ಬೆಂಗಳೂರು
ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವ ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರ ಕೊಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರದಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೇಂದ್ರ ಕಛೇರಿ ಮುಂಭಾಗ ಸೇರಿರುವ ನೂರಾರು ರೈತರು ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಸ್ವಾಧಿನ ಪಡಿಸಿಕೊಂಡಿರುವ ಭೂಮಿಗೆ ಪ್ರತಿ ಎಕರೆಗೆ ಕನಿಷ್ಠ 2 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿದರು.
ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವ 67 ಹಳ್ಳಿಗಳಲ್ಲಿ ಮುದ್ರಾಂಕ ಬೆಲೆ ಕಡಿಮೆಯಿದ್ದು, ಇಲ್ಲಿನ ರೈತರಿಗೂ ಎಕರೆಗೆ 5 ಕೋಟಿ ನೀಡಬೇಕು. ಎರಡೂವರೆ ಕೋಟಿಗಿಂತ ಮುದ್ರಾಂಕ ಬೆಲೆ ಹೆಚ್ಚಿರುವ ಹಳ್ಳಿಗಳಲ್ಲಿ ಶೇ. 35 ರಷ್ಟನ್ನು ಪರಿಹಾರ ಹೆಚ್ಚಿಸಬೇಕು ಒತ್ತಾಯಿಸಿದರು.
ಯೋಜನೆಯಲ್ಲಿ ಬಾಧಿತರಾಗುವ ನಿವೇಶನದಾರರಿಗೆ ಪ್ರಸ್ತುತ ಮಾರುಕಟ್ಟೆ ದರವನ್ನು ಆಧರಿಸಿ ಅದಕ್ಕೆ ಎರಡು ಪಟ್ಟು ಸೇರಿಸಿ ಮೆಟ್ರೋ ಯೋಜನೆಗೆ ಕೊಟ್ಟಂತೆ ನೀಡಬೇಕು. ರೈತರ ಜಮೀನಿಗೆ ನ್ಯಾಯವಾದ ಬೆಲೆಯನ್ನುನೀಡಲು ಸಾಧ್ಯವಾಗದಿದ್ದರೆ ಇಡೀ ಯೋಜನೆಯನ್ನು ತಕ್ಷಣವೇ ಕೈ ಬಿಡಬೇಕು ಎಂದು ಸತ್ಯಾಗ್ರಹದ ನೇತೃತ್ವದ ವಹಿಸಿದ್ದ ಕೋಡಿ ಹಳ್ಳಿ ಚಂದ್ರಶೇಖರ್ ಅವರು ಆಗ್ರಹಿಸಿದರು.
ಬಿಡಿಎ ನಡೆಸುತ್ತಿರುವ ಹುನ್ನಾರದಿಂದ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನಿನ ನೋಂದಣಾ ಬೆಲೆಯನ್ನು ಹೆಚ್ಚಿಸದಂತೆ ಜಿಲ್ಲಾ ನೋಂದಾಣಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
