ದಾವಣಗೆರೆ:
ಭತ್ತ ಮತ್ತು ಮೆಕ್ಕೆಜೋಳಕ್ಕೆ ಬೆಲೆ ನಿಗದಿ ಮಾಡವಂತೆ ಆಗ್ರಹಿಸಿ, ನ.12ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಭತ್ತ ಹಾಗೂ ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ನ.12ರಂದು ಬೃಹತ್ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಆದ್ದರಿಂದ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ರೈತ ಬೆಳೆ ಬೆಳೆಯಲು ವಿನಿಯೋಗಿಸಿದ ಬಂಡವಾಳದ ಜೊತೆಗೆ ಅದರ ಅರ್ಧ ಮೊತ್ತವನ್ನು ಸೇರಿಸಿ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈಗ ಭತ್ತಕ್ಕೆ 1900 ರೂ. ಹಾಗೂ ಮೆಕ್ಕೆಜೋಳಕ್ಕೆ 1700 ರೂ. ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ಕೊಟ್ಟ ಮಾತು ಮರೆತಿದೆ ಎಂದು ಆರೋಪಿಸಿದರು.
ಕೇರಳ ಸರ್ಕಾರವು ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಜೊತೆಗೆ ಬೋನಸ್ ನೀಡಿ, ರೈತರಿಗೆ ಸ್ಪಂದಿಸುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಬೋನಸ್ ನೀಡಿ ರೈತರಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದ ಅವರು, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭತ್ತಕ್ಕೆ 100 ರೂ., ಮೆಕ್ಕೆಜೋಳಕ್ಕೆ 50 ರೂ. ಸಹಾಯ ಧನ ನೀದಿದ್ದರು ಎಂದು ಹೇಳಿದರು.
ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಬೆಂಬಲ ಬೆಲೆಗೆ ಬೋನಸ್ ಸೇರಿಸಿ ಕ್ವಿಂಟಾಲ್ ಭತ್ತಕ್ಕೆ 4 ಸಾವಿರ ರೂ. ಹಾಗೂ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 3 ಸಾವಿರ ರೂ.ಗಳನ್ನು ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಇದಾದರೆ, ಸರ್ಕಾರ ರೈತರ ಸಾಲ ಮನ್ನಾ ಮಾಡುವ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಬೆಳೆಗಳಿಗೆ ಬೆಲೆ, ಒಳ್ಳೆಯ ದರ ನೀಡಿದರೆ ರೈತರೇ ಸಾಲ ತೀರಿಸಲಿದ್ದಾರೆ. ಸರ್ಕಾರ ಸಾಲ ಮನ್ನಾ ಮಾಡಬೇಕಾದ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ. ಇದೇ ಉದ್ದೇಶ ಇಟ್ಟುಕೊಂಡು ಹೋರಾಟ ಸಾಗಲಿದೆ. ಬೆಳೆ ನಷ್ಟ ಪರಿಹಾರದ ವರದಿಯನ್ನು ಕೃಷಿ ಇಲಾಖೆ, ಜಿಲ್ಲಾಡಳಿತ ಗಳು ಸರ್ಕಾರಕ್ಕೆ ತಪ್ಪು ತಪ್ಪಾಗಿ ನೀಡಿವೆ. ಶೇ.80ರಷ್ಟು ಬೆಳೆ ಹಾನಿಯಾಗಿದೆ. ಖರ್ಚು ಮಾಡಿದ ಹಣವೂ ರೈತರಿಗೆ ವಾಪಾಸ್ಸು ಬರುವುದಿಲ್ಲ. ಆದರೆ, ಕೃಷಿ ಇಲಾಖೆ ಬೇಕಾಬಿಟ್ಟಿ ವರದಿ ನೀಡಿ, ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣವೇ ಕೃಷಿ ಇಲಾಖೆ ನೀಡಿದ ಬೆಳೆ ಹಾನಿ ಪರಿಹಾರದ ವರದಿಯನ್ನು ಜಿಲ್ಲಾಡಳಿತ ಪರಿಶೀಲಿಸಿ ಸಲ್ಲಿಸಬೇಕು. ಕೃಷಿ ಇಲಾಖೆ ನೀಡಿರುವಂತೆ ತಪ್ಪು ಮಾಹಿತಿ ನೀಡಿದರೆ, ರೈತರಿಗೆ ಅನ್ಯಾಯವಾಗಲಿದೆ. ಬೇಕಾಬಿಟ್ಟಿ ವರದಿ ನೀಡಿರುವುದನ್ನು ಗಮನಿಸಿದರೆ ಮೇಲ್ನೋಟಕೆ ನೋಡಿದರೆ ಕೃಷಿ ಅಧಿಕಾರಿಗಳು ಆಯಾ ಬೆಳೆ ವಿಮೆ ಕಂಪನಿಗಳ ಜೊತೆಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ರೈತರು ಬೆಳೆ ವಿಮೆ ಕಟ್ಟಿದ್ದರೂ ವರದಿಯಲ್ಲಿ ಶೇ.50ರಷ್ಟು ಬೆಳೆ ಬಂದಿದ್ದು, ಶೇ.50ರಷ್ಟು ಹಾನಿಯಾಗಿದೆ ಎಂಬ ವರದಿಯನ್ನು ಕೃಷಿ ಅಧಿಕಾರಿಗಳು ನೀಡುತ್ತಿರುವುದನ್ನು ನೋಡಿದರೆ, ಅಧಿಕಾರಿಗಳು ರೈತರ ಪರವಾಗಿದ್ದಾರೋ, ವಿಮಾ ಕಂಪನಿಗಳ ಬಾಲಂಗೋಚಿಗಳು ಎಂಬ ಪ್ರಶ್ನೆ ಉದ್ಭವವಾಗಲಿದೆ. ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 90 ಕೋಟಿ ಬೆಳೆ ಹಾನಿಯಾಗಿದ್ದು, 60 ಕೋಟಿ ರು.ಗಳಷ್ಟು ಸಣ್ಣ ರೈತರು, 30 ಕೋಟಿಯಷ್ಟು ದೊಡ್ಡ ರೈತರಿಗೆ ಹಾನಿಯಾಗಿದೆ ಎಂಬುದಾಗಿ ವರದಿ ನೀಡಿರುವ ಬಗ್ಗೆ ಮಾಹಿತಿ ಇದೆ. ಆದರೆ, ಜಿಲ್ಲೆಯಲ್ಲಿ ಶೇ.80ರಷ್ಟು ಬೆಳೆ ಹಾನಿಯಾಗಿದೆ. ಎಂಬುದನ್ನು ಜಿಲ್ಲಾಡಳಿತ ಮರೆ ಮಾಚುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಗುಮ್ಮನೂರು ಬಸವರಾಜ, ಆಲೂರು ಪರಶುರಾಮ, ನಾಗನೂರು ನಾಗೇಂದ್ರಪ್ಪ, ಕಲ್ಕೆರೆ ಅಣ್ಣಪ್ಪ, ಕಾಡಜ್ಜಿ ಪರಶುರಾಮ, ಕೋಲ್ಕುಂಟೆ ಬಸಪ್ಪ, ಓಂಕಾರಪ್ಪ, ಹುಚ್ಚವ್ವನಹಳ್ಳಿ ರಜಾಕ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ