ಅಧ್ಯಕ್ಷೆ, ಉಪಾಧ್ಯಕ್ಷೆ ರಾಜೀನಾಮೆಗೆ ಸದಸ್ಯರ ಪಟ್ಟು…!

ಕೋರಂ ಕೊರತೆಯಿಂದ ಜಿಪಂ ಸಭೆ ಮುಂದೂಡಿಕೆ

ತುಮಕೂರು

    ಮಂಗಳವಾರ ನಿಗಧಿಯಾಗಿದ್ದ ಜಿಲ್ಲಾ ಪಂಚಾಯ್ತಿಯ ವಿಶೇಷ ಸರ್ವ ಸದಸ್ಯರ ಸಭೆ ಕೊರಂ ಕೊರತೆಯಿಂದಾಗಿ ಮುಂದೂಡಲ್ಪಟ್ಟಿತು. ಕಳೆದ ಜನವರಿ 22ರಂದು ನಡೆಯಬೇಕಿದ್ದ ಸಭೆಯನ್ನು ಕೂಡಾ ಕೋರಂ ಕೊರತೆಯಿಂದ ಮುಂದೂಡಲಾಗಿತ್ತು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಆಡಳಿತ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರೇ ಸಭೆಗೆ ಗೈರು ಹಾಜರಾಗಿ ಕೋರಂ ಕೊರತೆಯಾಗಲು ಕಾರಣರಾದರು. ವಿರೋಧ ಪಕ್ಷ ಕಾಂಗ್ರೆಸ್‍ನ ಬಹುತೇಕ ಸದಸ್ಯರು ಸಭೆಗೆ ಹಾಜರಾಗಿ ಆಡಳಿತ ಪಕ್ಷದ ಸದಸ್ಯರ ರಾಜಕೀಯ ಚಟುವಟಿಕೆಗಳಿಗೆ ಮೂಕಪ್ರೇಕ್ಷಕರಾಗಿದ್ದರು.

   ಜನವರಿ 22ರಂದು ಮುಂದೂಡಲ್ಪಟ್ಟ ಸಭೆ ಮಂಗಳವಾರ ಬೆಳಿಗ್ಗೆ 11ಗಂಟೆಗೆ ನಿಗಧಿಯಾಗಿತ್ತು. ನಿಗಧಿತ ಸಮಯಕ್ಕೆ ಬೆರಳೆಣಿಕೆಯ ಸದಸ್ಯರು ಸಭೆಗೆ ಹಾಜರಾದರು. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಹಾಗೂ ಸಿಇಓ ಶುಭಾ ಕಲ್ಯಾಣ್ ಆಗಮಿಸಿ ಆಸೀನರಾಗಿ ಸದಸ್ಯರಿಗಾಗಿ ಕಾದರು. ಜೆಡಿಎಸ್, ಬಿಜೆಪಿಯ ಕೆಲ ಸದಸ್ಯರು ಸಭೆಯಲ್ಲಿ ಕಾಣಿಸಿಕೊಂಡರಾದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ತಮ್ಮ ಹಾಜರಾತಿ ಖಾತರಿಪಡಿಸಲಿಲ್ಲ.

     ಅಧ್ಯಕ್ಷರು ಹಲವು ಬಾರಿ ಸದಸ್ಯರಿಗೆ ಹಾಜರಾತಿಗೆ ಸಹಿ ಮಾಡಿ ಎಂದು ಮನವಿ ಮಾಡಿಕೊಂಡರು. ಅಂತಿಮವಾಗಿ 30 ಸದಸ್ಯರು ಸಹಿ ಮಾಡಿದ್ದರು. ಸಭೆ ನಡೆಯಲು ಜಿಪಂ ಸದಸ್ಯರೊಂದಿಗೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಸೇರಿದಂತೆ ಕನಿಷ್ಟ 43 ಸದಸ್ಯರ ಹಾಜರಾತಿ ಇರಬೇಕಾಗಿತ್ತು.

    ಆದರೆ, ಯಾರೊಬ್ಬರೂ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಭಾಗವಹಿಸಿರಲಿಲ್ಲ. ವಿಧಾನ ಸಭೆ ಅಧಿವೇಶನದ ಕಾರಣ ಶಾಸಕರ ಗೈರು ಹಾಜರಿ ನಿರೀಕ್ಷಿಸಲಾಗಿತ್ತು. ಜೆಡಿಎಸ್, ಬಿಜೆಪಿ ಸದಸ್ಯರು ಜಿಲ್ಲಾ ಪಂಚಾಯ್ತಿ ಆವರಣದಲ್ಲೇ ಇದ್ದರೂ ಸಭೆಗೆ ಅಧಿಕೃತರಾಗಿ ಹಾಜರಾಗಲಿಲ್ಲ.

     ಎರಡು ಬಾರಿ ಸಭೆಯನ್ನು ಅರ್ಧ, ಅರ್ಧ ಗಂಟೆ ಕಾಲ ಮುಂದೂಡಿದ ಅಧ್ಯಕ್ಷೆ ಲತಾ ರವಿ ಕುಮಾರ್ ಅವರು, ಸದಸ್ಯರು ಹಾಜರಾಗುವುದಿಲ್ಲ ಎಂದು ಖಚಿತವಾದ ಮೇಲೆ ಸಭೆ ಮುಂದೂಡಿದರು. ಬಹುತೇಕ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಿ ಕಾದುಕುಳಿತ್ತಿದ್ದರು. ಕೆಲವು ತಾಲ್ಲೂಕು ಪಂಚಾಯ್ತಿಗಳ ಅಧ್ಯಕ್ಷರು ಹಾಜರಿದ್ದರು.

     ಎರಡು ಬಾರಿ ಸಮಾನ್ಯ ಸಭೆ ನಡೆಯದೆ ಮುಂದೂಡಲ್ಪಟ್ಟ ಕಾರಣ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸ್ಥಾಯಿ ಸಮಿತಿ ತೀರ್ಮಾನಗಳು ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಪ್ರಮುಖ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

      ರಾಜಕೀಯವನ್ನು ನಂತರ ಚರ್ಚೆ ಮಾಡಿಕೊಳ್ಳಲಿ ಅಭಿವೃದ್ಧಿ ಕಾರ್ಯಗಳ ಚರ್ಚೆಗಾಗಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವಿತ್ತು ಎಂದು ಹಿರಿಯ ಸದಸ್ಯ ವೈ.ಹೆಚ್.ಹುಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷೆ, ಉಪಾಧ್ಯಕ್ಷೆ ರಾಜೀನಾಮೆಗೆ ಒತ್ತಡ

     ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರು ಆಡಳಿತ ನಡೆಸಲು ವಿಫಲರಾಗಿದ್ದಾರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಡಳಿತರೂಢ ಜೆಡಿಎಸ್, ಬಿಜೆಪಿ ಸದಸ್ಯರ ಒತ್ತಾಯವಾಗಿದೆ. ಇದೇ ಕಾರಣಕ್ಕೆ ಕಳೆದ ಸಭೆಯಲ್ಲೂ ಈ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಸಭೆಗೆ ಗೈರಾಗಿದ್ದರು.

   2016ರಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾದ 57 ಸದಸ್ಯರಲ್ಲಿ ಕಾಂಗ್ರೆಸ್‍ನ 23, ಬಿಜೆಪಿಯ 19, ಜೆಡಿಎಸ್‍ನ 14 ಹಾಗೂ ಒಬ್ಬರು ಪಕ್ಷೇತರರಿದ್ದಾರೆ. ಯಾವುದೇ ಪಕ್ಷಕ್ಕೆ ಆಡಳಿತ ರಚಿಸುವಷ್ಟು ಬಹುಮತ ಬಾರದಿದ್ದ ಕಾರಣಕ್ಕೆ ಆಗ ಬಿಜೆಪಿ, ಜೆಡಿಎಸ್ ನಾಯಕರು ಮಾತುಕತೆ ನಡೆಸಿ ಎರಡು ಪಕ್ಷಗಳ ಮೈತ್ರಿಯೊಂದಿಗೆ ಜಿಪಂ ಆಡಳಿತ ಪಡೆದವು.

    ಅದರಂತೆ ಬಿಸಿಎಂ-ಎಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ (ಶಿರಾ ತಾ. ತಾವರೆಕೆರೆ ಜಿಪಂ ಕ್ಷೇತ್ರ) ಲತಾ ರವಿಕುಮಾರ್, ಪರಿಶಿಷ್ಟ ಜಾತಿಗೆ ಮೀಸಲಾ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ (ತುಮಕೂರು ತಾ. ಹೆಗ್ಗೆರೆ ಕ್ಷೇತ್ರ) ಶಾರದಾ ನರಸಿಂಹಮೂರ್ತಿ ಅವರನ್ನು ಆಯ್ಕೆ ಮಾಡಲಾಗಿತ್ತು. ಎರಡೂ ಸ್ಥಾನಗಳಿಗೆ ಪುರುಷ ಸದಸ್ಯರಿಗೂ ಅವಕಾಶವಿದ್ದರೂ ಆಯಾ ಪಕ್ಷಗಳ ವರಿಷ್ಠರು ಹಾಗೂ ಸದಸ್ಯರು ಮಹಿಳಾ ಸದಸ್ಯೆಯರಿಗೆ ಅವಕಾಶ ನೀಡಿದ್ದರು.

    ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೊದಲ ಎರಡೂವರೆ ವರ್ಷ ಅಧ್ಯಕ್ಷ ಸ್ಥಾನ ಜೆಡಿಎಸ್‍ಗೆ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ. ಬಾಕಿ ಎರಡೂವರೆ ವರ್ಷ ಬಿಜೆಪಿಗೆ ಅಧ್ಯಕ್ಷ ಹುದ್ದೆ, ಜೆಡಿಎಸ್‍ಗೆ ಉಪಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಒಡಂಬಡಿಕೆಯಾಗಿತ್ತು ಎಂದು ಆ ಪಕ್ಷದ ಸದಸ್ಯರು ಹೇಳುತ್ತಿದ್ದಾರೆ. ನಾಯಕರ ಸಮ್ಮುಖದಲ್ಕಿ ನಡೆದ ಮಾತುಕತೆಯಂತೆ ಅಧ್ಯಕ್ಷೆ, ಉಪಾಧ್ಯಕ್ಷೆ ತಮ್ಮ ಸ್ಥಾನ ತ್ಯಜಿಸಬೇಕು ಎಂಬುದು ಸದಸ್ಯರ ಒತ್ತಾಯವಾಗಿದೆ. ಇದೇ ಕಾರಣಕ್ಕೆ ಹಟಕ್ಕೆ ಬಿದ್ದವರಂತೆ ಸತತ ಎರಡು ಸಭೆಗೆ ಗೈರಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ಜಿಲ್ಲಾ ಪಂಚಾಯ್ತಿ ಸದಸ್ಯರ ಅಧಿಕಾರವಧಿ ಇನ್ನು 14 ತಿಂಗಳು ಬಾಕಿ ಇದೆ. ಉಳಿದ ಅವಧಿಗಾದರೂ ಹೊಸ ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂಬುದು ಈ ಸದಸ್ಯರ ಅಭಿಲಾಷೆಯಾಗಿದೆ.

ಅಸಮಾಧಾನಿತ ಸದಸ್ಯರ ಪ್ರತ್ಯೇಕ ಸಭೆ

    ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರ ವಿರುದ್ಧ ಅಸಮಾಧಾನಗೊಂಡಿರುವ ಕೆಲವು ಜಿಪಂ ಸದಸ್ಯರು ಸಾಮಾನ್ಯ ಸಭೆಗೆ ಹಾಜರಾಗದೆ, ಪ್ರತ್ಯೇಕ ಸಭೆ ನಡೆಸಿ ಮುಂದಿನ ತೀರ್ಮಾನಗಳ ಬಗ್ಗೆ ಚರ್ಚೆ ನಡೆಸಿದರು.

    ಸದಸ್ಯರಾದ ಕಲ್ಲೇಶ್(ಶೆಟ್ಟಕೆರೆ), ಮಹಾಲಿಂಗಯ್ಯ(ಹೊಯ್ಸಳಕಟ್ಟೆ), ಕೊಂಡವಾಡಿ ತಿಮ್ಮಯ್ಯ(ಪುರವರ), ಸಿದ್ದರಾಮಯ್ಯ(ಹುಳಿಯಾರು), ಯಶೋದಮ್ಮ(ಅಳಿಲುಘಟ್ಟ), ಭಾಗ್ಯಮ್ಮ ರಮೇಶ್‍ಗೌಡ(ದಬ್ಬೇಘಟ್ಟ), ಗಿರಿಜಮ್ಮ ಶ್ರೀರಂಗಯ್ಯ(ನಾದೂರು), ಜಯಪ್ರಕಾಶ್ (ಬುಕ್ಕಾಪಟ್ಟಣ) , ಗೌರಮ್ಮ(ವೈ.ಎನ್.ಹೊಸಕೋಟೆ), ಅಕ್ಕಮಹಾದೇವಿ(ತೋವಿನಕೆರೆ), ಪ್ರೇಮಾ ಮಹಾಲಿಂಗಪ್ಪ(ಹುಲಿಕುಂಟೆ), ಬೊಮ್ಮಣ್ಣ(ಕಳ್ಳಂಬೆಳ್ಳ), ರಾಮಚಂದ್ರಯ್ಯ(ಹಂದನಕೆರೆ), ಪದ್ಮಾ ಪಾಪಣ್ಣ(ಕೊತ್ತಗೆರೆ), ಶಿವರಾಮಯ್ಯ(ಕೋಳಾಲ), ಲಕ್ಷ್ಮಿನರಸಿಂಹರಾಜು(ಚಿಕ್ಕತೊಟ್ಲುಕೆರೆ) ಮತ್ತಿತರರು ಪ್ರತ್ಯೇಕ ಸಭೆ ನಡೆಸಿದರು.

       ಜಿಪಂ ಆಡಳಿತ ನಿಷ್ಕ್ರಿಯೆಗೊಂಡಿದೆ. ಸದಸ್ಯರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಹಂಚಿಕೆ ಮಾಡಿದ್ದಾರೆ. ಅಧ್ಯಕ್ಷೆ ಲತಾ ರವಿಕುಮಾರ್ ಬಗ್ಗೆ ಯಾವ ಸದಸ್ಯರಿಗೂ ವಿಶ್ವಾಸವಿಲ್ಲ, ಸದಸ್ಯರೊಂದಿಗೆ ಅವರು ಸೌಜನ್ಯವಾಗಿ ನಡೆದುಕೊಳ್ಳುತ್ತಿಲ್ಲ. ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಆಯಾ ಸದಸ್ಯರಿಗೆ ಭೇಟಿ ವಿಷಯ ತಿಳಿಸದೆ ಕಡೆಗಣಿಸಿದ್ದಾರೆ ಎಂದು ಪುರವರ ಕ್ಷೇತ್ರ ಸದಸ್ಯ ತಿಮ್ಮಯ್ಯ ಆಪಾದನೆ ಮಾಡಿದರು.

     ಹೊಯ್ಸಳಕಟ್ಟೆ ಕ್ಷೇತ್ರದ ಸದಸ್ಯ ಮಹಾಲಿಂಗಯ್ಯ ಮಾತನಾಡಿ, ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡದೆ ಆರೋಗ್ಯ ಇಲಾಖೆಗೆ 1.36 ಕೋಟಿ ರೂಗಳನ್ನು ಆಸ್ಪತ್ರೆಗಳಲ್ಲಿ ಬಯೊಮೆಟ್ರಿಕ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಲು ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಸದಸ್ಯರು ಆಪಾದನೆ ಮಾಡಿದಾಗ ಲೋಕಾಯುಕ್ತ ತನಿಖೆಗೆ ವಹಿಸಲಾಗುವುದು ಎಂದು ಅಧ್ಯಕ್ಷರು ಹೇಳಿದ್ದರು. ಆದರೆ ನಡಾವಳಿ ಪುಸ್ತಕದಲ್ಲಿ ಅದನ್ನು ನಮೂದಿಸಿಲ್ಲ ಎಂದು ದೂರಿದ ಅವರು, ಈ ಪ್ರಕರಣದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

       ಅಳಿಲುಘಟ್ಟ ಕ್ಷೇತ್ರದ ಸದಸ್ಯೆ ಯಶೋಧಮ್ಮ ಮಾತನಾಡಿ, ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡಿದ್ದ ಸಂದರ್ಭದಲ್ಲಿ ಎರಡು ಪಕ್ಷಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಎರಡು ವರ್ಷಗಳವರೆಗೆ ಎಂದು ಪಕ್ಷದ ನಾಯಕರ ಸಮ್ಮುಖದಲ್ಲಿ ತೀರ್ಮಾನ ಮಾಡಲಾಗಿತ್ತು. ಆ ಮಾತಿನಂತೆ ಅಧ್ಯಕ್ಷೆ, ಉಪಾಧ್ಯಕ್ಷೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದರು.

ಅಧ್ಯಕ್ಷೆ ಬೇಸರ

    ಎರಡು ಸಭೆಗಳಿಗೆ ಗೈರುಹಾಜರಾಗಿ ಸಭೆ ನಡೆಯಂದಂತೆ ನೋಡಿಕೊಂಡ ಸದಸ್ಯರ ವರ್ತನೆಗೆ ಅಧ್ಯಕ್ಷೆ ಲತಾ ರವಿಕುಮಾರ್ ಬೇಸರ ವ್ಯಕ್ತಪಡಿಸಿದರು. ನಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವ ಸದಸ್ಯರು ರಾಜಕೀಯವನ್ನು ಹೊರಗಿಟ್ಟು ಅಭಿವೃದ್ಧಿದೃಷ್ಟಿಯಿಂದ ಸಭೆಗೆ ಹಾಜರಾಗಿ ಪ್ರಮುಖ ಅಭಿವೃದ್ಧಿ ವಿಚಾರಗಳ ಚರ್ಚೆ ನಡೆಸಿ ನಿರ್ಣಯ ಕೈಗೊಂಡು, ವಿವಿಧ ಕಾರ್ಯಗಳಿಗೆ ಅನುಮೋದನೆ ದೊರಕಿಸಲು ಅವಕಾಶ ಮಾಡಿಕೊಡಬೇಕಾಗಿತ್ತು ಎಂದರು.ರಾಜಕೀಯ ಸ್ಥಾನಮಾನಗಳ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ತಾವು ಬದ್ದ ಎಂದ ಅವರು, ಸದಸ್ಯರಾದವರು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap