ಹಗರಿಬೊಮ್ಮನಹಳ್ಳಿ:
ಸಾವಿರಾರು ವರ್ಷಗಳ ಹಿಂದೆಯೇ ಇದ್ದ ದೇವದಾಸಿಯಂತಹ ಅನಿಷ್ಠ ಪದ್ಧತಿ ಸಮಾಜದಿಂದ ಸಂಪೂರ್ಣವಾಗಿ ತೊಲಗಬೇಕು ಎಂದು ಸಂಡೂರಿನ ವಿರಕ್ತಮಠ ಸಂಸ್ಥಾಪಕರಾದ ಪ್ರಭುದೇವರ ಸ್ವಾಮೀಜಿ ಹೇಳಿದರು.ಪಟ್ಟಣದ ಹಳೇ ಊರಿನ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಶ್ರೀಜ್ಯೋತಿಬಸು ಸ್ಮಾರಕ ಸಾಮಾಜಿಕ ಶಿಕ್ಷಣ ದತ್ತಿ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪುರವರ 116ನೇ ಜನ್ಮ ದಿನಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 3ನೇ ವರ್ಷದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮತನಾಡಿದರು.
ಅಂದು ಕುವೆಂಪು ದೇವದಾಸಿಯಂತ ಅನಿಷ್ಠ ಪದ್ಧತಿಯನ್ನು ವಿರೋಧಿಸುತ್ತಲೇ ಬಂದವರು. ಇಂದು ಇಂತಹ ಸಂಘಟನೆಗಳಿಂದ ದೇವದಾಸಿಯರ ಮಕ್ಕಳಿಗೂ ಮದುವೆ ಮಾಡಿಸುತ್ತಿರುವುದು ಶ್ಲಾಘನೀಯ. ಸಮಾಜ ಸಂರ್ಪೂಣ ಕಡೆಗಣಿಸಿದವರಿಗೊಂದು ಬಾಳು ಕೊಡುವುದರ ಮೂಲಕ ಅನಿಷ್ಠ ಪದ್ಧತಿ ತೊಲಗಿ ಅವರು ಸಮಾಜ ಮುಖಿಯಾಗುತ್ತಿರುವುದು ಮತ್ತಷ್ಟು ಗೌರವ ಹೆಚ್ಚಿಸುತ್ತಿದೆ ಎಂದರು.
ನಂತರ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ್ ಮಾತನಾಡಿ, ಸಂಘಟನೆಗಳು ಬರೀ ಹೋರಾಟಕ್ಕೆ ಸೀಮಿತವಾಗದೆ, ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಮಾಜವೇ ಇತ್ತ ತಿರುಗಿ ನೋಡುವಂತ ಕೆಲಸಮಾಡುತ್ತಿದೆ ಎಂದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯಲ್ಲಿರು ಮಹಿಳೆಯರು ಹಾಗೂ ಅವರ ಮಕ್ಕಳ ಬಗ್ಗೆ ಚಿಂತನೆ ನಡೆಸಿದಾಗ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಕಳೆದ ಮೂರುವರ್ಷಗಳ ಹಿಂದೆ ಆಲೋಚನೆ ಬಂದಿತ್ತು. ಈಗ 3ನೇ ವರ್ಷದ ಕಾರ್ಯಕ್ರಮವಾಗಿದ್ದು, ಇದಕ್ಕೆ ಸಂಘಟನೆಯ ಸದಸ್ಯರ ಶ್ರಮಕೂಡ ಯಶಸ್ಸಿಗೆ ಕಾರಣವಾಗಿದೆ. ಇಂದು ದೇವದಾಸಿ ವಿಮೋಚನಾ ಸಂಘಟನೆಯಲ್ಲಿ ಹಲವಾರು ಜೋಡಿಗಳು ಮದುವೆಯಾಗಲು ಮುಂದೆ ಬಂದಿರುವುದು ಸಂತಸತಂದಿದೆ ಮತ್ತು ತೃಪ್ತಿ ತಂದಿದೆ ಎಂದರು.
ಇದೇ ವೇದಿಕೆಯಲ್ಲಿ 13ಜೋಡಿಗಳಿಗೆ ಕಂಕಣ ಕೂಡಿಬಂದಿತು. ಅದರಲ್ಲೂ ಒಂದು ವಿಶೇಷವಾದ ಮದುವೆ ಜರುಗಿತು.ಅನ್ಯಧರ್ಮೀಯ ಒಂದು ಜೋಡಿ ಮೋರಗೇರಿ ಅವಿನಾಶ, ಉಲವತ್ತಿ ಆಯುಷಾ ಬೇಗಂ ಈರ್ವರಿಗೂ ಕಂಕಣ ಭಾಗ್ಯದಿಂದ ಭಾವೈಕ್ಯತೆಯ ಸಾಮಾರಸ್ಯಕ್ಕೆ ವೇದಿಕೆ ಸಾಕ್ಷಿಯಾಯಿತು.
ತಹಸೀಲ್ದಾರ್ ಆಶಪ್ಪ ಪೂಜಾರ್, ಸಿ.ಐ.ಟಿ.ಯು. ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ್ ಮಾತನಾಡಿದರು. ತಾ.ಪಂ.ಇಒ ಎಚ್.ವಿಶ್ವನಾಥ ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ್, ಉಪನ್ಯಾಸಕಿ ಸುಧಾಚಿದಾನಂದಗೌಡ, ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಪ್ರಗತಿಪರ ರೈತ ಆಂಜನೇಯರೆಡ್ಡಿ, ಶಿಕ್ಷಕ ಎಲ್.ರೆಡ್ಡಿನಾಯ್ಕ, ಸಂಘದ ತಾಲೂಕು ಅಧ್ಯಕ್ಷೆ ಬಿ.ಮೈಲಮ್ಮ, ಕಾರ್ಯದರ್ಶಿ ಪಿ.ಚಾಂದಬೀ, ಜನವಾದಿ ಮಹಿಳಾ ಸಂಘಟನೆಯ ಜಿ.ಸರೋಜ ಮತ್ತಿತರರು ಪಾಲ್ಗೊಂಡಿದ್ದರು.ಪುಷ್ಪಾ ಪ್ರಾರ್ಥಿಸಿದರು, ಸಿಐಟಿಯು ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ್ ಸ್ವಾಗತಿಸಿ ನಿರ್ವಹಿಸಿದರು.