ರೆಡ್ಡಿಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬೀಗ ಮುರಿತ

ಮಿಡಿಗೇಶಿ

        ಕಳೆದ ನಾಲ್ಕಾರು ತಿಂಗಳುಗಳಿಂದ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದಲ್ಲಾ ಒಂದು ರೀತಿಯ ಕ್ರೈಮ್‍ಗಳು ನಡೆಯುತ್ತಿವೆ. ಆದರೂ ಸಹ ಏಕೆ ಕ್ರೈಮ್‍ಗಳಿಗೆ ಕಡಿವಾಣ ಬೀಳುತ್ತಿಲ್ಲ ಎಂದು ಪ್ರಜ್ಞಾವಂತ ನಾಗರಿಕರಲ್ಲಿ ಯಕ್ಷಪ್ರಶ್ನೆ ಮೂಡಿದೆ. ಸೀಮೆಹಸುಗಳ ಕಳವು, ಕೆಲ ಗ್ರಾಮಗಳಲ್ಲಿ ಸೀಮೆ ಹಸುಗಳ ಕಳವಿಗೆ ವಿಫಲ ಯತ್ನಗಳು ನಡೆದಿರುವುದು ಹಾಗೂ ದ್ವಿಚಕ್ರವಾಹನಗಳ ಕಳವು ನಡೆದಿವೆ.

        ಪುಲುಮಾಚಿ ಗ್ರಾಮದ ಗೋವಿಂದಪ್ಪನವರ ಜಮೀನಲ್ಲಿನ ಮುಸುಕಿನ ಜೋಳದ ಕಳವು ಸೇರಿದಂತೆ ಇನ್ನೂ ಹಲವು ಕಳ್ಳತನದ ಪ್ರಕರಣಗಳು ಜನರ ಮನಸ್ಸಿಂದ ಮಾಸಿಲ್ಲ. ಪುನಃ ಫೆ. 11 ರ ಸೋಮವಾರ ರಾತ್ರಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮದ ಪುರಾತನ ಕಾಲದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದ ಬೀಗ ಒಡೆದು ಗ್ರಿಲ್ಸ್ ಬಾಗಿಲನ್ನು ಕಿತ್ತು ಹಾಕಿದ ಕಳ್ಳರು ದೇವಸ್ಥಾನದ ಒಳಗಡೆಯಿರುವ ಎಂಟು ವಿಗ್ರಹಗಳನ್ನು ಕೆಡವಿ ಅದರಲ್ಲಿನ ಒಂದು ಕಳಸವನ್ನು ಭಿನ್ನಗೊಳಿಸಿರುವ ಅಘಾತಕಾರಿ ಘಟನೆ ನಡೆದಿದೆ.

         ಆದರೆ ದೇವಸ್ಥಾನದ ಹುಂಡಿಯನ್ನು ಮುಟ್ಟದೇ ಇರುವುದನ್ನು ಗಮನಿಸಿದಾಗ ಈ ಘಟನೆಯು ಹಣ ಅಥವಾ ಒಡವೆಗಳನ್ನು ಕದಿಯಲು ಬಂದಿರುವಂತಹ ಕಳ್ಳರ ಕೈಚಳಕವೇ ಅಲ್ಲ. ಇದೊಂದು ಪೂರ್ವನಿಯೋಜಿತ ನಿಧಿಗಳ್ಳರ ಕೈವಾಡವಿರಬಹುದೆನಿಸುತ್ತದೆ. ಸದರಿ ದೇವಾಲಯದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯಸ್ವಾಮಿ, , ಚಿಕ್ಕದಾದ ಮತ್ತೊಂದು ಆಂಜನೇಯಸ್ವಾಮಿಯ ವಿಗ್ರಹಗಳಿರುತ್ತವೆ. ಪ್ರಭಾವಳಿ, ಕಳಸಗಳಿರುತ್ತವೆ. ಈ ಮೇಲ್ಕಂಡ ವಿಗ್ರಹಗಳನ್ನು ಗೀಚಿರುತ್ತಾರೆ. ಒಂದು ಕಳಸ ಭಿನ್ನವಾಗಿದೆ.

         ರೆಡ್ಡಿಹಳ್ಳಿ ಗ್ರಾಮದಿಂದ ಆರ್.ಗೊಲ್ಲರಹಟ್ಟಿ ಗ್ರಾಮಕ್ಕೆ ಹಾದು ಹೋಗುವ ದಾರಿ ಮಧ್ಯೆ ರಸ್ತೆಯ ಬದಿಯಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಾಲಯದ ಗ್ರಿಲ್ಸ್ ಬಾಗಿಲನ್ನು ಕಿತ್ತು ಹಾಕಿದ್ದು, ಯಾವುದೇ ವಸ್ತುಗಳನ್ನು ಕಳವು ಮಾಡಿಲ್ಲ. ಈ ಘಟನೆಯ ಬಗ್ಗೆ ಅರ್ಚಕ ಶ್ರೀಧರ್ ಹಾಗೂ ರೆಡ್ಡಿಹಳ್ಳಿ ಗ್ರಾಮಸ್ಥರು ಫೆ. 12 ರಂದು ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಿಡಿಗೇಶಿ ಪೋಲೀಸ್ ಸಿಬ್ಬಂದಿ ದೇವಾಲಯಕ್ಕೆ ಭೇಟಿ ನೀಡಿದ್ದು, ಮುಂದಿನ ತನಿಖೆ ಬಗ್ಗೆ ಜನ ಸಾಮಾನ್ಯರು ಕುತೂಹಲಿಗಳಾಗಿದ್ದಾರೆ. ಸಾರ್ವಜನಿಕರು ವಿಗ್ರಹಗಳ ಕೆಳಭಾಗದಲ್ಲಿ ”ಸಾಲಿಗ್ರಾಮ”ವಿರುತ್ತದೆ. ಸಾಲಿಗ್ರಾಮವನ್ನು ಕದಿಯುವುದೇ ನಿಧಿಗಳ್ಳರ ಉದ್ದೇಶ ಎಂಬುದಾಗಿ ಪತ್ರಿಕೆಗೆ ತಿಳಿಸಿರುತ್ತಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link