ಹಾವೇರಿ :
ಜಗತ್ತಿನ ಯಾವ ದೇಶಗಳಲ್ಲೂ ಸಂಸತ್ತಿನ ಕನಸು ಬೀಳದ ಸಂದರ್ಭದಲ್ಲಿ ಆಧುನಿಕ ಸಂವಿಧಾನದ ಬೀಜಸ್ವರೂಪವಾದ ಅನುಭವ ಮಂಟಪವನ್ನು ಸ್ಥಾಪಿಸಿ, ಚಳುವಳಿಯ, ಮಾನವ ಹಕ್ಕುಗಳ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು 12 ನೇ ಶತಮಾನದ ಶಿವಶರಣರು ಎಂದು ಉಪನ್ಯಾಸಕ ಪ್ರೊ, ರವಿಚಂದ್ರ ಮಲಗುಂದ ಹೇಳಿದರು.
ನಗರದ ರಾಚೋಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಲಿಂ. ಶಾಂತಮ್ಮ ಸಾವಿರಮಠ, ಗುದ್ಲೆಪ್ಪ ತೋಟಣ್ಣನವರ, ಕಲ್ಲಪ್ಪ ಹೂಗಾರ, ಸಿ.ಎಂ ಪಟ್ಟಣಶೆಟ್ಟರ ಮತ್ತು ಸಿ.ಎನ್ ಪಾಟೀಲ ಇವರ ದತ್ತಿನಿಧಿ ಸಮಾರಂಭದಲ್ಲಿ ಅವರು ಮಾತನಾಡಿದರು.
12 ನೇ ಶತಮಾನದ ಶರಣರು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ವಚನ ಸಾಹಿತ್ಯ ರಚಿಸಿದರು. ವೈಯಕ್ತಿಕ ಕಾಯಕದ ಅನುಭವ ಮೂಲಕ ಸಾಮೂಹಿಕ ಅನುಭಾವದ ಎತ್ತರಕ್ಕೆ ಒಯ್ಯುವ ವಚನ ಪ್ರಕಾರವನ್ನು ಸಾಮಾಜೀಕರಣಗೊಳಿಸಿದ ಕೀರ್ತಿ ಬಸವಣ್ಣನ ಆದಿಯಾಗಿ ಎಲ್ಲಾ ಶರಣ ಸಂಕುಲಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ವಿ ಹಿರೇಮಠ ಮಾತನಾಡಿ, ಸಾಹಿತ್ಯವು ಸಂಸ್ಕತಿಯ ಪ್ರತೀಕವಾಗಿದ್ದು, ಸಾಮಾಜಿಕ ಬದುಕಿನ ಸಾಕ್ಷಿಪ್ರಜ್ಞೆಯಾಗಿದೆ. ತನ್ನ ಒಡಲಿನಲ್ಲಿ ವಿವಿಧ ಸಂವೇದನೆಗಳ ಸಂಯೋಜನೆಯನ್ನು ಒಳಗೊಂಡಿದ್ದು, ಸಾಹಿತಿ ತನ್ನ ಕ್ಷೇತ್ರದ ಸಿದ್ಧ ಕಲ್ಪನೆ ಮತ್ತು ಧೋರಣೆಗಳನ್ನು ನಿರ್ಮಮತೆಯಿಂದ ಬಿಟ್ಟು ಸಮಾಜದಲ್ಲಿ ತಾತ್ವಿಕವಾಗಿ ಗುರುತಿಸಿಕೊಂಡಾಗ ಮಾತ್ರ ಸಾಹಿತ್ಯ ಯುಗ ಮನಸ್ಸಿನ ವಾಣಿಯಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಗದೇವಯ್ಯ ಸಾವಿರಮಠ, ಸಿಜಿ ತೋಟಣ್ಣನವರ, ಜಿ.ಎನ್ ಹೂಗಾರ, ಜಿಲ್ಲಾ ಕಸಾಪದ ಕೋಶಾಧ್ಯಕ್ಷ ಎಸ್.ಎನ್ ದೊಡ್ಡಗೌಡರ, ಚನ್ನವೀರಪ್ಪ ಅಕ್ಕಿ, ವಿರೂಪಾಕ್ಷಪ್ಪ ಕೋರಗಲ್ಲ, ಸಿ.ಸಿ ಪ್ರಭುಗೌಡರ, ವಿ.ಪಿ ದ್ಯಾಮಣ್ಣನವರ, ರುದ್ರಪ್ಪ ಜಾಬೀನ, ನಾಗರಾಜ ನಡುವಿನಮಠ, ಡಾ|| ವಿ.ಪಿ ದ್ಯಾಮಣ್ಣನವರ, ಅಜ್ಜನಗೌಡ್ರ ಗೌಡಪ್ಪನವರ, ಹುಸೇನಸಾಬ ದೇವಿಹೊಸೂರ, ಆರ್.ಎಫ ಕಾಳೆ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಎಸ್.ಸಿ ಮರಳಿಹಳ್ಳಿ ಸ್ವಾಗತಿಸಿದರು. ಕೆ.ಆರ್ ನಾಶೀಪುರ ದತ್ತಿದಾನಿಗಳ ಪರಿಚಯ ಮಾಡಿದರು, ವಾಯ್.ಬಿ ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಂ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಎಸ್. ಬಿ ಮಸಲವಾಡ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
