ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಎಲ್ಲಾ ಮೇವು ಬ್ಯಾಂಕ್‍ನವರಿಗೆ ಮೇವಿನ ಹಣ ನೀಡದಂತೆ ತಹಸೀಲ್ದಾರ್ ರಮೇಶಬಾಬು ಹಾಗೂ ತಾಲ್ಲೂಕು ಸಹಾಯಕ ಪಶುವೈದ್ಯಾಧಿಕಾರಿ ನಾಗಭೂಷಣ್‍ರಿಗೆ ಮಿಡಿಗೇಶಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಕಟ್ಟುನಿಟ್ಟಿನ ಆದೇಶ ನೀಡಿದರು. ಮೇವು ಸರಬರಾಜು ಗುತ್ತ್ತಿಗೆದಾರ ಆಂಧ್ರದ ಕನೇಕಲ್ಲು ಗ್ರಾಮದ ಮಹೇಶ ಎನ್ನುವರಿಗೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು ಛೀಮಾರಿ ಹಾಕಿದರು.
ಕಸಬಾ ಹೋಬಳಿಗೆ ಸೇರಿದ ಚಿನಕವಜ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿಬೀಳು ಗ್ರಾಮಕ್ಕು ಅವರು ಭೇಟಿ ನೀಡಿದ್ದು ಮೇವನ್ನು ಪರಿಶೀಲಿಸಿದರು. ಮುಸುಕಿನ ಜೋಳದ ಸಪ್ಪೆಯನ್ನು ಲಾರಿಗಳಲ್ಲಿ ಸರಬರಾಜು ಮಾಡುತ್ತಿದ್ದ ಲಾರಿಯ ಮೇಲ್ಭ್ಬಾಗದಲ್ಲಿ ಒಣಸಪ್ಪೆ, ಒಳಭಾಗದಲ್ಲಿ ಹಸಿಮೇವನ್ನು ತಂದು ಗುತ್ತ್ತಿಗೆದಾರರು ಮೋಸ ಮಾಡುತ್ತ್ತಿರುವ ಬಗ್ಗೆ ರೈತಾಪಿ ವರ್ಗ, ಪಶುಪಾಲಕರು ಹಾಗೂ ಪಶುವೈದ್ಯಾಧಿಕಾರಿಗಳು ನೇರವಾಗಿ ಜಿಲ್ಲಾಧಿಕಾರಿಗಳವರಿಗೆ ದೂರನ್ನು ನೀಡಿದರು. ತಾಲ್ಲೂಕಿನ 06 ಹೋಬಳಿಗಳಲ್ಲಿನ ಒಂದೆರಡು ಮೇವು ಬ್ಯಾಂಕಿನ ಬಳಿ ಪಶುವೈದ್ಯಾಧಿಕಾರಿಗಳು ಮೇವು ಸರಿ ಇಲ್ಲ ಎಂದು ತಿರಸ್ಕರಿಸಿದಾಗ ಅದೇ ಮೇವನ್ನು ಬೇರೊಂದು ಹೋಬಳಿಯ ಮೇವಿನ ಬ್ಯಾಂಕಿಗೆ ಸರಬರಾಜು ಮಾಡುವುದೂ ನಡೆಯುತ್ತಿದೆ.
ಉದಾಹರಣೆಗೆ ಮಿಡಿಗೇಶಿ ಮೇವಿನ ಬ್ಯಾಂಕಿನಿಂದ ಹತ್ತು ಲೋಡು ಮೇವನ್ನು ತಿರಸ್ಕರಿಸಿದಾಗ, ಅದೇ ಮೇವನ್ನು ಬಡವನಹಳ್ಳಿ ಮೇವಿನ ಬ್ಯಾಂಕಿಗೆ ಕೊಂಡೊಯ್ದರು. ಅಲ್ಲಿನ ಪಶುವೈದ್ಯರು ಹತ್ತು ಲೋಡು ಮೇವನ್ನು ತಿರಸ್ಕರಿಸಿದಾಗ, ಸದರಿ ಮೇವನ್ನು ಕೊಡಿಗೇನಹಳ್ಳಿ ಮೇವಿನ ಬ್ಯಾಂಕಿಗೆ ಸರಬರಾಜು ಮಾಡಲಾಗಿದೆ. ಇದು ಎಷ್ಟು ಸರಿ? ಜಿಲ್ಲಾಧಿಕಾರಿಯವರಿಗೆ ಪಶುಪಾಲಕರು ಇನ್ನು ಮುಂದೆ ಮುಸುಕಿನ ಜೋಳದ ಸಪ್ಪೆ ನಮ್ಮ ದನಕರುಗಳಿಗೆ ಬೇಡ. ಭತ್ತದ ಮೇವನ್ನು ವಿತರಿಸಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಭಾನುವಾರದಿಂದಲೇ ಭತ್ತದ ಮೇವನ್ನು ವಿತರಿಸುವ ಭರವಸೆ ನೀಡಿದರು.
ಮಧುಗಿರಿ ತಾಲ್ಲೂಕಿನ ಮೇವು ಬ್ಯಾಂಕುಗಳಲ್ಲಿ ಕಳಪೆ ಗುಣಮಟ್ಟದ ಮೇವು ವಿತರಣೆಯಾಗದಂತೆ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಾಲ್ಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯದಕ್ಷತೆಯ ಮೇಲೆ ಅವಲಂಬಿತವಾಗಿರುತ್ತದೆ. ಮಿಡಿಗೇಶಿ ಮೇವಿನ ಬ್ಯಾಂಕಿನಲ್ಲಿ ಈಗಾಗಲೇ ಸರಿಸುಮಾರು 2200 ಕಾರ್ಡುದಾರರಿಗೆ ಸುಮಾರು ಏಳರಿಂದ ಎಂಟುಸಾವಿರ ದನಕರುಗಳಿಗೆ ಒಂದು ಸುತ್ತಿನ ಮೇವು ವಿತರಿಸಲಾಗಿದ್ದು, ಎರಡನೆ ಸುತ್ತಿನ ಮೇವನ್ನು ವಿತರಿಸಲಾಗುತ್ತಿದೆ ಎಂಬುದಾಗಿ ಪತ್ರಿಕೆಗೆ ಪಶುವೈದ್ಯಾಧಿಕಾರಿ ಡಾ.ಗಿರೀಶ್ ಬಾಬು ರೆಡ್ಡಿ ತಿಳಿಸಿದ್ದಾರೆ.