ಪಾಲಿಕೆ: 15 ಕೋಟಿ ಕ್ರಿಯಾಯೋಜನೆಗೆ ಡಿಸಿ ಅಸ್ತು

 ತುಮಕೂರು
       ತುಮಕೂರು ಮಹಾನಗರ ಪಾಲಿಕೆಗೆ 2019-2020 ನೇ ಸಾಲಿನ ಎಸ್.ಎಫ್.ಸಿ. ವಿಶೇಷ ಅನುದಾನದಡಿಯಲ್ಲಿ 15 ಕೋಟಿ ರೂ. ಕಾಮಗಾರಿಗಳನ್ನು ಕೈಗೊಳ್ಳಲು ಸಿದ್ದಪಡಿಸಿದ್ದ ಕ್ರಿಯಾಯೋಜನೆಗೆ ತುಮಕೂರು ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ.
      ಇದರ ಜೊತೆಜೊತೆಗೇ ಸದರಿ ಕ್ರಿಯಾಯೋಜನೆಯಲ್ಲಿನ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳು ಅನುಮತಿಸಿದ್ದಾರೆ.
ಯಾವ ವಾರ್ಡ್‍ಗಳಿಗೆ ಲಾಭ?
      ನಗರದ 1, 2, 3, 4, 6, 11, 17, 18, 19, 20, 21, 22, 23, 24, 25, 26, 27, 28, 30, 31, 32, 33, 34, 35 ನೇ ವಾರ್ಡ್‍ಗಳ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ಅಭಿವೃದ್ಧಿ ಇತ್ಯಾದಿಗಾಗಿ ಒಟ್ಟು 15 ಕೋಟಿ ರೂ.ಗಳನ್ನು ವಿನಿಯೋಗಿಸಲು ಕಾಮಗಾರಿಗಳನ್ನು ಪಟ್ಟಿ ಮಾಡಲಾಗಿದ್ದು, ಈ ಪಟ್ಟಿಗೆ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಹಮತ ವ್ಯಕ್ತಪಡಿಸಿದ್ದಾರೆ. 
      ಆ ಬಳಿಕ ಕ್ರಿಯಾಯೋಜನೆ ರೂಪಿಸಿದ್ದು, ಈ ಕ್ರಿಯಾಯೋಜನೆಯಲ್ಲಿರುವ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ ಅನುಷ್ಠಾನಗೊಳಿಸಲು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರು ಕೋರಿದ್ದು, ಬಳಿಕ ಇವುಗಳಿಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿ ದಿನಾಂಕ 16-01-2020 ರಂದೇ ಅಧಿಕೃತ ಜ್ಞಾಪನ (ನಂ. ಡಿಯುಡಿಸಿ/ತಾಂತ್ರಿಕ/ಸಿಆರ್/ 2020, ದಿನಾಂಕ 16-01-2020) ಹೊರಡಿಸಿದ್ದಾರೆ.  
ಅನುಮೋದನೆಗೆ ಷರತ್ತುಗಳು
     ಅನುಮೋದಿತ ಕಾಮಗಾರಿಗಳನ್ನು ಪಾರದರ್ಶಕ ಅಧಿನಿಯಮಗಳನ್ವಯ ಕಡ್ಡಾಯವಾಗಿ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಕರೆದು ನಿರ್ವಹಿಸಬೇಕು. ಕಾಮಗಾರಿಗಳನ್ನು ಶೀಘ್ರವಾಗಿ ನಿರ್ವಹಿಸಲು ಬಿಡಿಯಾಗಿ ಟೆಂಡರ್ ಕರೆಯದೆ ಪ್ಯಾಕೇಜ್ ರೀತಿಯಲ್ಲಿ ಟೆಂಡರ್ ಕರೆಯಬೇಕು. ಇಲ್ಲದಿದ್ದರೆ ಅನುಷ್ಠಾನ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಅಂದಾಜುಗಳಿಗೆ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆ ಪಡೆಯಬೇಕು. ಸರ್ಕಾರದ ಮಾರ್ಗಸೂಚಿಗಳನ್ವಯ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಅನುಮೋದನೆಗೆ ಸಂಬಂಧಿಸಿದಂತೆ ಷರತ್ತುಗಳನ್ನು ವಿಧಿಸಿದ್ದಾರೆ.
ಪಾಲಿಕೆಯಲ್ಲಿ 25 ಜನ  ಇಂಜಿನಿಯರ್‍ಗಳಿದ್ದರೂ..
     ತುಮಕೂರು ಮಹಾನಗರ ಪಾಲಿಕೆಯಲ್ಲಿ ಈಗಂತೂ ಇಂಜಿನಿಯರ್‍ಗಳು ತುಂಬಿ ತುಳುಕುತ್ತಿದ್ದಾರೆ. ಮೂವರು ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳು, ನಾಲ್ವರು ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳು ಹಾಗೂ 18 ಜನ ಕಿರಿಯ/ಸಹಾಯಕ ಇಂಜಿನಿಯರ್‍ಗಳು ಸೇರಿ ಒಟ್ಟು 25 ಜನ ಇಂಜಿನಿಯರ್‍ಗಳಿದ್ದರೂ,
 
       ಈ 15 ಕೋಟಿ ಎಸ್.ಎಫ್.ಸಿ. ವಿಶೇಷ ಅನುದಾನದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ (ಪಿ.ಡಬ್ಲ್ಯು.ಡಿ.) ವಹಿಸಿದ್ದೇಕೆ? ಅವರಿಗೆ ವಹಿಸಲು ಯಾರು ಒತ್ತಡ ಹಾಕಿದ್ದಾರೆ? ಪಾಲಿಕೆ ಇಂಜಿನಿಯರ್‍ಗಳು ಇಂತಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಸಮರ್ಥರೇ? ಪಾಲಿಕೆ ಇಂಜಿನಿಯರ್‍ಗಳ ಬಗ್ಗೆ ನಂಬಿಕೆ ಇಲ್ಲವೇ? ಹೀಗಿದ್ದರೆ ಪಾಲಿಕೆಯಲ್ಲಿ ಇಂಜಿನಿಯರ್‍ಗಳು ಏಕಿರಬೇಕು? ಇನ್ನು ಮುಂದೆ ಎಲ್ಲವನ್ನೂ ಲೋಕೋಪಯೋಗಿ ಇಲಾಖೆಗೇ ವಹಿಸಿಬಿಡಬಹುದಲ್ಲವೇ? ಎಂಬಂತಹ ಪ್ರಶ್ನೆಗಳು ಇದೀಗ ಪಾಲಿಕೆಯಲ್ಲಿ ಚರ್ಚಿಸಲ್ಪಡುತ್ತಿವೆ.
 
    ಈ 15 ಕೋಟಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆಯೇ? ಕ್ರಿಯಾಯೋಜನೆಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆಯೇ? ಕಾಮಗಾರಿಗಳನ್ನು ಈಗಾಗಲೇ ಆರಂಭಿಸಲಾಗಿದೆಯೇ? ಕಾಮಗಾರಿ ಸ್ಥಳದಲ್ಲಿ ನಾಮಫಲಕ ಹಾಕಲಾಗಿದೆಯೇ? ಎಂಬ ಪ್ರಶ್ನೆಗಳನ್ನು ಹೋರಾಟಗಾರರು ಮುಂದಿಡುತ್ತಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link