ತುಮಕೂರು:

ಜಿಲ್ಲೆಯಲ್ಲಿ 77 ಕೆರೆಗಳು ಯೋಜನಾ ವ್ಯಾಪ್ತಿಗೆ: ತುಮಕೂರು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಕೆರೆ ಸಂಜೀವಿನಿ ಕಾರ್ಯಕ್ರಮದ ಅಡಿಯಲ್ಲಿ 77 ಕೆರೆಗಳನ್ನು ಗುರುತಿಸಲಾಗಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿ ತಾಲ್ಲೂಕುವಾರು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ತುಮಕೂರು ನಗರದಲ್ಲಿ 8, ತುಮಕೂರು ಗ್ರಾಮಾಂತರದಲ್ಲಿ 7, ಕುಣಿಗಲ್ ಹಾಗೂ ಕೊರಟಗೆರೆ ತಾಲ್ಲೂಕುಗಳಲ್ಲಿ 7, ಮಧುಗಿರಿ ತಾಲ್ಲೂಕಿನಲ್ಲಿ 10, ತಿಪಟೂರು ತಾಲ್ಲೂಕಿನಲ್ಲಿ 7, ಗುಬ್ಬಿ ತಾಲ್ಲೂಕಿನಿಂದ 8, ಶಿರಾ-8, ಚಿ.ನಾ.ಹಳ್ಳಿ ಹಾಗೂ ಪಾವಗಡ ತಾಲ್ಲೂಕುಗಳಿಂದ 7 ಕೆರೆಗಳನ್ನು ಈ ಯೋಜನೆಯಡಿ ಗುರುತಿಸಲಾಗಿದೆ.
ಅನುಮೋದನೆಗೊಂಡಿರುವ ಒಟ್ಟು ಕೆರೆಗಳ ಪಟ್ಟಿಯನ್ನೇನೋ ಇಲಾಖೆ ಸಿದ್ಧಪಡಿಸಿ ಇಟ್ಟುಕೊಂಡಿದೆ. ಆದರೆ ಎಷ್ಟು ಕೆರೆಗಳಲ್ಲಿ ಸಂಪೂರ್ಣವಾಗಿ ಹೂಳು ಎತ್ತಲಾಗಿದೆ. ಕಾಮಗಾರಿ ಯಶಸ್ವಿಯಾಗಿದೆಯೇ ಎಂಬ ಮಾಹಿತಿಯ ಚಿತ್ರಣವಂತೂ ಸಮರ್ಪಕವಾಗಿಲ್ಲ. ಕೆಲವು ಕಡೆ ಹೂಳೆತ್ತುವ ಕಾಮಗಾರಿ ಮುಗಿದಿದೆ. ಮತ್ತೆ ಕೆಲವು ಕಡೆ ಇನ್ನೂ ನಡೆಯುತ್ತಿದೆ ಎಂಬ ಮಾಹಿತಿ ಇಲಾಖೆಯಿಂದ ಲಭ್ಯವಾಗುತ್ತದೆ.
ಆದರೆ ಈಗಾಗಲೇ ಮಳೆಗಾಲ ಆರಂಭವಾಗುವ ಸನಿಹದಲ್ಲಿದ್ದು, ಹೂಳೆತ್ತುವ ಕಾರ್ಯ ಇನ್ನೂ ನಡೆಯುತ್ತಿದೆ ಎಂದರೆ ಮಳೆ ಬಂದರೆ ಯೋಜನೆಯೇ ವಿಫಲವಾಗುವುದಿಲ್ಲವೆ? ಮಳೆ ನೀರು ಸಂಗ್ರಹದ ಗುರಿ ಇಟ್ಟುಕೊಂಡು ಕೈಗೊಳ್ಳಲಾಗುವ ಈ ಕಾರ್ಯ ಯೋಜನೆಗಳ ಸಾಫಲ್ಯತೆಯಾದರೂ ಏನು ಎಂಬ ಪ್ರಶ್ನೆಗಳು ಸಾಮಾನ್ಯ ಜನರಿಗೂ ಹೊಳೆಯುತ್ತದೆ.
ಜಲಾಮೃತ ಯೋಜನೆ:
ನಿರಂತರ ಅನಾವೃಷ್ಠಿ ಹಿನ್ನೆಲೆಯಲ್ಲಿ ಜೀವಜಲದ ಮಹತ್ವ ಸಾರಲು 2019ರ ವರ್ಷವನ್ನು ಜಲವರ್ಷ ಎಂದು ಘೋಷಿಸಲಾಗಿದೆ. ಈ ಘೋಷಣೆಯಡಿ ಜಲಸಂರಕ್ಷಣೆ, ಜಲ ಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಹಾಗೂ ಹಸಿರೀಕರಣ ಸಂಬಂಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿಯೇ ಜಲಾಮೃತ ಎಂಬ ವಿಶೇಷ ಯೋಜನೆಯನ್ನು ಕರ್ನಾಟಕ ಸರ್ಕಾರ ಈ ವರ್ಷ ಜಾರಿಗೆ ತಂದಿದೆ. ಈ ಯೋಜನೆಯ ಜಾರಿಗೆ 500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಏಪ್ರಿಲ್ 24 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಜಿಲ್ಲೆಯ ಕೆಲವು ತಾಲ್ಲೂಕುಗಳಿಗೆ ಭೇಟಿ ನೀಡಿದ್ದರು. ಅಂದು ಸಂಜೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಅಂದಿನ ಸಭೆಯಲ್ಲಿ ಅತೀಕ್ ಅವರು ಹೆಚ್ಚು ಪ್ರಸ್ತಾಪ ಮಾಡಿದ್ದು ಜಲಾಮೃತ ಯೋಜನೆಯ ಬಗ್ಗೆ. ಹೂಳು ತೆಗೆದು ಮಳೆ ನೀರು ಸಂಗ್ರಹಿಸಲು ಕೂಡಲೇ ಕಾರ್ಯೋನ್ಮುಖರಾಗಿ ಎಂಬ ಸಂದೇಶವನ್ನು ಅವರು ನೀಡಿದರು.
ಮಳೆಗಾಲ ಆರಂಭವಾಗುವುದರೊಳಗೆ ಹಳ್ಳಿಗಳ ಕೆರೆಕಟ್ಟೆಗಳನ್ನು ಪಟ್ಟಿ ಮಾಡಿ ಜಲಾಮೃತ ಯೋಜನೆಯಡಿ ಹೂಳು ತೆಗೆಯಲು ಮುಂದಾಗಿ. ನೀರು ಹರಿದು ಬರುವ ಕಾಲುವೆಗಳ ಗಿಡಗಂಟೆ ತೆರವು ಮಾಡಿಸಿ ಹೆಚ್ಚು ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಅಲ್ಲದೆ, ಈ ಯೋಜನೆ ಒಂದು ಆಂದೋಲನದ ರೀತಿಯಲ್ಲಿ ನಡೆಯಬೇಕು ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಅವರು ಬಂದು ಹೋದ ನಂತರವಷ್ಟೇ ಬಹಳಷ್ಟು ಜನರಿಗೆ ತಿಳಿದದ್ದು ಜಲಾಮೃತ ಯೋಜನೆಯೂ ಜಾರಿಯಲ್ಲಿದೆ ಎಂಬುದು.
ಈ ಯೋಜನೆಗೂ ನರೇಗ ಯೋಜನೆಯಡಿ ಅನುದಾನ ಬಳಸಲು ಅವಕಾಶವಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 75 ಲಕ್ಷ ಮಾನವ ದಿನ ಸೃಷ್ಟಿ ಮಾಡಲು ಜಿಲ್ಲೆಗೆ ಗುರಿ ನೀಡಲಾಗಿದೆ. ಜಲ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮದಿಂದ ಹಿಡಿದು ರೈತರಿಗೆ ವೈಯಕ್ತಿಕವಾಗಿ ಲಾಭವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಲು ಈ ಯೋಜನೆಯಡಿ ಅವಕಾಶವಿದೆ. ಆದರೆ ಕಾರ್ಯಕ್ರಮದ ರೂಪುರೇಷೆಯೇ ಇನ್ನೂ ಸಿದ್ಧವಾದಂತೆ ಕಾಣುತ್ತಿಲ್ಲ.
ಹಲವು ಕಡೆ ಅವ್ಯವಹಾರ:
ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆಗಾಗ್ಗೆ ದೂರುಗಳು ವರದಿಯಾಗುತ್ತಲೇ ಇವೆ. ಒಂದೇ ಕಾಮಗಾರಿಗೆ ಎರಡು ಮೂರು ಬಾರಿ ಬಿಲ್ ಮಾಡಿರುವುದು, ಹೊಸದಾಗಿ ಕಾಮಗಾರಿ ಮಾಡಿದ ಹಾಗೆ ಫೋಟೋ ತೆಗೆಸಿ ಕಾಮಗಾರಿಯ ವಿವರ ನೀಡುವುದು ಇಂತಹ ಹಲವು ಅಕ್ರಮಗಳು ವ್ಯಾಪಕವಾಗಿರುವ ಬಗ್ಗೆ ಗ್ರಾಮೀಣ ರೈತಸಮುದಾಯ ದೂರುತ್ತಲೇ ಇದ್ದಾರೆ.
2017 ರಲ್ಲಿ ನಾವೆಂದೂ ಕಾಣದಂತಹ ಭೀಕರ ಬರಗಾಲ ಎದುರಾಗಿತ್ತು. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದಂತೆ ಸರ್ಕಾರಕ್ಕೆ ತಲೆನೋವು ಎದುರಾಗಿತ್ತು. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಭೂಗರ್ಭವನ್ನೇ ಬಗೆಯುವಂತಹ ಪಾತಾಳಗಂಗೆ ಯೋಜನೆಯ ಪ್ರಸ್ತಾಪ ಸರ್ಕಾರದ ಮುಂದೆ ಬಂದಿತು. ಭೂಗರ್ಭದಲ್ಲಿರುವ ನೀರನ್ನು ಎತ್ತುವಳಿ ಮಾಡುವಂತಹ ಈ ಯೋಜನೆಗೆ ಪರಿಸರ ವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ನೀರು ಹಾನಿಕಾರಕ ಮಾತ್ರವಲ್ಲದೆ, ಭೂಮಿಯ ಆಳಕ್ಕೆ ಹೊಕ್ಕರೆ ಎದುರಾಗುವ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿದ್ಧಪಡಿಸಿದ್ದ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು.
ಇದಕ್ಕೆ ಪೂರಕವಾಗಿ ಅಂದಿನ ಸರ್ಕಾರ ಮತ್ತೊಂದು ಯೋಜನೆಯನ್ನು ಸಿದ್ಧಪಡಿಸಿದ ಫಲವಾಗಿಯೇ ಕೆರೆ ಪುನಶ್ಚೇತನ ಯೋಜನೆ ರೂಪುಗೊಂಡಿತು. ಈ ಯೋಜನೆಯಡಿ ಜೆಸಿಬಿ ಯಂತ್ರ ಬಳಸಿ ಕೆರೆಗಳ ಹೂಳು ತೆಗೆಯಲು ಅವಕಾಶವಿದೆ.
2016-17 ರಲ್ಲಿ ಎದುರಾದ ಬರಗಾಲದ ತೀವ್ರತೆ ಅನೇಕ ಪರ್ಯಾಯ ಯೋಜನೆಗಳಿಗೆ ಕಾರಣೀಭೂತವಾಯಿತು. ಪರಿಸರಾಸಕ್ತರು, ವಿವಿಧ ಸಂಘ ಸಂಸ್ಥೆಗಳು ಸಕ್ರಿಯಗೊಂಡವು. ಚಲನಚಿತ್ರ ನಟ ಯಶ್ ಒಂದು ಅಭೂತಪೂರ್ವ ಕಾಮಗಾರಿಗೆ ಚಾಲನೆ ನೀಡಿದರು. ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ವಹಿಸಿಕೊಂಡರು. ನಾಲ್ಕು ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆ ಆರಂಭವಾಗಿ ಜನಸಮುದಾಯ ಇದಕ್ಕೆ ಉತ್ತಮವಾಗಿ ಸ್ಪಂದಿಸಿತು. ಇದರ ಪರಿಣಾಮವಾಗಿ ನಂತರದ ದಿನಗಳಲ್ಲಿ ಸುರಿದ ಮಳೆಗೆ ಆ ಕೆರೆ ಸಂಪೂರ್ಣ ತುಂಬಿ ಹೋಯಿತು. ಅಂತರ್ಜಲ ವೃದ್ಧಿಯಾಯಿತು. ಇತರೆ ಪ್ರದೇಶಗಳಿಗೂ ಇದೊಂದು ಉತ್ತಮ ಉದಾಹರಣೆಯಾಯಿತು.
ನೀರಿನ ನಿರ್ವಹಣೆ ಇಲ್ಲ:
ನಮ್ಮಲ್ಲಿ ಯೋಜನೆಗಳು ಬಹಳಷ್ಟಿವೆ. ನೀರು ಎಲ್ಲರಿಗೂ ಬೇಕು. ಅದು ಕೂಡಾ ಯಥೇಚ್ಛವಾಗಿ ನೀರು ಬೇಕು. ಇರುವ ನೀರನ್ನು ಬಳಕೆ ಮಾಡಿಕೊಳ್ಳುವ ವಿಧಾನಗಳು ಮಾತ್ರ ನಮ್ಮಲ್ಲಿಲ್ಲ. ಇರುವಷ್ಟು ದಿನಗಳ ಕಾಲ ಬೇಕಾಬಿಟ್ಟಿಯಾಗಿ ನೀರು ಖರ್ಚು ಮಾಡುವ ನಾವು ಇಲ್ಲದ ಸಮಯದಲ್ಲಿ ಕೊರಗುತ್ತೇವೆ, ಹೋರಾಡುತ್ತೇವೆ.
ಆದರೆ ಇಲ್ಲದ ನೀರನ್ನು ಯಾರು ತಂದುಕೊಡುತ್ತಾರೆ?
ಮಳೆಗಾಲದಲ್ಲಿ ಬೀಳುವ ನೀರಿನ ಸಂಗ್ರಹಣೆ ಬಗ್ಗೆ ಹೆಚ್ಚು ಒತ್ತು ಕೊಡುವ, ಕೆರೆಕಟ್ಟೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯಗಳು ಹೆಚ್ಚಾಗಬೇಕು. ನೀರಿನ ಸದ್ಬಳಕೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ನರೇಗಾ ಯೋಜನೆಯಡಿ ನೀರು ಸಂರಕ್ಷಣೆಯ ಕಾಮಗಾರಿ ಕೈಗೊಳ್ಳಲು ಅವಕಾಶಗಳಿದ್ದು, ಇಲಾಖೆಗಳು ಈ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಂತಹ ಸಾಮಾಜಿಕ ಕಾರ್ಯ ನಡೆಸುವ ಸಂಸ್ಥೆಗಳು ಸರ್ಕಾರದ ಯೋಜನೆಗಳಿಗೆ ಕೈಜೋಡಿಸಬೇಕು.
ಬರಿದಾದ ಮರಳು:
ವರ್ಷದಿಂದ ವರ್ಷಕ್ಕೆ ಮಳೆ ಕ್ಷೀಣಿಸಿದ ಪರಿಣಾಮ ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ನೀರು ಹರಿಯುತ್ತಿದ್ದ ಹಳ್ಳಗಳಲ್ಲಿ ಮರಳನ್ನು ದೋಚಲಾಗಿದೆ. ಈಗ ಎಲ್ಲಿಯೂ ಮರಳು ಸಿಗುತ್ತಿಲ್ಲ. ಮನೆ ಕಟ್ಟುವವರು, ಕಟ್ಟಡ ನಿರ್ಮಾಣ ಮಾಡುವವರು ಈಗ ಅನಿವಾರ್ಯವಾಗಿ ಎಂಸ್ಯಾಂಡ್ ಮರಳು ಬಳಸುತ್ತಿದ್ದಾರೆ. ಅಂತರ್ಜಲ ಬತ್ತಿ ಹೋಗಿರುವ ಪರಿಣಾಮಗಳು ಈಗಷ್ಟೇ ಕಾಣಿಸಿಕೊಳ್ಳುತ್ತಿವೆ. ಜೀವ ಜಲ ವೃದ್ಧಿಸುವ ನಿಟ್ಟಿನಲ್ಲಿ ಯೋಜನೆಗಳು ಪರಿಣಾಮಕಾರಿಯಾಗದೇ ಹೋದರೆ ಮುಂದಿನ ದಿನಗಳು ಮತ್ತಷ್ಟು ಕಷ್ಟಮಯವಾಗಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
