ಮಂಗಳೂರು
ಸಂಸತ್ ನಲ್ಲಿ ಈವರೆಗೆ ಕರಾವಳಿ ಬಗ್ಗೆ ಚರ್ಚೆಯಾಗಿಲ್ಲ, ಈ ಬಾರಿ ಉತ್ತಮ ಅಭ್ಯರ್ಥಿಯನ್ನು ನಿಮ್ಮೆದುರು ಇಟ್ಟಿದ್ದೇವೆ, ಅವರನ್ನು ಗೆಲ್ಲಿಸಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿಂದು ಏರ್ಪಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಬಿಜೆಪಿ ದ್ರೋಹ ಮಾಡಿದೆ, ದೇಶದ ಜನರ ನಿರೀಕ್ಷೆಯನ್ನು ಪ್ರಧಾನಿ ಮೋದಿ ಹುಸಿಗೊಳಿಸಿದ್ದಾರೆ. ಈ ಸಲದ ಚುನಾವಣೆ ಭಾವನಾತ್ಮಕವಾದುದಲ್ಲ. ಈ ಸಲದ ಚುನಾವಣೆ ಆತ್ಮಾವಲೋಕನ ಮಾಡುವಂತದ್ದು ಎಂದು ಹೇಳಿದರು.
ಯುವಜನತೆ, ಕಾರ್ಮಿಕರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಹೊಟ್ಟೆ ತುಂಬಿಸುವ ಕೆಲಸವನ್ನು ಎನ್ ಡಿಐ ಸರ್ಕಾರ ಮಾಡಿಲ್ಲ , ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ ಈ ಬಗ್ಗೆ ಮಾತನಾಡದ ಪ್ರಧಾನಿ ಮೋದಿ, ಜನರ ಮನಸ್ಸನ್ನು ನೈಜ ಸಮಸ್ಯೆಗಳಿಂದ ದೂರ ಮಾಡಲು ಉಗ್ರರ ದಾಳಿ, ಪಾಕಿಸ್ತಾನ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಪಾಕ್ ಪ್ರಧಾನಿ ಮೊಮ್ಮಗಳ ಹುಟ್ಟುಹಬ್ಬದ ಪಾರ್ಟಿಗೆ ಹೋಗಲು ಮೋದಿಗೆ ಸಮಯವಿದೆ. ಆದರೆ ಉಗ್ರರ ದಾಳಿಯಲ್ಲಿ ಹತ್ಯೆಯಾದ ಸೈನಿಕರ ಮನೆಗೆ ಹೋಗಲು ಅವರಿಗೆ ಸಮಯವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಮೋದಿ ನೇತೃತ್ವದ ಸರ್ಕಾರ, ವೈಫಲ್ಯತೆಗಳ ಆಗರವಾಗಿದೆ. ವಾಯುದಾಳಿ ಮುಂದಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತಗಳ ಲೆಕ್ಕ ಹಾಕುತ್ತಾರೆ, ಪಿಡಿಪಿ ಉಗ್ರ ಚಟುವಟಿಕೆಗೆ ಬೆಂಬಲ ಕೊಡುವ ಪಕ್ಷ. ಇಂತಹ ಪಿಡಿಪಿಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಇದನ್ನು ಬಿಜೆಪಿ ನಾಯಕರು ಮರೆತಿದ್ದಾರೆ ಎಂದು ಟೀಕಿಸಿದರು.
ಪಾಕಿಸ್ತಾನದ ಹೆಸರಿನಲ್ಲಿ ಮೋದಿ ಮತ ಕೇಳುತ್ತಿದ್ದಾರೆ. ದೇಶದ ಜನರಿಗೆ ಬಿಜೆಪಿ ಏನು ಕೊಟ್ಟಿದೆ..? ದೇಶದ ಜನರು ನೆಮ್ಮದಿ ಜೀವನ ನಡೆಸುತ್ತಿದ್ದಾರ..? , ಪಕೋಡಾ ಮಾರಿ ಜೀವನ ನಡೆಸಲು ಮೋದಿ ಹೇಳಬೇಕೇ..?, ಪ್ರಧಾನಿಯಾಗಿ ಮೋದಿ ಏನು ಮಾಡಿದ್ದಾರೆ ಎಂದು ಕಿಡಿಕಾರಿದರು.