ಪ್ರತಿಭಾ ಪುರಸ್ಕಾರ…!!!

ಹೊನ್ನಾಳಿ:

        ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಸಾಧ್ಯವಾದರೆ ಶಾಲೆಗಳ ಬಲವರ್ಧನೆ ಸಾಧ್ಯ. ಅದರಲ್ಲೂ ಉರ್ದು ಶಾಲೆಗಳ ಬಲವರ್ಧನೆಗೆ ಸಮುದಾಯ ಕೈಜೋಡಿಸಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ, ಪದನಿಮಿತ್ತ ಉಪ ನಿರ್ದೇಶಕ(ಅಭಿವೃದ್ಧಿ) ಎಚ್.ಕೆ. ಲಿಂಗರಾಜ್ ಹೇಳಿದರು.

          ಇಲ್ಲಿನ ಗುರುಭವನದಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಮತ್ತು ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಹಾಗೂ ಜಿಲ್ಲೆಯ ಉರ್ದು ಶಾಲೆಗಳ ಬಲವರ್ಧನೆ ಕುರಿತ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

         ಪೋಷಕರ ಸಹಕಾರ ಇದ್ದರೆ ಶಾಲೆಯ ಅಭಿವೃದ್ಧಿ ಸಾಧ್ಯ. ಗುಣಾತ್ಮಕ ಶಿಕ್ಷಣ ಖಾತ್ರಿ ಕೂಡ ಸಾಧ್ಯವಾಗುತ್ತದೆ. ಶಿಕ್ಷಕರು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಶೈಕ್ಷಣಿಕ ಪ್ರಗತಿ ತಂತಾನೇ ಆಗುತ್ತದೆ ಎಂದು ತಿಳಿಸಿದರು. ಉರ್ದು ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯ ಎಲ್ಲ ಸ್ತರದ ಅಧಿಕಾರಿಗಳು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನ ಉರ್ದು ಶಾಲೆಗಳು ರಾಜ್ಯಕ್ಕೇ ಮಾದರಿ ಆಗುವಂತಾಗಲಿ ಎಂದು ಹಾರೈಸಿದರು.

         ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್ ಮಾತನಾಡಿ, ಹೊನ್ನಾಳಿಯಲ್ಲಿ ಉರ್ದು ಸಮೂಹ ಸಂಪನ್ಮೂಲ ಕೇಂದ್ರ ಉದ್ಘಾಟನೆಗೊಂಡಿದೆ. ಈ ಕೇಂದ್ರದಲ್ಲಿ ಅನೇಕ ಸಂವಾದ, ಚರ್ಚೆಗಳು ನಡೆದು ಎಲ್ಲಾ ಶಿಕ್ಷಕರಿಗೆ ಸಕಾಲದಲ್ಲಿ ಸೂಕ್ತ ಮಾರ್ಗದರ್ಶನ ಲಭಿಸಿ ಉರ್ದು ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವಂತಾಗಲಿ ಎಂದು ಹೇಳಿದರು.

         ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಸ್. ಉಮಾಶಂಕರ್ ಮಾತನಾಡಿ, ತಾಲೂಕಿನ ಎಲ್ಲಾ ಉರ್ದು ಶಾಲೆಗಳಲ್ಲಿ ಬೋಧನಾ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಈ ಹಿಂದೆ ಉರ್ದು ಶಾಲೆಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯಿಂದ ಹೊರಗೆ ಉಳಿಯುತ್ತಿದ್ದರು. ಆದರೆ, ಇದೀಗ ಸಮುದಾಯ ಜಾಗೃತಿಗೊಂಡಿದ್ದು, ಉರ್ದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದೆ ಎಂದು ತಿಳಿಸಿದರು.
“ಜಿಲ್ಲೆಯ ಉರ್ದು ಪ್ರಾಥಮಿಕ ಶಾಲೆಗಳ ಬಲವರ್ಧನೆ” ಕುರಿತು ಶಿಕ್ಷಕರಾದ ಸೈಯ್ಯದ್ ಇಲಿಯಾಸ್ ಹಾಗೂ ಮಹಮ್ಮದ್ ಅಯೂಬ್ ಉಪನ್ಯಾಸ ನೀಡಿದರು.ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಫಾರೂಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

          ದಾವಣಗೆರೆ ಡಯಟ್‍ನ ಹಿರಿಯ ಉಪನ್ಯಾಸಕ ಅಯೂಬ್ ಸೊರಬ, ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ಕರಿಬಸಯ್ಯ, ಕಾರ್ಯದರ್ಶಿ ವೇದಮೂರ್ತಿ, ನಿರ್ದೇಶಕ ಎಚ್.ಜಿ. ಪುರುಷೋತ್ತಮ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಮಲ್ಲೇಶಪ್ಪ, ಉರ್ದು ಇಸಿಒ ಮಹಮ್ಮದ್ ಹಬೀಬುರ್ ರಹಮಾನ್, ಸಿಆರ್‍ಪಿಗಳಾದ ಸೈಯ್ಯದ್ ಹಸನ್ ಷರೀಫ್, ಸೈಯ್ಯದ್ ಅಲಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಾವಿನಕೋಟೆ ಶಾಲೆಯ ಶಿಕ್ಷಕ ಅಖಿಲ್ ಪಾಷಾ, ಸಂಘದ ರಾಜ್ಯ ಸಮಿತಿಯ ಅಧ್ಯಕ್ಷ ಉಸ್ಮಾನ್ ಅಂಗಡಿ, ಕಾರ್ಯದರ್ಶಿ ಹುಸೇನ್ ಪೀರ್, ಸಂಘಟನಾ ಕಾರ್ಯದರ್ಶಿ ಮುಬಾರಕ್, ಸುರೇಶ್, ಶಂಕರ್‍ನಾಯ್ಕ್, ಫಾಜಿಲ್ ಖಾನ್, ಉಮ್ಮತ್ ಅಲಿ, ಇಮ್ತಿಯಾಜ್ ಖತೀಬ್, ಅಬ್ದುಲ್ ಲತೀಫ್, ತಬ್ರೇಜ್ ಉನ್ನೀಸಾ, ಶಮೀಮ್ ಉನ್ನೀಸಾ ಮತ್ತಿತರರು ಉಪಸ್ಥಿತರಿದ್ದರು.

         ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ರುಚಿತಾ ಮತ್ತು ಮೊದಲ ಹತ್ತು ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲೆಯ ಏಳು ತಾಲೂಕುಗಳ ಉತ್ತಮ ನಲಿ-ಕಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಾಲೂಕಿನ ನಾಲ್ವರು ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಓರ್ವ ಶಿಕ್ಷಕರಿಗೆ “ಗುರುಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link