ಮನೆ ನಿರ್ಮಾಣ ಕಾರ್ಯ ತ್ವರಿತಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಾಕೀತು

ಹಾವೇರಿ
   
        ನೆರೆಹಾನಿ ಮನೆಗಳ ದುರಸ್ಥಿ ಮತ್ತು ನಿರ್ಮಾಣ ಕಾರ್ಯ ತ್ವರಿತವಾಗಿ ಆಗಲೇಬೇಕು. ಪ್ರಗತಿಯ ವಿವರ ಹೇಳಿ ಸಭೆಗೆ ಬಂದು ಹಳೆಯ ಕಥೆಯನ್ನು ಹೇಳಬೇಡಿ, ಕೆಲಸಮಾಡಿ ಮನೆ ನಿರ್ಮಾಣ, ದುರಸ್ಥಿ ಕಾರ್ಯಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ. ಇಲ್ಲವಾದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತೀವ್ರ ತರಾಟೆಗೆ ತಗೆದುಕೊಂಡ ಪ್ರಸಂಗ ಇಂದು ಜರುಗಿತು.
       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ ಮನೆಗಳ ನಿರ್ಮಾಣ, ದುರಸ್ಥಿ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಆಶ್ರಯ ಮನೆಗಳ ನಿರ್ಮಾಣ ಕುರಿತಂತೆ ತಹಶೀಲ್ದಾರ ಹಾಗೂ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಣಾ ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರಗಳು ನೀಡಿದ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
        ಸರ್ಕಾರ ನಿಮಗೆ ಸಂಬಳ ಕೊಡುತ್ತಿದೆ ಸರ್ಕಾರದ ಮಾರ್ಗಸೂಚಿಯಂತೆ ಕೆಲಸಮಾಡಿ. ಅನರ್ಹ ಎಂದು ಕಂಡುಬಂದರೆ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಿ, ಅರ್ಹ ಫಲಾನುಭವಿಗಳ ಮನೆ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಗಳಿಗೆ ತ್ವರಿತವಾಗಿ ಕ್ರಮವಹಿಸಿ. ಇಲ್ಲವಾದರೆ ನಿಮ್ಮ ಕಾರ್ಯನಡೆಯಿಂದ ಅನುಮಾನ ಮೂಢುತ್ತದೆ ಎಂದು ಎಚ್ಚರಿಸಿದರು.
      ಮನೆ ಕಳೆದುಕೊಂಡ ಸಂತ್ರಸ್ತರು ಆರೇಳು ತಿಂಗಳಾದರೂ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೆಲ  ತಹಶೀಲ್ದಾರಗಳಿಗೆ ಸಾಧ್ಯವಾಗಿಲ್ಲ. ಇನ್ನೂ ಸಬೂಬು ಹೇಳುತ್ತಿದ್ದೀರಿ. ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಒಂದೊಮ್ಮೆ ಇದೇ ಮಂದಗತಿಯ ಪ್ರಗತಿಯನ್ನು ತೋರಿಸಿದರೆ ವಿಳಂಬ ನೀತಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಎಸಿಬಿ ತನಿಖೆಗೆ ಆದೇಶಿಸಬೇಕಾದೀತು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಎ,ಬಿ ಹಾಗೂ ಸಿ ವರ್ಗವಾಗಿ ವಿಂಗಡಿಸಿ ವರ್ಗವಾರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ನಿರ್ದೇಶನವನ್ನು ನೀಡಲಾಗಿದೆ.
 
     ಆರಂಭಿಕ ಹಂತ ತಳಪಾಯ, ಗೋಡೆ ಛಾವಣಿ ಹಾಗೂ ಪೂರ್ಣಗೊಂಡ ಮನೆಗಳ ಜಿಪಿಎಸ್ ಅಳವಡಿಕೆ, ಆಡಿಟ್ ವರದಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು, ನಿವೇಶನ ಸ್ಥಳಾಂತರ ಅಗತ್ಯವಿದ್ದರೆ ಪರಿಶೀಲಿಸಿ ಅನುಮತಿ ನೀಡುವುದು ಈ ಕಾರ್ಯಗಳು ಬಾಕಿ ಉಳಿದಿದ್ದರೆ ತ್ವರಿತವಾಗಿ ಇತ್ಯರ್ಥಪಡಿಸಿ ಎಂದು  ಸೂಚನೆ ನೀಡಿದರು.
ಮರಳಿನ  ವ್ಯವಸ್ಥೆ:
 
        ಆಶ್ರಯ ಮನೆ ಹಾಗೂ ನೆರೆಯಿಂದ ಹಾನಿಯಾದ ಮನೆಗಳ ದುರಸ್ಥಿ ಹಾಗೂ ಪುನರ್ ನಿರ್ಮಾಣ ಕಾರ್ಯಕ್ಕೆ ಮರಳಿನ ಕೊರತೆ ಕಾರಣ ವಿಳಂಬವಾಗುತ್ತಿರುವ ಕುರಿತಂತೆ ವಿವಿಧ ತಹಶೀಲ್ದಾರಗಳು ಸಭೆಯ ಗಮನಕ್ಕೆ ತಂದಾಗ ತಾಲೂಕಾ ಟಾಸ್ಕ್‍ಫೋಸ್ ಸಮಿತಿ ವತಿಯಿಂದಲೇ ಮರಳು ಪೂರೈಕೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. 
       ಸರ್ಕಾರದ ಮಾರ್ಗಸೂಚಿಯಂತೆ ಆಶ್ರಯ ಹಾಗೂ ನೆರೆ ಹಾನಿ ಮನೆಗಳಿಗೆ ರಿಯಾಯಿತಿ ದರದಲ್ಲಿ ಮರಳು ಪೂರೈಸಲು ಸರ್ಕಾರಿ ಮರಳು ಬ್ಲಾಕ್‍ಗಳಲ್ಲಿ ವಿಶೇಷ ವ್ಯವಸ್ಥೆ ಮಾಡಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳು ಈ ಜವಾಬ್ದಾರಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
      ಫಲಾನುಭವಿಗಳು ನೇರವಾಗಿ ಸರ್ಕಾರಿ ಮರಳು ಬ್ಲಾಕ್‍ಗಳಿಂದ  ಮರಳು ತೆಗೆದುಕೊಂಡುಹೋಗಬಹುದು. ಮನೆ ನಿರ್ಮಾಣಕ್ಕೆ ಸರ್ಕಾರದ ಆದೇಶ, ನಿಗಧಿತ ಮೊತ್ತದ ಡಿಡಿಯನ್ನು ಸಲ್ಲಿಸಬೇಕಾಗುತ್ತದೆ. ಪ್ರತಿ ಟ್ರಿಪ್‍ಗೆ ಪ್ರತ್ಯೇಕವಾದ ಪರವಾನಿಗೆ ನೀಡಬೇಕು. ಫಲಾನುಭವಿಗಳ ಹೆಸರಿನಲ್ಲಿ ಮಧ್ಯವರ್ತಿಗಳು ಮರಳು ಸಾಗಿಸದಂತೆ ತಾಲೂಕಾ ಟಾಸ್ಕ್‍ಫೋರ್ಸ್ ಸಮಿತಿ ಕ್ರಮವಹಿಸಬೇಕು ಎಂದು ಸೂಚಿಸಿದರು.
     ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆ ಮುಖ್ಯಸ್ಥರು ನಗರ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ವಿವರ, ಪ್ರತಿ ಮನೆಗೆ ಬೇಕಾದ ಮರಳಿನ ಪ್ರಮಾಣದ ವಿವರವನ್ನು ತಹಶೀಲ್ದಾರಗಳಿಗೆ ಸಲ್ಲಿಸಬೇಕು. ಎಲ್ಲ ಫಲಾನುಭವಿಗಳಿಗೂ ಮರಳು ದೊರಕುವಂತಾಗಬೇಕು ಎಂದು ಸೂಚನೆ ನೀಡಿದರು.
      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ ಹಾಗೂ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರಗಳಾದ ಶಂಕರ್, ಬಸವನಗೌಡ ಕೊಟೂರ, ಭಗವಾನ್, ಗುರುಬಸವರಾಜ, ಮಲ್ಲಿಕಾರ್ಜುನ, ಶ್ರೀಮತಿ ಶರಣಮ್ಮ ಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಶ್ರೀಮತಿ ಪುಷ್ಪಲತಾ ಎಸ್.ಕವಲೂರು,  ವಿವಿಧ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link