2005ರಲ್ಲಿ ಚಿ.ನಾ.ಹಳ್ಳಿಗೆ ಹೇಮೆ ಹರಿಸಲು ದೇವೇಗೌಡ ಪತ್ರ

ಹುಳಿಯಾರು

       ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಲೋಕ ಸ್ಪರ್ಧೆಗೆ ಇಳಿದ ಬೆನ್ನಲ್ಲೇ ಜಿಲ್ಲೆಗೆ ಹೇಮೆ ಹರಿಯಲು ಅಡ್ಡಿ ಪಡಿಸಿದ್ದಾರೆಂಬ ಆಪಾದನೆ ವಿರೋಧ ಪಕ್ಷದವರಿಂದ ಕೇಳಿಬಂತು. ಹಾಸನದಲ್ಲಿ ಈ ಹಿಂದೆ ಮಗ ರೇವಣ್ಣ ಹಾಗೂ ಸೊಸೆ ಭವಾನಿ ಅವರೊಂದಿಗೆ ಹೇಮೆಗಾಗಿ ಧರಣಿ ಕುಳಿತಿದ್ದ ಪೋಟೋ ಪ್ರತಿಸ್ಪರ್ಧಿಯ ಪ್ರಚಾರಸ್ತ್ರವಾಯಿತು.

      ಪರಿಣಾಮ ದೇವೇಗೌಡರು ತಮ್ಮ ಎಲ್ಲಾ ಪ್ರಚಾರ ಸಭೆಯಲ್ಲೂ ಜಿಲ್ಲೆಗೆ ಹೇಮೆ ಹರಿಸಲು ವಿರೋಧ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಅನಿವಾರ್ಯ ಎಂಬತ್ತಾಯಿತು.

       ತುಮಕೂರು ಜಿಲ್ಲೆಗೆ ಹೇಮೆ ಹರಿಯುವ ವಿಚಾರವಾಗಿ ದೇವೇಗೌಡರು ಅಡ್ಡಿ ಪಡಿಸಿರುವ ಅಥವಾ ಪಡಿಸದಿರುವ ಬಗ್ಗೆ ಅಧಿಕೃತ ಸಾಕ್ಷ್ಯಾಧಾರಗಳು ಎರಡೂ ಪಕ್ಷದಿಂದ ಇಂದಿಗೂ ಬಿಡುಗಡೆಯಾಗಿಲ್ಲ. ಆದರೆ ಚಿ.ನಾ.ಹಳ್ಳಿ ತಾಲೂಕಿಗೆ ಹೇಮೆ ಹರಿಸಲು ದೇವೇಗೌಡರು ವಿರೋಧ ಮಾಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. 2005 ರಲ್ಲಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಬರೆದಿರುವ ಪತ್ರ ಇದನ್ನು ಸ್ಪಷ್ಠಪಡಿಸುವಂತಿದೆ. ಒಂದರ್ಥದಲ್ಲಿ ಇದು ದೇವೇಗೌಡರೆ ಪಾಳಯಕ್ಕೆ ಬ್ರಹ್ಮಾಸ್ತ್ರವಾಗಲಿದೆ.

        ಹೌದು ನಂಜುಂಡಪ್ಪ ವರದಿಯಲ್ಲೇ ಚಿಕ್ಕನಾಯಕನಹಳ್ಳಿ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿತ್ತು. ವರದಿ ಬಂದು ಮೂರ್ನಾಲ್ಕು ದಶಕಗಳೇ ಕಳೆದಿದ್ದರೂ ಬರ ಬಡಿದೋಡಿಸುವ ಪ್ರಮಾಣಿಕ ಪ್ರಯತ್ನ ಈ ಭಾಗದ ಜನಪ್ರತಿನಿಧಿಗಳಿಂದ ನಡೆಯಲಿಲ್ಲ. ಹೇಮೆ ಹರಿಸುವುದೊಂದೆ ಇದಕ್ಕೆ ಶಾಶ್ವತ ಪರಿಹಾರವೆಂದು ಮನಗಂಡ ಈ ಭಾಗದ ಜನ ಹೇಮೆ ಹೋರಾಟ ರೂಪಿಸಿತು. ಇದರಿಂದ ಎಚ್ಚೆತ್ತ ಜನನಾಯಕರು ಸರ್ಕಾರದ ಮಟ್ಟದಲ್ಲಿ ತಮ್ಮ ಹೋರಾಟ ಆರಂಭಿಸಿತು.

        2003 ರ ನವೆಂಬರ್ 11 ರಂದು ಅಂದಿನ ಶಾಸಕ ಸಿ.ಬಿ.ಸುರೇಶ್‍ಬಾಬು ಅವರು ಅಂದಿನ ಜಲಸಂಪನ್ಮೂಲ ಸಚಿವರಿಗೆ ತಾಲೂಕಿನ ನೀರಿನ ಅಭಾವ ಹಾಗೂ ಹೇಮಾವತಿ ಹರಿಸುವ ಅಗತ್ಯತೆಯ ಬಗ್ಗೆ ಪತ್ರದ ಮೂಲಕ ಮನವರಿಕೆ ಮಾಡಿಕೊಟ್ಟರು. ಪರಿಣಾಮ ಅಂದಿನ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಅವರು ಸರ್ವೆ ಮಾಡಿಸಿ ವರದಿ ಮಂಡಿಸುವಂತೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಸರ್ವೆ ವರದಿ ನಂತರವೂ ಯೋಜನೆ ಮಂಜೂರಿಗೆ ಸರ್ಕಾರ ಮೀನಾಮೇಷ ನೋಡುತ್ತಿರುವಾಗ ಸುರೇಶ್ ಬಾಬು ತಮ್ಮ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರ ಮೊರೆ ಹೋಗಿದ್ದಾರೆ.

         ಪರಿಣಾಮ 2005 ರ ಡಿಸೆಂಬರ್ 30 ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಪತ್ರ ಬರೆದು ಒತ್ತಡ ತಂದಿದ್ದಾರೆ. ಈ ಪತ್ರ ಈಗ ಪತ್ರಿಕೆಗೆ ಲಭ್ಯವಾಗಿದ್ದು ಈ ಪತ್ರದಲ್ಲಿ ದೇವೇಗೌಡರು ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು, ಶೆಟ್ಟಿಕೆರೆ ಗ್ರಾಮಗಳ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ನಿವಾರಣೆಗಾಗಿ ಇಲ್ಲಿನ ಕೆರೆಗಳಿಗೆ ಹೇಮಾವತಿ ನಾಲೆಯ ತುಮಕೂರು ಶಾಖಾ ನಾಲೆಯಿಂದ ನೀರು ಹರಿಸುವ ಯೋಜನೆಗೆ ಅನುಮತಿ ನೀಡಲು ಮಾಜಿ ಶಾಸಕರಾದ ಸಿ.ಬಿ.ಸುರೇಶ್ ಬಾಬು ಅವರು ವಿನಂತಿಸಿದ್ದು ಈ ಕೋರಿಕೆಯನ್ನು ಕಾರ್ಯಗತಗೊಳಿಸಲು ಪರಿಗಣಿಸುವಿರೆಂದು ಆಶಿಸುತ್ತೇನೆಂದು ಬರೆದಿದ್ದಾರೆ.

        ಒಟ್ಟಾರೆ ತಮ್ಮ ಮಾನಸ ಪುತ್ರನಂತಿರುವ ಸಿ.ಬಿ.ಸುರೇಶ್‍ಬಾಬು ಅವರ ರಾಜಕೀಯ ಹಿತದೃಷ್ಠಿಯಿಂದಾಗಿ ಚಿ.ನಾ.ಹಳ್ಳಿಗೆ ಹೇಮೆ ಯೋಜನೆ ಮಂಜೂರಿಗೆ ಮಾಜಿ ಪ್ರಧಾನಿಗಳ ವಿರೋಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೂ ಹೇಮೆ ಮಂಜೂರಾಗಿ ದಶಕಗಳೇ ಕಳೆದಿದ್ದರೂ ಕಾಮಗಾರಿ ಮುಗಿದು ಕೆರೆಗಳಿಗೆ ಹೇಮೆ ಹರಿಯದಿರುವುದರ ಹಿಂದೆ ಯಾರ ಕೈವಾಡವಿದೆ ಎಂಬುದು ಮಾತ್ರ ಇನ್ನೂ ನಿಗೂಢ.

        ಕಳೆದ ಎರಡು ದಶಕಗಳಿಂದಲೂ ಪ್ರತಿ ಚುನಾವಣೆಯಲ್ಲೂ ಹೇಮೆ, ಭದ್ರೆ ಯೋಜನೆಗಳೇ ಇಲ್ಲಿ ರಾಜಕಾರಣಿಗಳ ಚುನಾವಣಾ ಭಾಷಣದ ವಿಷಯವಾಗಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ನಮ್ಮನ್ನು ಗೆಲ್ಲಿಸಿದರೆ ನಾವು ನೀರು ಹರಿಸುತ್ತೇವೆ ಎಂದೇಳುವ ಮೂಲಕ ನೀರಿನ ರಾಜಕಾರಣ ಮಾಡುತ್ತಿದ್ದಾರೆ. ಅದರಂತೆ ಈ ಲೋಕಸಭಾ ಚುನಾವಣೆಯಲ್ಲೂ ನೀರಿನ ವಿಷಯವೇ ಪ್ರಮುಖವಾಗಿದೆ. ಇವರು ಆವರ ಮೇಲೆ, ಅವರು ಇವರ ಮೇಲೆ ಕೆಸರೆರಚಾಡುವುದು ಬಿಟ್ಟರೆ ಹೇಮೆ ಹರಿಸಿಯೇ ತೀರುವ ಬಗ್ಗೆ ಮಾತನಾಡದಿರುವುದು ಜನರ ದೌರ್ಭವ್ಯವೇ ಸರಿ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap