ಫಾರಂ-3 ನೀಡಲು ವಿಳಂಬ ನೀತಿಯನ್ನು ಖಂಡಿಸಿ ಕರವೇ ಪ್ರತಿಭಟನೆ.

ಹೊಸಪೇಟೆ :

     ನಗರಸಭೆಯಲ್ಲಿ ಫಾರಂ-3 ನೀಡಲು ವಿಳಂಬ ನೀತಿ ಅನುಸರಿಸುವುದನ್ನು ಖಂಡಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿ, ಬಳಿಕ ಮನವಿ ಸಲ್ಲಿಸಿದರು.

       ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ನಗರದಲ್ಲಿ ಸಾರ್ವಜನಿಕರು ಫಾರಂ-3 ಪಡೆಯಲು ತಿಂಗಳುಗಟ್ಟಲೆ, ವರ್ಷಗಟ್ಟಲೇ ಅಲೆಯುತ್ತಿದ್ದರೂ ಸಿಗುತ್ತಿಲ್ಲ. ಇದರಿಂದ ಬಡವರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಆದರೆ ಭ್ರಷ್ಟ ಅಧಿಕಾರಿಗಳು ಸಿರಿವಂತರಿಗೆ ಮನೆ ಬಾಗಿಲಿಗೆ ಹೋಗಿ ಫಾರಂ-3ಯನ್ನು ಮುಟ್ಟಿಸುತ್ತಿದ್ದಾರೆ. ಬಡವರಿಗೆ ಒಂದು ನ್ಯಾಯ, ಸಿರಿವಂತರಿಗೆ ಒಂದು ನ್ಯಾಯಾನಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

       ಫಾರಂ-3ಯನ್ನು ಅಧಿಕಾರಿಗಳು ಒಂದು ವ್ಯವಹಾರ ಮಾಡಿಕೊಂಡಿದ್ದಾರೆ. ಹಾಗಾಗಿ ಬಡವರಿಗೆ ಸಕಾಲಕ್ಕೆ ಸಿಗುತ್ತಿಲ್ಲ. ಕೂಡಲೇ ಇಂಥ ಬೇಜವಾಬ್ದಾರಿ ಭ್ರಷ್ಟ ಅಧಿಕಾರಿಗಳನ್ನು ಕಿತ್ತೆಸೆದು, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಆ ಸ್ಥಾನಕ್ಕೆ ನಿಷ್ಠಾವಂತ ಅಧಿಕಾರಿಗಳನ್ನು ನೇಮಿಸಬೇಕು. ಇಲ್ಲವಾದಲ್ಲಿ ನಗರಸಭೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

      ಮನವಿ ಸ್ವೀಕರಿಸಿ ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ ಹಾಗು ಪೌರಾಯುಕ್ತ ವಿ.ರಮೇಶ್ ಮಾತನಾಡಿ, ಫಾರಂ-3 ವಿಳಂಬದ ಬಗ್ಗೆ ವಿಷಾಧಿಸಿ, ಮುಂದಿನ ದಿನಗಳಲ್ಲಿ ನಿಮ್ಮ ಜೊತೆಗೂಡಿ, ಪ್ರತಿ ವಾರ್ಡಿನಲ್ಲಿ ಒಂದು ದಿನ ಗೊತ್ತು ಮಾಡಿ, ಅದರಂತೆ ವಾರ್ಡಿನ ಜನರಿಗೆ ಫಾರಂ-3 ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಇದೇ ವೇಳೆ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಅಲ್ಲಿಯೂ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಕಾರ್ಯದರ್ಶಿ ಶ್ರೀನಿವಾಸ, ನಗರ ಘಟಕ ಅಧ್ಯಕ್ಷ ಎಸ್.ಎಂ.ಜಾಫರ್, ಪದಾಧಿಕಾರಿಗಳಾದ ವಕೀಲ ಅಂಬನಗೌಡ, ಅಮರೇಶಪ್ಪ, ಫಯಾಜ್, ಜೆ.ಮಂಜುನಾಥ್, ಮೊಹಮ್ಮದ್ ಭಾಷ, ಅಮೀರ್, ಹಮೀದ್, ಅಮ್ಮನಗೌಡ್ರು, ರಾಜ, ಫಿರೋಜ್, ಬಲದೇವ್, ಅನೀಲ್, ರಾಜು, ಮಹಿಳಾ ಅಧ್ಯಕ್ಷೆ ಸುಮಾ, ಸುವರ್ಣ, ಲಕ್ಷ್ಮೀ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link