೋನಿಯೊಳಗೆ ಅಡಿಯಾಳಾಗಿ ಜೀವಿಸುತ್ತಿದ್ದೇವೆ.

ಅಗ್ಗದ ದರದಲ್ಲಿ ದತ್ತಾಂಶ (ಡೇಟಾ):

     ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಡೇಟಾ ದರ ಅತೀ ಕಡಿಮೆಯಾಗಿದೆ. ಇಡೀ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಅತಿ ಕಡಿಮೆ ದರಕ್ಕೆ ಡೇಟಾ ಸಿಗುತ್ತಿದ್ದು, ಬಳಕೆದಾರರು ದಿನಕ್ಕೆ ಲೆಕ್ಕವಿಲ್ಲದಷ್ಟು ಡೇಟಾವನ್ನು ಬಳಕೆ ಮಾಡುತ್ತಿದ್ದಾರೆ.

    ಡೇಟಾ ದರ ಕಡಿಮೆಯಾಗುತ್ತಿದಂತೆ ದೇಶದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯೂ ಗಗನಕ್ಕೆರುತ್ತಿದೆ. ಇಂಗ್ಲೆಂಡಿನ ‘ಕೇಬಲ್ ಕೊ ಡಾಟ್ ಯುಕೆ’ ಸಂಸ್ಥೆಯು ಅಧ್ಯಯನ ನಡೆಸಿ ವಿಶ್ವದ ಎಲ್ಲಾ ದೇಶಗಳ ಡೇಟಾ ವರದಿಯನ್ನು ಪಟ್ಟಿತ್ತು. ಆ ವರದಿ ಹೇಳುವಂತೆ ಇಡೀ ವಿಶ್ವದಲ್ಲಿಯೇ ಭಾರತದಲ್ಲಿ ಮೊಬೈಲ್ ಡೇಟಾ 1ಜಿಬಿಗೆ ಸರಾಸರಿ ರೂ.18.50 ಇದೆಯಂತೆ. ಇನ್ನು ಜಾಗತಿಕ ಮಟ್ಟದಲ್ಲಿ 1ಜಿಬಿ ಡೇಟಾ ದರ ಸರಾಸರಿ ರೂ.600 ಇದೆ ವರದಿ ತಿಳಿಸಿದೆ. ವಿವಿಧ ದೇಶಗಳ ಡೇಟಾ ದರವನ್ನು ಹೋಲಿಸಿದರೆ ಭಾರತದ ಗ್ರಾಹಕರು ಅಗ್ಗದ ದರದಲ್ಲಿ ಹೆಚ್ಚಿನ ಡೇಟಾವನ್ನು ಬಳಸುತ್ತಿದ್ದಾರೆ.

     ಜಾಗತಿಕ ಉದ್ಯಮಿ ಮುಕೇಶ್ ಅಂಬಾನಿ ರಿಲಯನ್ಸ್ ಜಿಯೊ ಪ್ರವೇಶದ ಬಳಿಕ, ಭಾರತದ ಟೆಲಿಕಾಂ ವಲಯದಲ್ಲಿ ಒಂದು ರೀತಿಯ ಸಂಚಲನ ಉಂಟು ಮಾಡಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಮಂದಿ ಮೊಬೈಲ್ ಡೇಟಾವನ್ನು ಬಳಸುತ್ತಿರುವುದು ಒಂದು ಕಡೆಯಾದರೆ, ವಿಶ್ವದಲ್ಲಿಯೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅತಿ ಕಡಿಮೆ ಎನ್ನುವುದು ಒಂದು ರೀತಿಯ ಹೆಗ್ಗಳಿಕೆ ವಿಷಯ.
ಬ್ರಿಟನ್ ದೇಶದಲ್ಲಿ 1 ಜಿಬಿ ಡೇಟಾಗೆ ರೂ.467 ಇದ್ದರೆ, ಅಮೆರಿಕದಲ್ಲಿ ರೂ. 868 ಇದೆ.

    ‘ಯಂಗ್ ಇಂಡಿಯಾ’ ಎಂದೆ ಕರೆಸಿಕೊಳ್ಳುವ ಭಾರತದಲ್ಲಿ ಯುವ ಜನರ ಸಂಖ್ಯೆ ಹೆಚ್ಚಾಗಿದೆ. ಡೇಟಾವನ್ನು ಬಳಸುವ ಯುವಜನರು ದಿನೇ ದಿನೇ ಹೆಚ್ಚುತ್ತಲಿದ್ದಾರೆ. ಈಗ ಭಾರತದಲ್ಲಿ ಸರಿ ಸುಮಾರು 116 ಕೋಟಿ ಜನರು ಸ್ಮಾರ್ಟ್ ಫೋನ್ ಅನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ದೇಶದಲ್ಲಿ ಸ್ಮಾರ್ಟ್‍ಫೋನ್ ಮಾರುಕಟ್ಟೆಯು ಹೆಚ್ಚು ಪ್ರಕಾಶಮಾನವಾಗುತ್ತಿದೆ. ಆಧುನಿಕ ತಂತ್ರe್ಞÁನದ ಅರಿವನ್ನು ಹೊಂದಿರುತ್ತಿದಂತೆ ಟೆಲಿಕಾಂ ಕಂಪನಿಗಳ ನಡುವೆ ಸ್ಪರ್ಧೆಯುಂಟಾಗಿದೆ. ಎಲ್ಲಾ ಕಂಪನಿಗಳು ಗ್ರಾಹಕರನ್ನು ಸೆಳೆಯುವ ಹುನ್ನಾರದಿಂದ ಅಗ್ಗದ ದರಕ್ಕೆ ಡೇಟಾ ಸೇವೆಯನ್ನು ನೀಡಲು ಶತಾಯ ಗತಾಯ ಪ್ರಯತ್ನಿಸುತ್ತಿವೆ.

       2018ರ ಅಕ್ಟೊಬರ್ 23 ಮತ್ತು ನವೆಂಬರ್ 28ರ ನಡುವೆ 230 ದೇಶಗಳಲ್ಲಿ 6,313 ಮೊಬೈಲ್ ಪ್ಲಾನ್‍ಗಳನ್ನು ಹೋಲಿಕೆ ಮಾಡಿದ ‘ಕೇಬಲ್ ಕೋ ಡಾಟ್ ಯುಕೆ’, ಭಾರತದಲ್ಲಿನ ಡೇಟಾ ಬಳಕೆಯ ಕ್ರಾಂತಿಯನ್ನು ದಾಖಲಿಸಿದೆ. ಭಾರತದ ಮಾರುಕಟ್ಟೆಯಲ್ಲಿ 57 ಯೋಜನೆಗಳನ್ನು ಈ ಅಧ್ಯಯನದ ವೇಳೆ ಪರಾಮರ್ಶಿಸಲಾಗಿದ್ದು, ಇಲ್ಲಿ 1ಜಿಬಿಗೆ ಕನಿಷ್ಠ ರೂ.1.75 ಇದ್ದರೆ, ಗರಿಷ್ಠ ರೂ.99.90 ಇದೆ. ಅಗ್ಗದ ಡೇಟಾ ಸೇವೆಯಲ್ಲಿ ಭಾರತದ ನಂತರದ ಸ್ಥಾನದಲ್ಲಿರುವ ಕಿರ್ಗಿಸ್ತಾನ್‍ನಲ್ಲಿ 1ಜಿಬಿಗೆ ರೂ.18.95 ಇದೆ. ಕಜಕಸ್ತಾನ್, ಉಕ್ರೆನ್‍ಗಳು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಡೇಟಾ ದರ ದುಬಾರಿಯಾಗಿರುವ ದೇಶಗಳಲ್ಲಿ ಜಿಂಬಾವ್ವೆ ಅಗ್ರ ಸ್ಥಾನದಲ್ಲಿದ್ದು, ಇಲ್ಲಿ 1 ಜಿಬಿ ಡೇಟಾ ಪಡೆಯಲು ರೂ.5,277ಗಳನ್ನು ನೀಡಬೇಕಾಗಿದೆ.

       ಭಾರತದಲ್ಲಿ 43 ಕೋಟಿ ಸ್ಮಾರ್ಟ್‍ಫೋನ್ ಬಳಕೆದಾರರಿದ್ದು, ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‍ಫೋನ್ ಮಾರುಕಟ್ಟೆ ಹೊಂದಿದ ದೇಶವಾಗಿದೆ. ಚೀನಾ ದೇಶವು ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿಗಳ ಮೂಲಕ ತಿಳಿದು ಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap