ಚಿತ್ರದುರ್ಗ:
ಮಾಸಿಕ ಹನ್ನೆರಡು ಸಾವಿರ ರೂ.ವೇತನ ಸೇರಿದಂತೆ ಹದಿಮೂರು ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ನೀಡಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಎ.ಐ.ಯು.ಟಿ.ಯು.ಸಿ.ಸಹಯೋಗದೊಂದಿಗೆ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಳೆದ ಒಂಬತ್ತು ತಿಂಗಳಿನಿಂದಲೂ ಎಂ.ಸಿ.ಟಿ.ಎಸ್.ಪ್ರೋತ್ಸಾಹ ಧನ ನೀಡದೆ ಸತಾಯಿಸುತ್ತಿರುವ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಪ್ರೋತ್ಸಾಹ ಧನವನ್ನು ಒಟ್ಟಿಗೆ ಸೇರಿಸಿ ಕನಿಷ್ಟ ಮಾಸಿಕ ಗೌರವ ಧನ 12 ಸಾವಿರ ರೂ.ನಿಗಧಿಪಡಿಸಬೇಕು.ಆಶಾ ಸಾಫ್ಟ್ ಅಥವಾ ಆರ್.ಸಿ.ಎಚ್.ಫೋರ್ಟಲ್‍ಗೆ ಆಶಾ ಪ್ರೋತ್ಸಾಹ ಧನ ಜೋಡಣೆ ರದ್ದುಪಡಿಸಿ.
ಕಳೆದ ಒಂಬತ್ತು ತಿಂಗಳಿಂದ ಬಾಕಿಯಿರುವ ಎಂ.ಸಿ.ಟಿ.ಎಸ್.ಸೇವೆಗಳ ಆಶಾ ಪ್ರೋತ್ಸಾಹ ಧನವನ್ನು ಒಂದು ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿ ಆಶಾಗೆ ಮಾಸಿಕ ಮೂರು ಸಾವಿರ ರೂ.ನೀಡಬೇಕು. ಇದನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸಬೇಕು. ಇಲ್ಲವೇ ಒಂಬತ್ತು ತಿಂಗಳಲ್ಲಿ ಆಶಾ ಕಾರ್ಯಕರ್ತೆಯರು ಮಾಡಿರುವ ಮ್ಯಾನುವಲ್ ವರದಿ ಸಂಗ್ರಹಿಸಿ ಪ್ರೋತ್ಸಾಹ ಧನವನ್ನು ಪಾವತಿಸಬೇಕು.
ಹಿಂದಿನ ಆರೋಗ್ಯ ಸಚಿವರು ನೀಡಿದ ಭರವಸೆಯಂತೆ ಈಗಾಗಲೇ ಚಾಲ್ತಿಯಲ್ಲಿರುವ ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ ಆಶಾಗಳ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಅಥವಾ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಲು ಕಾರ್ಫಸ್ ಫಂಡ್ ಮೀಸಲಿಡಬೇಕು.
ನಿವೃತ್ತಿಯಾದ ಮೇಲೆ ಪಿಂಚಣಿಗಾಗಿ ನಿವೃತ್ತಿ ಇಡಿಗಂಟು ಇಡಬೇಕು.
ಸಾಮಾಜಿಕ ಸುರಕ್ಷಾ ಯೋಜನೆಯ ವ್ಯಾಪ್ತಿಗೊಳಪಡುವ ಪ್ರಧಾನ ಮಂತ್ರಿ ಜೀವನ್‍ಜ್ಯೋತಿ ಯೋಜನೆ ಮತ್ತು ಸುರಕ್ಷಾ ಭೀಮ ಯೋಜನೆಯನ್ನು ಕೂಡಲೆ ಜಾರಿಗೊಳಿಸಿ ಸಂಪೂರ್ಣ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕು.ಹೆರಿಗೆ ರಜೆ ನೀಡಿ ರಜೆಯಲ್ಲಿ ಮಾಸಿಕ ಗೌರವ ಧನ ಕೊಡಬೇಕು.
ತಿಂಗಳಿಗೆ ಎರಡು ಬಾರಿ ಲಾರ್ವ ಸರ್ವೆ ಮತ್ತು ವಿವಿಧ ಸರ್ವೆಗಳಿಗೆ ಹಲವು ವರ್ಷಗಳಿಂದ ಬಹುತೇಕ ಕಡೆಗಳಲ್ಲಿ ಪ್ರೋತ್ಸಾಹ ಧನ ಇನ್ನು ನೀಡಿಲ್ಲ. ಪ್ರತಿದಿನದ ಸರ್ವೆ, ಜಾಥ, ಜಿಲ್ಲಾ ತಾಲೂಕು ಕೇಂದ್ರದ ಸಭೆಗಳಿಗೆ ಹೋದಾಗ ಕನಿಷ್ಟ ಮುನ್ನೂರು ರೂ. ದಿನಭತ್ಯೆಯನ್ನು ಅಂದೇ ನೀಡಬೇಕು.
ಪ್ರತಿ ತಿಂಗಳು ವೇತನವನ್ನು ನಿಗಧಿತ ದಿನಾಂಕದೊಳಗೆ ಬಿಡುಗಡೆಗೊಳಿಸಿ ಯಾವ ತಿಂಗಳ ವೇತನ ಬಿಡುಗಡೆಯಾಗುತ್ತದೋ ಆ ತಿಂಗಳ ವೇತನವೆಂದು ಆಶಾ ಪಾಸ್‍ಬುಕ್‍ನಲ್ಲಿ ನಮೂದಿಸಲು ಕ್ರಮಕೈಗೊಳ್ಳಿ.
ಕೆಲವೆಡೆ ಆಶಾಗಳಿಗೆ ನಿಗಧಿಪಡಿಸಿದ ಕೆಲಸಗಳನ್ನು ಹೊರತುಪಡಿಸಿ ಇತರೆ ಕೆಲಸಗಳಲ್ಲಿ ತೊಡಗಿಸುತ್ತಿರುವುದು ನಿಲ್ಲಬೇಕು.
ಕೇಂದ್ರದ ಮಾರ್ಗಸೂಚಿಯಂತೆ ನಗರ ಆಶಾಗಳಿಗೆ 2000-2500 ಜನಸಂಖ್ಯೆಗನುಗುಣವಾಗಿ ಕೆಲಸ ಮಾಡಲು ಕ್ರಮಕೈಗೊಳ್ಳಿ.
ಆಯುಕ್ತರು, ಎಂ.ಡಿ., ಎನ್.ಎಚ್.ಎಂ.ಇವರ ಸಮ್ಮುಖದಲ್ಲಿ ಸಂಘದೊಂದಿಗೆ ನಡೆದಿರುವ ಹಿಂದಿನ ಸಭೆಗಳ ನಿರ್ಣಯಗಳನ್ನು ಜಾರಿ ಮಾಡಬೇಕು. ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ನಿವಾರಣಾ ಸಭೆಯನ್ನು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಬೇಕೆಂದು ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ ಮಾತನಾಡಿ ರಾಜ್ಯದಲ್ಲಿ ನಲವತ್ತು ಸಾವಿರ ಆಶಾ ಕಾರ್ಯಕರ್ತೆಯರು ಜೀವನ ಭದ್ರತೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಕೆಲಸಕ್ಕೆ ತಕ್ಕಂತೆ ಸರ್ಕಾರ ಗೌರವಧನ ನೀಡದೆ ಪುಕ್ಕಟೆಯಾಗಿ ದುಡಿಸಿಕೊಳ್ಳುತ್ತಿದೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇದೇ ತಿಂಗಳ ಹದಿನೆಂಟರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸರ್ಕಾರವನ್ನು ಎಚ್ಚರಿಸಿದರು.
ನಗರ ಮತ್ತು ಹಳ್ಳಿಗಳಲ್ಲಿ ಗರ್ಭಿಣಿ ಮಹಿಳೆಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆ ಅರಿವು ಮೂಡಿಸಿ ಕ್ಷಯ, ಕುಷ್ಟರೋಗ, ಮಲೇರಿಯಾ, ಡೆಂಗ್ಯೂ, ಚಿಕನ್‍ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ದಿಯ ಕುರಿತು ಜಾಗೃತಿ ಮೂಡಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಬೆದರಿಕೆ ಹಾಕಿದರು.
ಎ.ಐ.ಯು.ಟಿ.ಯು.ಸಿ. ಜಿಲ್ಲಾ ಸಂಚಾಲಕ ಹೆಚ್.ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಮಮತ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.