ಕೊಟ್ಟೂರು
ವಾರದ ರಜೆಯ ದಿನವಾದ ಭಾನುವಾರದಂದೂ ಪಟ್ಟಣದ ಅಂಚೆ ಕಚೇರಿ ಸಿಬ್ಬಂದಿಯವರು ಆಧಾರ್ ಕಾರ್ಡ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಜನರ ಅಲೆದಾಟವನ್ನು ತಪ್ಪಿಸುವ ಕಾರ್ಯವನ್ನು ಕೈಗೆತ್ತಿಕೊಂಡರು.
ಪಟ್ಟಣದ ಮುಖ್ಯ ಅಂಚೆ ಕಚೇರಿ ಇರುವ ಎಪಿಎಂಸಿ ಕಟ್ಟಡದಲ್ಲಿ ತೆರೆಯಲಾಗಿರುವ ಆಧಾರ್ ಚೀಟಿ ನೋಂದಣಿ ಕೌಂಟರ್ನಲ್ಲಿ ರಜಾ ದಿನದಂದು 100ರಷ್ಟು ಜನರು ತಮ್ಮ ಆಧಾರ್ ಚೀಟಿ ನೋಂದಾಯಿಸಿಕೊಂಡರು.
ಕಚೇರಿಯ ಒಂದಿಬ್ಬರು ಸಿಬ್ಬಂದಿಗೆ ಈ ವಾರದಲ್ಲಿ ಬಳ್ಳಾರಿಯಲ್ಲಿ ತರಬೇತಿ ಇದ್ದುದರಿಂದ, ಕಚೇರಿ ಕೆಲಸದ ನಡುವೆ ಆಧಾರ್ ಕೆಲಸ ಮಾಡಲು ಸಾಧ್ಯವಾಗದ್ದರಿಂದ ತಾತ್ಕಾಲಿಕವಾಗಿ ಆಧಾರ್ ಕೌಂಟರ್ ಬಂದ್ ಮಾಡಲಾಗಿತ್ತು.
ವಾರದ ನಡುವೆ ಆಧಾರ್ ಚೀಟಿ ನೋಂದಾಯಿಸಲು ಬರಲು ಸಾಧ್ಯವಾಗದ ಸರಕಾರಿ ನೌಕರರು ಹಾಗೂ ಇತರರಿಗೆ ಸಹಾಯವಾಗಲೆಂದು ಇಲ್ಲಿನ ಅಂಚೆ ಸಿಬ್ಬಂದಿ ಭಾನುವಾರದಂದು ವಿಶೇಷವಾಗಿ ಕೌಂಟರ್ ತೆರೆದು ಸಾರ್ವಜನಿಕರ ಸೇವೆಗೆ ಮುಂದಾದರು. ಹೊಸ ಆಧಾರ್ ಚೀಟಿ, ತಿದ್ದುಪಡಿ ಕಾರ್ಯವನ್ನು ಕೌಂಟರ್ನಲ್ಲಿ ನಡೆಸಲಾಗುತ್ತಿದೆ.
ಆಧಾರ್ ಚೀಟಿ ನೋಂದಣಿ ಕಾರ್ಯವನ್ನು ಕೇವಲ ಅಂಚೆ ಕಚೇರಿಗಳಲ್ಲಿ ಮಾತ್ರ ಮಾಡಲಾಗುತ್ತಿದೆ. ಕೊಟ್ಟೂರು ಸುತ್ತ ಮುತ್ತ ನೂರಾರು ಹಳ್ಳಿಗಳಿದ್ದು, ಅನೇಕರು ಆಧಾರ್ ಚೀಟಿ ಮಾಡಿಸಿಲ್ಲ. ಕೇವಲ ಒಂದೇ ಕೌಂಟರ್ ಇರುವುದರಿಂದ ಆಧಾರ್ ಮಾಡಿಸಲು ಜನರು ಪರದಾಡುವುದು ತಪ್ಪಿಲ್ಲ. ಒಂದು ಆಧಾರ್ ಚೀಟಿ ನೊಂದಾಯಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಕೆಲ ಸಮಯ ಸರ್ವರ್ ಸಮಸ್ಯೆಯೂ ಇರುತ್ತದೆ. ಅಲ್ಲದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯೇ ಆಧಾರ್ ಚೀಟಿ ನೋಂದಣಿ ಕಾರ್ಯ ನಿರ್ವಹಿಸಬೇಕು. ಕಚೇರಿ ಕೆಲಸದ ಜೊತೆ ಇದನ್ನೂ ನಿರ್ವಹಿಸಬೇಕು. ಹೀಗಾಗಿ ದಿನಕ್ಕೆ 30ಕ್ಕಿಂತ ಹೆಚ್ಚು ಕಾರ್ಡ್ ಮಾಡಲು ಸಿಬ್ಬಂದಿ ಹರ ಸಾಹಸ ಪಡುತ್ತಾರೆ.
ಭಾನುವಾರದ ರಜಾ ದಿನದಂದು ನಡೆದ ಆಧಾರ್ ಚೀಟಿ ನೋಂದಣಿ ಕಾರ್ಯದಲ್ಲಿ ಪೋಸ್ಟ್ ಮಾಸ್ಟರ್ಗಳಾದ ಎಸ್.ರಾಜಶೇಖರ, ಅಂಚೆ ಕೊಟ್ರೇಶ್, ಆಧಾರ್ ಅಡ್ಮಿನ್ ವೆಂಕಟೇಶ್, ಸಹಾಯಕರಾದ ಜ್ಯೋತಿ, ವಸಂತ್ ಇದ್ದರು.ಸಿಬ್ಬಂದಿಗೆ ಬಳ್ಳಾರಿಯಲ್ಲಿ ತರಬೇತಿ ಇದ್ದುದರಿಂದ ಆಧಾರ್ ಕೌಂಟರ್ ತಾತ್ಕಾಲಿಕ ಬಂದ್ ಮಾಡಿತ್ತು. ನಮ್ಮ ಅಂಚೆ ಅಧೀಕ್ಷಕ ಬಸವರಾಜ ಸೂಚನೆಯಂತೆ ಭಾನುವಾರದಂದು ಕೌಂಟರ್ ತೆರೆದು ಹೆಚ್ಚು ಆಧಾರ್ ಚೀಟಿ ನೋಂದಾವಣಿ ಕಾರ್ಯ ನಿರ್ವಹಿಸಿದ್ದೇವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
