ನಿರಾಶ್ರೀತರೊಂದಿಗೆ ಡಿಸಿ ಸಹಪಂಕ್ತಿ ಬೋಜನ

ಚಿತ್ರದುರ್ಗ

        ತಂದೆ ತಾಯಿ ಇಲ್ಲ ಬಂಧು ಬಳಗ ಯಾರೆಂದು ಗೊತ್ತಿಲ್ಲ ಜೀವನದಲ್ಲಿ ಬದುಕಬೇಕೆಂಬ ಆಸೆ ಇಲ್ಲದೆ ಬದುಕಿನ ಬಂಡಿ ಸಾಗಿಸುತ್ತಿರುವ ನಿರಾಶ್ರಿತರೊಂದಿಗೆ ಐಎಎಸ್ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಕೆಲ ಕಾಲ ಕಳೆದು ಸಮಸ್ಯೆ ಆಲಿಸಿದರಲ್ಲದೆ ಸಹ ಪಂಕ್ತಿ ಭೋಜನ ಸ್ವೀಕರಿಸಿದರು.

         ಸಂಜೆ ಕಚೇರಿ ಕೆಲಸ ಮುಗಿದ ಬಳಿಕ ಬಹುತೇಕ ಜಿಲ್ಲಾಧಿಕಾರಿಗಳು ಮನೆ ಕಡೆಗೆ ಹೆಜ್ಜೆ ಹಾಕುವುದು ಸಹಜ. ಆದರೆ ವಿನೋತ್ ಪ್ರಿಯಾ ಮೇಡಂ ನೇರವಾಗಿ ಗೋನೂರು ಕಡೆಗೆ ಹೋಗುವಂತೆ ಹೇಳಿದಾಗ ಚಾಲಕನಿಗೂ ಅಚ್ಚರಿ. ಗೋನೂರಿಗೆ ಹೋದ ಮೇಲೆ ಅಲ್ಲಿ ಗೊತ್ತಾಗಿದ್ದು ನಿರಾಶ್ರಿತರ ಕೇಂದ್ರದ ಭೇಟಿ.

         ಒಳಗೆ ಪ್ರವೇಶಿಸುತ್ತಿದ್ದಂತೆ ಕೇಂದ್ರದ ಅಧಿಕಾರಿ ಮಹಾದೇವಪ್ಪ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿದರು. ಮೊದಲು ಸ್ವಚ್ಚತೆಯನ್ನು ಪರಿಶೀಲಿಸಿದರು. ಎಲ್ಲಾ ಕಡೆಗಳಲ್ಲಿಯೂ ಸ್ವಚ್ಚವಾಗಿರುವುದನ್ನು ಕಂಡು ಖುಷಿಯಾದಂತೆ ಕಂಡುಬಂದಿತ್ತು. ನಂತರ ಭೋಜನಾ ಕೊಠಡಿ, ಅಡುಗೆ ಮನೆ, ಸ್ನಾನದ ಮನೆ ಎಲ್ಲವನ್ನು ಪರಿಶೀಲಿಸಿದರು.

          ನಿರಾಶ್ರಿತರಲ್ಲಿ ಕುತೂಹಲ ಯಾರೋ ಮಹಿಳೆ ಬಂದಿದ್ದಾರೆ ಎಂದು. ಕೊನೆಗೆ ಗೊತ್ತಾಯಿತು ಜಿಲ್ಲಾಧಿಕಾರಿ ಎಂದು. ತಕ್ಷಣ ಎಲ್ಲರೂ ನಮಸ್ಕಾರ ಮಾಡಿದರು. ಜಿಲ್ಲಾಧಿಕಾರಿ ಕೂಡ ನಮಸ್ಕಾರ ಮಾಡಿ ಇಲ್ಲಿ ಹೇಗೆ ನೋಡಿಕೊಳ್ಳಲಾಗುತ್ತದೆ ಎಂದು ಕೇಳಿದರು. ಎಲ್ಲರೂ ಒಕ್ಕೂರಲಿನಿಂದ ತುಂಬಾ ಚೆನ್ನಾಗಿದೆ ಮೇಡಂ. ಮನೆಯಲ್ಲಿದ್ದಂತೆ ಭಾಸವಾಗುತ್ತದೆ ಎಂದು ಕಣ್ಣೀರಿಟ್ಟರು. ಅದರ ಹಿಂದೆ ಬಂಧುಬಳಗದ ನೆನಪು ಅಡಗಿತ್ತು. ಇದರಿಂದ ಮೇಡಂ ಕೂಡ ನಿರಾಶ್ರಿತರನ್ನು ಕಂಡು ಮರುಗಿದಂತೆ ಕಂಡುಬಂದಿತು.

        ಮಹಿಳೆಯರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಊಟ, ವಸತಿ ಯಾವುದೇ ರೀತಿಯಲ್ಲಿಯೂ ತೊಂದರೆ ಇದ್ದರೆ ತಿಳಿಸುವಂತೆ ಕೇಳಿದರು. ಆಗ ಮಹಿಳೆಯರು ಇಲ್ಲ ಮೇಡಂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

         ಸುಮಾರು ಹೊತ್ತು ಎಲ್ಲಾ ಕಡೆಗಳಲ್ಲಿಯೂ ಸುತ್ತಾಡಿ ನಂತರ ಹೊರಗಡೆ ಇರುವ ಉದ್ಯಾನವನ್ನು ಪರಿಶೀಲಿಸಿದರು. ನಿರಾಶ್ರಿತರು ಕೆಲಸ ಇಲ್ಲದೆ ಸುಮ್ಮನೆ ಕುಳಿತರೆ ಚಿಂತೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಕೌಶಲ್ಯಭರಿತ ತರಬೇತಿ ನೀಡಬೇಕಾಗಿದೆ. ರುಡ್‍ಸೆಟ್ ಸಂಸ್ಥೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ತರಬೇತಿ ಕೊಡಿಸಬೇಕು. ಸದಾ ಲವಲವಿಕೆಯಿಂದ ಇರುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

         ನಿರಾಶ್ರಿತರ ಕೇಂದ್ರದಲ್ಲಿ 192 ಪುರುಷ ನಿರಾಶ್ರಿತರು ಮತ್ತು 63 ಮಹಿಳಾ ನಿರಾಶ್ರಿತರಿದ್ದು ಇವರಲ್ಲಿ ಕೆಲವರು ಮಾನಸಿಕ ಅಸ್ವಸ್ಥರಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದಾಗ ಅಂತವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ ಮೊದಲಿನಂತೆ ಆಗುತ್ತಾರೆ. ಬೆಂಗಳೂರಿನ ನಿಮ್ಹಾನ್ಸ್‍ಗೆ ಕಳುಹಿಸಿ ಕೊಡಬೇಕು. ಉತ್ತಮ ಚಿಕಿತ್ಸೆ ಕೊಡಬೇಕು ಎಂದು ಹೇಳಿದರು.

          ಅನ್ನಸಾಂಬರ್: ನಿರಾಶ್ರಿತರಿಗೆ ಬಿಸಿ ಮುದ್ದೆ ಅನ್ನಸಾಂಬರ್ ಸಿದ್ದವಾಗಿತ್ತು. ಸಮಯ 7.45 ಆಗಿತ್ತು. ಆಗ ನಿರಾಶ್ರಿತರೊಂದಿಗೆ ಊಟ ಮಾಡುವುದಾಗಿ ಹೇಳಿದಾಗ ಅಧಿಕಾರಿಗಳಿಗೂ ಅಚ್ಚರಿ. ಅನ್ನ ಸಾಂಬರ್ ಊಟ ಮಾಡಿ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಅಧಿಕಾರಿ ನಾಗರಾಜ್, ನಿರಾಶ್ರಿತರ ಕೇಂದ್ರದ ವ್ಯವಸ್ಥಾಪಕ ಮಹಾದೇವಪ್ಪ ಹಾಗೂ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link