ಯತ್ನಾಳ್ ಶಾಸಕ ಸ್ಥಾನ ರದ್ದು ಮಾಡಲು ರೈತರ ಆಗ್ರಹ

ಚಿತ್ರದುರ್ಗ
    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿ, ದೊರೆಸ್ವಾಮಿ ಅವರನ್ನು ‘ಪಾಕ್ ಏಜೆಂಟ್’ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರೈತ ಸಂಘ  ಇಂದು ಪ್ರತಿಭಟನೆ ನಡೆಸಿದೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ದೊರೆಸ್ವಾಮಿ ಒಬ್ಬ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಆತ ‘ಪಾಕ್ ಏಜೆಂಟ್’ ಎಂದು ಬಹು ಹಗುರವಾಗಿ ಮಾತನಾಡಿದ್ದರು. ಇದು ವಿವಾದ ಸೃಷ್ಟಿಸಿತ್ತು.
    ಯತ್ನಾಳ್ ವಿರುದ್ಧ ಇಂದು ರಾಜ್ಯ ರೈತ ಸಂಘದ ಮುಖಂಡರು ಬೀದಿಗಿಳಿದಿದ್ದು, ಪ್ರತಿಭಟನೆ ನಡೆಸಿದರು. ದೇಶದ್ರೋಹಿ ಶಾಸಕ ಯತ್ನಾಳ್ ನ ಶಾಸಕ ಸ್ಥಾನ ರದ್ದು ಪಡಿಸಿ’ ಎಂದು  ಯತ್ನಾಳ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ನೂರು ವರ್ಷ ತುಂಬು ಜೀವನ ನಡೆಸಿರುವ, ನಿಸ್ವಾರ್ಥಿ, ಸಮಾಜಮುಖಿ ಚಿಂತಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಅಸಭ್ಯವಾಗಿ ಮಾತನಾಡಿರುವ ಶಾಸಕ ಬಸವನಗೌಡ ಯತ್ನಾಳ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸುವಂತೆ ಆಗ್ರಹಿಸಲಾಯಿತು.
    ನಾಡಿನ ಜನರು ಇಂದು ಸ್ವತಂತ್ರವಾಗಿ, ಆಂಗ್ಲಮುಕ್ತರಾಗಿ ಜೀವನ ನಡೆಸಲು ಮುಖ್ಯ ಕಾರಣಕರ್ತರು ಸ್ವಾತಂತ್ರ್ಯ ಹೋರಾಟಗಾರರು. ದೇಶದ ಸೈನಿಕರು, ರೈತರಷ್ಟೇ ಪವಿತ್ರ ಸ್ಥಾನ ಸ್ವಾತಂತ್ರ್ಯ ಯೋಧರಿಗೆ ದೇಶದ ಜನತೆ ನೀಡುತ್ತಾರೆ. ಅದರಲ್ಲೂ ಇತ್ತೀಚೆಗೆ ಸ್ವಾರ್ಥತೆ, ದ್ವೇಷದ ಮನೋಭಾವನೆ ಹೆಚ್ಚುತ್ತಿರುವ ಸಂದರ್ಭ ನಾಡಿಲ್ಲಿ ಕೋಮುಸೌಹಾರ್ದ ವಾತಾವರಣ ನಿರ್ಮಾಣ ಮಾಡಲು, ಜಾತ್ಯತೀತ ನೆಲೆಗಟ್ಟಿನಲ್ಲಿ ಚಿಂತಿಸಿ ನೂರು ವರ್ಷ ತುಂಬಿದ್ದರೂ ಈಗಲೂ ಹೋರಾಟದಿಂದ ಹಿಂದೆ ಸರಿಯದೇ ಜನಪರ ಹೋರಾಟಗಳಲ್ಲಿ ನಾಯಕತ್ವ ವಹಿಸಿಕೊಂಡಿರುವ ಎಚ್.ಎಸ್.ದೊರೆಸ್ವಾಮಿ ಅವರು ನಾಡಿನ ನಿಜವಾದ ಆಸ್ತಿಯಾಗಿದ್ದಾರೆ ಎಂದರು.
     ಇವರ ಬದುಕು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ. ಆದರೆ, ಇಂತಹ ಹಿರಿಯ ಮುತ್ಸದ್ಧಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅನಗತ್ಯವಾಗಿ ಟೀಕೆ ಮಾಡಿರುವ ಯತ್ನಾಳ್ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು.ಎಚ್.ಎಸ್.ದೊರೆಸ್ವಾಮಿ ಒಬ್ಬ ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೆ ನೀಡುವ ಮೂಲಕ ನಾಡಿಗೆ ಅವಮಾನ ಮಾಡಿದ್ದಾರೆ. 
     ಸರ್ಕಾರ ತಕ್ಷಣ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಈಚಘಟ್ಟದ ಸಿದ್ದವೀರಪ್ಪ, ನಗರಾಜ್,ರೆಡ್ಡಿಹಳ್ಳಿ ವೀರಣ್ಣ, ತಿಪ್ಪೇಸ್ವಾಮಿ, ಚಂದ್ರಪ್ಪ, ಪರಮೇಶ್ವರಪ್ಪ, ಗಂಗಣ್ಣ, ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link