ದಾವಣಗೆರೆ:
ಮುಂಗಾರು ಆರಂಭವಾದಾಗಿನಿಂದಲೂ, ಭಾನುವಾರ ಸಂಜೆಯೇ ಈ ಬಾರಿ ಉತ್ತಮವಾಗಿರುವ ಮೊದಲ ಮಳೆಯಾಗಿದ್ದು, ಈ ಮಳೆಯ ನೀರು ದಾವಣಗೆರೆಯ ಕೊಳೆಯನ್ನು ತೊಳೆದಿದೆ.
ಮುಂಗಾರು ಆರಂಭವಾದಾಗಿನಿಂದಲೂ ನಾಲ್ಕೈದು ಬಾರಿ ಮಳೆಯಾಗಿದ್ದರು. ಅದು ತುಂತುರು ಮಳೆಯ ಹನಿಗಳು ಜಿನಗುತ್ತಿದ್ದವು. ಅದರಲ್ಲೂ ಘಟ್ಟಿ ಹನಿಗಳು ಬಂದರೂ ನಾಲ್ಕೈದು ನಿಮಿಷಕ್ಕೆ ನಿಂತು ಬಿಡುತಿತ್ತು. ಆದರೆ, ಭಾನುವಾರ ಸಂಜೆ ದೊಡ್ಡ ಹನಿಗಳೊಂದಿಗೆ ಸಂಜೆ ನಾಲ್ಕು ಗಂಟೆಯ ವರೆಗೆ ಸುರಿಯಲಾರಂಭಿಸಿದ ಮಳೆಯು ಸುಮಾರು ಇಪ್ಪತ್ತೈರು ನಿಮಿಷಗಳ ವರೆಗೆ, ಅಂದರೆ 4.25ರ ವರೆಗೆ ಸುರಿಯಿತು.
ಇತ್ತೀಚಿನ ದಿನಗಳಲ್ಲಿ ಜೋರು ಮಳೆ ಬಾರದ ಕಾರಣಕ್ಕೆ ದಾವಣಗೆರೆಯ ಚರಂಡಿಗಳಲ್ಲಿ, ಕಸ ಕಟ್ಟಿ ತುಂಬಿಕೊಂಡು ಕೊಳಚೆ ನೀರು ಮುಂದೆ ಹೋಗದೇ, ಅಲ್ಲಲ್ಲಿ ನಿಂತು ಗಬ್ಬು ವಾಸನೆ ಹೊಡೆಯುತ್ತಿತ್ತು. ಆದರೆ, ನಿನ್ನೆ ಸುರಿದ ಮಳೆಯ ನೀರಿಗೆ ಚರಂಡಿ, ರಾಜ ಕಾಲುವೆಗಳು ತುಂಬಿ ಹರಿದ ಪರಿಣಾಮ ಕಸ-ಕಡ್ಡಿ ಕೊಚ್ಚಿಕೊಂಡು ಹೋಗಿರುವ ಪರಿಣಾಮ ದಾವಣಗೆರೆಯ ಕೊಳೆ ತೊಳೆದಂತಾಗಿದೆ.
ರಸ್ತೆ ಜಲಾವೃತ:
ಸುಮಾರು ಅರ್ಧ ಗಂಟೆಗಳ ಕಾಲ ಮಳೆ ಸುರಿದ ಪರಿಣಾಮ ನಗರದ ಕೆಲ ರಸ್ತೆಗಳು ಜಲಾವೃತ ಗೊಂಡಿದ್ದವು. ಅಲ್ಲದೇ, ಡಿಸಿಎಂ ಟೌನ್ ಶಿಪ್ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ, ರೇಣುಕಾ ಮಂದಿರದ ಪಕ್ಕದಲ್ಲಿರುವ ಸೇತುವೆ, ಪಾಲಿಕೆ ಎದುರು ಹಾದು ಹೋಗಿರುವ ರಸ್ತೆಯಲ್ಲಿನ ರೈಲ್ವೆ ಸೇತುವೆ, ಶಿವಾಲಿ ರಸ್ತೆಯಲ್ಲಿರುವ ರೈಲ್ವೆ ಸೇತುವೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ಬೈಕ್ ಸವಾರರು, ವಾಹನ ಚಾಲಕರು ಪರದಾಡಿದರೆ, ಕೆಲವರು ಡೂಡಾ ಕಚೇರಿ ಎದುರು ನಿರ್ಮಾಣವಾಗಿರುವ ಫ್ಲೈಓವರ್‍ನಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುವ ಮೂಲಕ ಮನೆ ಸೇರಿದರು.ಇನ್ನೂ ದಾವಣಗೆರೆಯ ತಗ್ಗು ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಕೆಲ ಪ್ರದೇಶ, ಬಡಾವಣೆ ಹಾಗೂ ಸ್ಲಂಗಳ ಮನೆಗಳಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ಮನೆಯಿಂದ ನೀರು ಎತ್ತಿ ಹಾಕುತ್ತಿದ್ದ ದೃಶ್ಯ ಸ್ಲಂಗಳಲ್ಲಿ ಕಂಡು ಬರುತಿತ್ತು.