ದಾವಣಗೆರೆ:
ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೂವರು ಗುಣಮುಖರಾಗಿದ್ದಾರೆ. ಅಲ್ಲದೆ, ದೇವರ ದಯೆಯಿಂದ ಹೊಸ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ದಾವಣಗೆರೆಯು ಶೀಘ್ರದಲ್ಲಿಯೇ ಕೋವಿಡ್-19 ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ವಿದ್ಯಾನಗರದ ಗಾಂಧಿ ವೃತ್ತದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು ಸ್ವಂತ ಖರ್ಚಿನಲ್ಲಿ ತಯಾರಿಸಿದ್ದ ಆಹಾರ ಪದಾರ್ಥಗಳ ಕಿಟ್‍ಗಳನ್ನು ಬಡ ಕಲಾವಿದರಿಗೆ ಹಾಗೂ ಆಟೋ ಚಾಲಕರಿಗೆ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯನ್ನು ಸರ್ಕಾರ ಆರೇಂಜ್ ಜೋನ್ ಎಂಬುದಾಗಿ ಘೋಷಿಸಿದ್ದು, ಇನ್ನೂ ಎರಡು-ಮೂರು ದಿನಗಳಲ್ಲಿ ಜಿಲ್ಲೆಯು ಗ್ರೀನ್ ಜೋನ್ ಆಗಿ ಹೊರಹೊಮ್ಮಲಿದೆ ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಆ ಮೂರು ಪ್ರಕರಣಗಳ ವರದಿಯು ನೆಗೆಟೀವ್ ಬಂದಿದ್ದು, ಹೋಮ್ ಕ್ವಾರಂಟೇನ್ ನಲ್ಲಿದ್ದ ಮೂವರು ಇದೀಗ ಗುಣ ಮುಖರಾಗಿ ಆರೋಗ್ಯವಾಗಿದ್ದಾರೆ. ದೇವರ ದಯೆಯಿಂದ ಜಿಲ್ಲೆಯಲ್ಲಿ ಪುನಃ ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ ಎಂದ ಅವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಂಡ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಹಗಲು ರಾತ್ರಿ ಶ್ರಮವಹಿಸುತ್ತಿದ್ದು, ಇದರ ಫಲವಾಗಿ ಜಿಲ್ಲೆಯು ಕೊರೊನಾ ಮುಕ್ತವಾಗುವತ್ತ ಹೆಜ್ಜೆ ಇಟ್ಟಿದೆ.
ಮುಂದೆ ಈ ಸೋಂಕು ಹರಡುವ ಸಾಧ್ಯತೆಯೇ ಇಲ್ಲ ಎಂದು ಭವಿಷ್ಯ ನುಡಿದರು.ನಿಷೇಧಾಜ್ಞೆ (144 ಸೆಕ್ಷನ್) ಜಾರಿ ಮಾಡುವ ಮುಖಾಂತ ಕೊರೊನಾ ಮುಕ್ತ ರಾಜ್ಯವನ್ನಾಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹಗಲು-ಇರುಳು ಶ್ರಮಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅವಶ್ಯಕತೆ ಇದ್ದರೆ ಮನೆಯಿಂದ ಹೊರಬರಬೇಕೇ ಹೊರತು, ಹರಟೆ ಹೊಡೆಯಲು ಮತ್ತು ಅನಾವಶ್ಯಕವಾಗಿ ಮನೆಯಿಂದ ಹೊರಬರಬಾರದು. ಇನ್ನಷ್ಟು ದಿನ ಜಿಲ್ಲೆಯ ಜನತೆ ಲಾಕ್‍ಡೌನ್ ಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಕಾರ್ಯಕರ್ತರು, ಮುಖಂಡರು ನಗರ ಸೇರಿದಂತೆ ಜಿಲ್ಲೆಯ ವಿವಿಧದೆಡೆಗಳಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರದ ಮತ್ತು ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಕೂಲಿ ಕಾರ್ಮಿಕರು, ವಲಸೆ ಬಂದವರು, ನಿರ್ಗತಿಕರಿಗೆ, 3.89 ಲಕ್ಷ ಬಿಪಿಎಲ್ ಕುಟುಂಬದವರಿಗೂ ಸರ್ಕಾರದಿಂದ ಅಕ್ಕಿ ವಿತರಣೆ ಮಾಡಲಾಗಿದೆ ಎಂದರು.
ಜನಸಾಮಾನ್ಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಿಟ್ ವಿತರಣೆ ವೇಳೆ ಬಹು ಮುಖ್ಯವಾಗಿ ಇದನ್ನು ಪಾಲಿಸಬೇಕು. ಕಿಟ್‍ಗಳು ಕೊರತೆಯಾಗದಂತೆ ಅರ್ಹರಿಗೆ ತಲುಪುವಂತೆ ಮಾಡಲು ನಾವು ಸಿದ್ಧರಿದ್ದೇವೆ ಎಂದರು.ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಉತ್ತಮ ಮಳೆಯಾಗಿದೆ. ರೈತರು ಕೃಷಿ ಚಟುವಟಿಕೆಗಳನ್ನು ಸಹ ಆರಂಭಿಸಿದ್ದಾರೆ. ಅವಶ್ಯಕ ಪ್ರಮಾಣದಲ್ಲಿ ಬಿತ್ತನೆ ಬೀಜ, ರಸ ಗೊಬ್ಬರ ದಾಸ್ತಾನಿದೆ. ಹಾಗಾಗಿ ಯಾವುದೇ ಆತಂಕವಿಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಚಟುವಟಿಕೆಗಳಲ್ಲಿ ರೈತರು ನಿರತರಾಗಬೇಕೆಂದು ಕರೆ ನೀಡಿದರು.
ಇಂದು ಆಟೋ ಚಾಲಕರು, ಕಲಾವಿದರು ಸೇರಿ ಒಟ್ಟು 250ಕ್ಕೂ ಹೆಚ್ಚು ಮಂದಿಗೆ ಅಕ್ಕಿ, ಅಡುಗೆ ಎಣ್ಣೆ, ಸಕ್ಕರೆ, ರವೆ, ಅವಲಕ್ಕಿ, ಗೋಧಿ ಹಿಟ್ಟು ಸೇರಿದಂತೆ ಒಂದು ತಿಂಗಳಿಗೆ ಆಗುಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳ ಕಿಟ್ ತಯಾರಿಸಿ ವಿತರಿಸಲಾಗಿದ್ದು, ಮುಂದೆಯೂ ಸುಮಾರು 2 ಸಾವಿರ ಜನರಿಗೆ ಕಿಟ್ ಅನ್ನು ಹಂತ ಹಂತವಾಗಿ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಹಾನಗರ ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ, ಬಾಡಾದ ಆನಂದರಾಜ್, ಲೋಕಿಕೆರೆ ನಾಗರಾಜ್ ಸ್ನೇಹ ಬಳಗದವರು ಹಾಜರಿದ್ದರು.ಇದೇ ವೇಳೆ ಸ್ಪೂರ್ತಿ ಸೇವಾ ಟ್ರಸ್ಟ್ ವತಿಯಿಂದ ಕಿಟ್ ಪಡೆದ ಜನರಿಗೆ ಪುಳಿಯೊಗರೆಯುಳ್ಳ ಆಹಾರ ಪ್ಯಾಕೆಟ್ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ