ಚಳ್ಳಕೆರೆ
ನಗರದಲ್ಲಿ ಪ್ರತಿ ವರ್ಷವೂ ಸಹ ಅನೇಕ ಸಮುದಾಯಗಳ ವಿವಾಹ ಕಾರ್ಯ ಸಂಪ್ರದಾಯ ಬದ್ದವಾಗಿ ನಡೆಯುತ್ತಾ ಬಂದಿವೆ. ಆದರೆ, ನಗರದ ವೆಂಕಟೇಶ್ವರ ಬಡಾವಣೆಯಲ್ಲಿ ಭಾನುವಾರ ನಡೆದ ಮದುವೆ ಕಾರ್ಯದಲ್ಲಿ ಯಾವುದೇ ಮಾತುಗಳಿಗೆ ಅಲ್ಲಿ ಅವಕಾಶವಿರಲಿಲ್ಲ. ಬದಲಾಗಿ ಮದುವೆಗೆ ಸೇರ್ಪಡೆಯಾದ ಎಲ್ಲರಲ್ಲೂ ಒಂದು ರೀತಿಯ ಹೃದಯ ತುಂಬಿ ಬಂದ ಕ್ಷಣಗಳನ್ನು ಅಲ್ಲಿ ಕಾಣಲಾಗಿತ್ತು.
ಕಾರಣ, ಭಾನುವಾರ ಮದುವೆಯಾದ ಇಬ್ಬರೂ ನವ ದಂಪತಿಗಳು ಮಾತುಬಾರದ ಮೂಕರಾಗಿದ್ದರು. ಆದರೆ, ಇವರ ಅಂತರಾಳದ ಹೃದಯ ಮಾತ್ರ ಎಲ್ಲರ ಮನಗೆದ್ದಿತ್ತು. ಮೂಕ ದಂಪತಿಗಳ ವಿವಾಹ ಕಾರ್ಯಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಆಗಮಿಸಿ ಶುಭ ಹಾರೈಸಿದರು.
ಚಳ್ಳಕೆರೆ ತಾಲ್ಲೂಕಿನ ಘಟಪರ್ತಿ ಗ್ರಾಮದ ಮೆಹಬೂಬ್ ದ್ವಿತೀಯ ಪುತ್ರ ಖಾಸಿಂ, ವೆಂಕಟೇಶ್ವರ ನಗರದ ಸೈಯದ್‍ರವರ ಪುತ್ರಿ ಶಮೀದಾ ಮೂಕರಾಗಿದ್ದು, ಇಬ್ಬರೂ ಸಹ ಪರಸ್ವರ ಹಿರಿಯ ಒಪ್ಪಿಗೆ ಮೇರೆಗೆ ಮುಸ್ಲಿಂ ಸಂಪ್ರದಾಯದಂತೆ ಸತಿಪತಿಗಳಾದರು. ವಿವಾಹ ಕಾರ್ಯಕ್ಕೆ ಆಗಮಿಸಿದ್ದ ಅನೇಕ ಗಣ್ಯರು ಆತ್ಮ ಸಂತೋಷದಿಂದ ಈ ದಂಪತಿಗಳನ್ನು ಆಶೀರ್ವಾದಿಸುವ, ಶುಭಕೋರುವ ದೃಶ್ಯ ಎಲ್ಲರಿಗೂ ಕುತೂಹಲವನ್ನುಂಟು ಮಾಡಿತ್ತು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಪ್ರತಿಯೊಬ್ಬರೂ ಸಹ ತಮ್ಮ ಬದುಕನ್ನು ವೈವಿಧ್ಯಮಯವಾಗಿ ಕಟ್ಟಿಕೊಳ್ಳುವ ಅಭಿಲಾಷೆಯನ್ನು ಹೊಂದಿರುತ್ತಾರೆ. ಆದರೆ, ಬಡತನದಲ್ಲಿ ಜನಿಸಿದ ವೃತ್ತಿಯಲ್ಲಿ ಬಸ್ ಕಂಡಕ್ಟರಾಗಿರುವ ಖಾಸಿಂ ಮೂಕನಾಗಿದ್ದರು ತನ್ನ ಬಾಳ ಸಂಗತಿಯಾದ ಶಮೀದಾರವರನ್ನು ಮೂಕಿಯಾಗಿದ್ದರು ಸಹ ಚಿಂತಿಸದೆ ಸ್ವೀಕರಿಸಿ ಅವಳಿಗೂ ಸಹ ಬದುಕನ್ನು ಕಟ್ಟಿಕೊಟ್ಟ ಸಾರ್ಥಕತೆಯನ್ನು ಪಡೆದಿದ್ಧಾರೆ. ಇವರ ಕಾರ್ಯ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ ಎಂದರು.
ವಾರ್ಡ್‍ನ ನಗರಸಭಾ ಸದಸ್ಯ ಎಂ.ಮಲ್ಲಿಕಾರ್ಜುನ, ವಳ್ಳಿ ಪ್ರಕಾಶ್, ಪಟೇಲ್, ಸುಭಾನ್, ಇಸ್ಮಾಯಿಲ್, ಭಾಷ, ಖಾದರ್ ಮುಂತಾದವರು ಉಪಸ್ಥಿತರಿದ್ದರು.