ದಾವಣಗೆರೆ:
ಮುಜರಾಯಿ ಇಲಾಖೆಗೆ ಸೇರಿರುವ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಆಸ್ತಿಗೂ, ಪೂಜಾರರ ವಂಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬೀರಲಿಂಗೇಶ್ವರ ದೇವಸ್ಥಾನ ಹೋರಾಟ ಸಮಿತಿ ಮುಖಂಡ ಕೆಂಗೋ ಹನುಮಂತಪ್ಪ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಿಗೆ ಮಾಡಿಕೊಂಡು ಬರುತ್ತಿರುವ ಪೂಜಾರರ ವಂಶಸ್ಥರು, ನೆನ್ನೆ ಸುದ್ದಿಗೋಷ್ಠಿ ನಡೆಸಿ ನಮ್ಮ ಪೂರ್ವಿಕರ ಸ್ವಂತ ಆಸ್ತಿಯಲ್ಲಿ ನಾವೇ ದೇವಸ್ಥಾನ ಕಟ್ಟಿಕೊಂಡು ತಲ-ತಲಾಂತರದಿಂದ ಪೂಜಾರಿಕೆ ಮಾಡಿಕೊಂಡು ಬಂದಿದ್ದು, ನಮ್ಮ ಆಸ್ತಿ ನಮಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ದೇವಸ್ಥಾನದ ಪೂಜಾರರು ಬಡವರೆಂಬ ಕಾರಣಕ್ಕೆ, ದೇವಸ್ಥಾನದ ಪಕ್ಕದಲ್ಲೇ ವಾಸವಾಗಿರಲು ಅವಕಾಶ ಕಲ್ಪಿಸಿಕೊಡಲಾಗಿತ್ತೇ ವಿನಾ ದೇವಸ್ಥಾನದ ಆಸ್ತಿಗೂ ಪೂಜಾರಿಕೆಗೂ ಸಂಬಂಧವಿಲ್ಲ. ಹಾಗೇನಾದರೂ ಇದ್ದರೆ ಕಾನೂನು ಹೋರಾಟದ ಮೂಲಕ ಆಸ್ತಿ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಮಾಜಿ ಶಾಸಕ, ಸಮಾಜದ ಹಿರಿಯ ಮುಖಂಡ ಕೆ.ಮಲ್ಲಪ್ಪನವರು ನಗರದ ಬೀರಲಿಂಗೇಶ್ವರ ದೇವಸ್ಥಾನದ ಆಸ್ತಿ ಕಬಳಿಸಲು ಯತ್ನಿಸಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಮಲ್ಲಪ್ಪನವರು ಈವರೆಗೆ ಕಳಂಕರಹಿತವಾಗಿ ಜೀವನ ನಡೆಸಿಕೊಂಡು ಬಂದಿದ್ದಾರೆ. ಇಳಿ ವಯಸ್ಸಿನಲ್ಲಿರುವ ಇಂತಹವರ ಮೇಲೆ ವೃಥಾ ಆರೋಪ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲಪ್ಪನವರಿಂದಲೇ ಅನುಕೂಲ ಪಡೆದ ಪೂಜಾರ ವಂಶಸ್ಥರು, ಇಂದು ಅವರ ಮೇಲೆಯೇ ಆಪಾದನೆ ಮಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಮಾಜಿ ಶಾಸಕರ ಮೇಲೆ ಸುಳ್ಳು ಆರೋಪ ಮಾಡುತ್ತಿರುವವರನ್ನು ಪೂಜಾರಿಕೆ ವೃತ್ತಿಯಿಂದ ತಕ್ಷಣವೇ ವಜಾ ಮಾಡುವಂತೆ ಒತ್ತಾಯಿಸಿ ಶೀಘ್ರದಲ್ಲಿಯೇ ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಪೂಜಾರ್ ಅಜ್ಜಪ್ಪ ಮಾತನಾಡಿ, ದಾವಣಗೆರೆ ನಗರದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜಾರಿಕೆ ಮಾಡುತ್ತಿದ್ದ ನಮ್ಮ ತಂದೆ ಲಕ್ಷ್ಮಣ ಪೂಜಾರರೇ ಬೀರಲಿಂಗೇಶ್ವರ ದೇವಸ್ಥಾನದಲ್ಲೂ ಪೂಜೆ ಮಾಡುತ್ತಿದ್ದರು. ಆದರೆ, ದೇವಸ್ಥಾನ ದೂರವಾಗುತ್ತದೆಂಬ ಕಾರಣಕ್ಕೆ ಅಲ್ಲೇ ವಾಸಿಸುತ್ತಿದ್ದ ಸಹೋದರರ ಮಕ್ಕಳಿಗೆ ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಿಕೆ ವಹಿಸಿಕೊಟ್ಟಿದ್ದರು. ಹೀಗಾಗಿ 1960 ರಿಂದೀಚೆಗ ಷ್ಟೇ ಪಕ್ಕೀರಮ್ಮ ಕುಟುಂಬದವರು ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾರಿಕೆ ಮಾಡಿಕೊಂಡು ಬಂದಿದ್ದಾರೆ. ಹೊರತು, ಮೂರ್ನಾಲ್ಕು ತಲೆಮಾರುಗಳಿಂದ ಪೂಜಾರಿಕೆ ಮಾಡಿಕೊಂಡು ಬಂದಿದ್ದೇವೆಂದು ಹೇಳಿತ್ತಿರುವುದು ಶುದ್ಧ ಸುಳ್ಳು ಎಂದರು.
ಬೀರಲಿಂಗೇಶ್ವರ ದೇವಸ್ಥಾನಕ್ಕೆ 100 ವರ್ಷಕ್ಕೂ ಹಳೆಯ ಇತಿಹಾಸವಿಲ್ಲ. ಆದ್ದರಿಂದ ದೇವಸ್ಥಾನದ ಜಾಗ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬ ಪಕ್ಕೀರಮ್ಮ ಕುಟುಂಬದವರ ಮಾತನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿ ಮುಖಂಡರಾದ ಜೆ.ಕೆ.ಕೊಟ್ರಬಸಪ್ಪ, ಬಿ.ಹೆಚ್.ಪರಶುರಾಮಪ್ಪ, ಹೆಚ್.ಬಿ.ಗೋಣೆಪ್ಪ, ಹೆಚ್.ಜಿ.ಸಂಗಪ್ಪ, ಎಸ್.ಎಸ್.ಗಿರೀಶ, ಹೆಚ್.ತಿಪ್ಪಣ್ಣ, ಗೌಡ್ರು ಚನ್ನಬಸಪ್ಪ, ಎಸ್.ಟಿ.ಅರವಿಂದ ಹಾಲೇಕಲ್ಲು, ಹೆಚ್.ಎನ್.ಗುರುನಾಥ, ಎನ್.ಜೆ.ನಿಂಗಪ್ಪ, ರೇವಣಸಿದ್ದಪ್ಪ, ಜಮ್ನಳ್ಳಿ ನಾಗರಾಜ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








