ತುಮಕೂರು
ಜೆಡಿಎಸ್, ಕಾಂಗ್ರೆಸ್ ಮುಖಂಡರ ಏಕತೆಯ ಶಕ್ತಿ ಪ್ರದರ್ಶನದೊಂದಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರು ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ಮಧ್ಯಾಹ್ನ 2.11ಕ್ಕೆ ನಾಮಪತ್ರ ಸಲ್ಲಿಸಿದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಮೈತ್ರಿ ಪಕ್ಷಗಳ ಪ್ರಯತ್ನಕ್ಕೆ ಈ ಮೂಲಕ ಚಾಲನೆ ನೀಡಿದರು.
ಎರಡು ಪಕ್ಷಗಳ ನಾಯಕರು ತೀರ್ಮಾನ ಮಾಡಿ ಜೆಡಿಎಸ್‍ಗೆ ಬಿಟ್ಟುಕೊಟ್ಟ ಎಂಟು ಕ್ಷೇತ್ರಗಳಲ್ಲಿ ತುಮಕೂರು ಕ್ಷೇತ್ರವೂ ಸೇರಿದ್ದು ಅದರಲ್ಲಿ ತಾವು ಸ್ಪರ್ಧೆ ಮಾಡುತ್ತಿರುವುದಾಗಿ ಉಮೇದುವಾರಿಕೆ ಸಲ್ಲಿಸಿದ ನಂತರ ಹೇಳಿದ ದೇವೇಗೌಡರು, ಯಾರದೇ ಅವಕಾಶವನ್ನು ತಾವು ಕಿತ್ತುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಎರಡು ಪಕ್ಷದವರು ಒಗ್ಗಟ್ಟಿನಿಂದ ಕೆಲಸ ಮಾಡಿ ದೇವೇಗೌಡರನ್ನು ಗೆಲ್ಲಿಸುವುದಾಗಿ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ದೇವೇಗೌಡರೆದುರು ಭರವಸೆ ಕೊಟ್ಟರು.
ದೇವೇಗೌಡರಿಗೆ ಕಾಂಗ್ರೆಸ್ ನಾಯಕರ ಬಂಡಾಯ ಎದುರಾಗಿದೆ. ಇದೇ ದಿನ ಹಾಲಿ ಸಂಸದ ಎಸ್ ಪಿ ಮುದ್ದಹನುಮೇಗೌಡರು ಹಾಗೂ ಮಾಜಿ ಶಾಸಕ ಕೆ ಎನ್ ರಾಜಣ್ಣ ಅವರು ಕೂಡಾ ಪಕ್ಷೇತರರಾಗಿ ಸಲ್ಲಿಸಿದರು. ನಾಮಪತ್ರ ಹಿಂಪಡೆದು ಪಕ್ಷದ ತೀಮಾದಂತೆ ದೇವೇಗೌಡರನ್ನು ಬೆಂಬಲಿಸುವಂತೆ ಅವರ ಮನವೊಲಿಸುವುದಾಗಿ ಡಾ. ಪರಮೇಶ್ವರ್ ಹೇಳಿದರು.
ಈವರೆಗಿನ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ಕಾಂಗ್ರೆಸ್- ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಐಕ್ಯತೆ ಪ್ರದರ್ಶಿಸಿದ ಅಪರೂಪದ ದೃಶ್ಯವೂ ನಗರದಲ್ಲಿ ಕಂಡುಬಂದಿತ್ತು. ದೇವೇಗೌಡರನ್ನು ಟೀಕಿಸಿಕೊಂಡು ಬಂದಿದ್ದ ಕಾಂಗ್ರೆಸ್ ಮುಖಂಡರೂ ದೇವೇಗೌಡರ ಗೆಲುವಿಗಾಗಿ ತಮ್ಮ ಪಕ್ಷದ ಬಾವುಟ ಪ್ರದಶಿಸಿದ್ದೂ ವಿಶೇಷವಾಗಿತ್ತು.
ದೇವೇಗೌಡರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಕಾಂಗ್ರೆಸ್‍ನ ಡಾ. ಪರಮೇಶ್ವರ್ ಅವರೇ ಮುಂಚೂಣಿಯಲ್ಲಿದ್ದರು. ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ತೆರೆದ ವಾಹನದಲ್ಲಿ ಎರಡು ಪಕ್ಷಗಳ ಸಾವಿರಾರು ಕಾರ್ಯಕರ್ತರ ಅದ್ದೂರಿ ಮೆರವಣಿಗೆಯಲ್ಲಿ ತೆರಳಿ ದೇವೇಗೌಡರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಸಚಿವ ಎಸ್ ಆರ್ ಶ್ರೀನಿವಾಸ್, ಜೆಡಿಎಸ್ ಶಾಸಕರಾದ ಬಿ ಸತ್ಯನಾರಾಯಣ, ಎಂ ವಿ ವೀರಭದ್ರಯ್ಯ, ಡಿ ಸಿ ಗೌರಿಶಂಕರ್, ಬೆಮೆಲ್ ಕಾಂತರಾಜ್, ಮಾಜಿ ಸಚಿವ ಡಿ ನಾಗರಾಜಯ್ಯ, ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪ, ಸಿ ಬಿ ಸುರೇಶ್ ಬಾಬು, ಹೆಚ್ ನಿಂಗಪ್ಪ, ಸುಧಾಕರಲಾಲ್, ತಿಮ್ಮರಾಯಪ್ಪ, ಕಾಂಗ್ರೆಸ್ ಶಾಸಕ ಡಾ. ರಂಗನಾಥ್, ಮಾಜಿ ಸಚಿವ ಟಿಬಿ ಜಯಚಂದ್ರ, ಮಾಜಿ ಶಾಸಕರಾದ ಡಾ ರಫಿಕ್ ಅಹಮದ್, ಕೆ ಷಡಕ್ಷರಿ, ಎಸ್ ಷಫಿಅಹಮದ್, ಆರ್ ನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ ಮೊದಲದವರು ದೇವೆಗೌಡರಿಗೆ ಸಾಥ್ ನೀಡಿದರು.
ಮೆರವಣಿಗೆಯುದ್ದಕ್ಕೂ ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಬಾವುಟ ಹಾರಾಡಿದವು. ಕಾರ್ಯಕರ್ತರು ಅವರವರ ಪಕ್ಷಗಳ ಮುಖಂಡರು, ನಾಯಕರಿಗೆ ಜೈಕಾರ ಕೂಗುತ್ತಾ ಉರಿಯುವ ಬಿಸಿಲಿನಲ್ಲಿ ಮೆರವಣಿಗೆ ಸಾಗಿದರು. ದೇವೆಗೌಡರು ಸ್ವಲ್ಪ ದೂರ ಮೆರವಣಿಗೆ ಹೊರಟು ನಂತರ ಕಾರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಜ್ಯೋತಿಷಿ ಸಲಹೆಯಂತೆ ಮಧ್ಯಾಹ್ನ 2.11 ಕ್ಕೆ ಸರಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದರು.
ದೇವೆಗೌಡರ ನಾಮಪತ್ರ ಸಲ್ಲಿಕೆ ವೇಳೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಮಾಜಿ ಶಾಸಕರಾದ ಡಾ. ರಫಿಕ್ ಅಹಮದ್, ಕೆ ಷಡಕ್ಷರಿ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಹಾಜರಿದ್ದರು. ಈ ನಡುವೆ ಮಾಜಿ ಸಚಿವ ಜೆಡಿಎಸ್‍ನ ಡಿ ನಾಗರಾಜಯ್ಯ ಅವರೂ ತುರ್ತು ಸಂದರ್ಭಕ್ಕೆ ಇರಲಿ ಎನ್ನುವಂತೆ ನಾಮಪತ್ರ ಸಲ್ಲಿಸಿದರು.
ದೇವೇಗೌಡರು ನಾಮಪತ್ರ ಸಲ್ಲಿಸುವ ಸಂಬಂಧ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಾಜರಿದ್ದು ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು, ಕಾಂಗ್ರೆಸ್‍ನ ಶಕ್ತಿ ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದರು. ದೇವೆಗೌಡರು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗವಹಿಸಿ ಮಧ್ಯಾಹ್ನ ತುಮಕೂರಿಗೆ ಆಗಮಿಸಿದರು.
ಸರ್ಕಾರಿ ಕಾಲೇಜು ಮೈದಾನದಲ್ಲಿ ಆ ವೇಳೆಗೆ ಜೆಡಿಎಸ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು. ಗೌಡರು ಬಂದ ನಂತರ ಆರಂಭಗೊಂಡ ಮೆರವಣಿಗೆ ಬಿ ಹೆಚ್ ರಸ್ತೆ, ಎಂಜಿ ರಸ್ತೆ ಮೂಲಕ ಡಿಸಿ ಕಚೇರಿ ತಲುಪಿತು. ಮುಂಜಾಗ್ರತೆಯಾಗಿ ಮೆರವಣಿಗೆ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬರಿಗಾಲಲ್ಲಿ ತೆರಳಿ ನಾಮಪತ್ರ
ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಂದ ದೇವೇಗೌಡರು ಎಂಜಿ ರಸ್ತೆ ತಿರುವಿನಲ್ಲಿ ವಾಹನ ಇಳಿದು ಕಾರು ಹತ್ತಿ ಡೀಸಿ ಕಛೇರಿಗೆ ತೆರಳಿದರು. ಕಛೇರಿ ಬಳಿ ಕಾರು ಇಳಿದು, ಕಾರಿನಲ್ಲೇ ಚಪ್ಪಲಿ ಬಿಟ್ಟು ಜಿಲ್ಲಾಧಿಕಾರಿ ಕಛೇರಿಗೆ ಬರಿಗಾಲಲ್ಲಿ ನಡೆದುಕೊಂಡು ಹೋದರು. ತಮ್ಮ ಜ್ಯೋತಿಷಿ ಸಲಹೆಯಂತೆ ಮಧ್ಯಾಹ್ನ 2.11 ಕ್ಕೆ ಸರಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
ನಂತರ ಮಾಜಿ ಶಾಸಕ ಡಾ. ರಫಿಕ್‍ಅಹಮದ್ ಮನೆಗೆ ಊಟಕ್ಕೆ ತೆರಳಿದರು. ಉಪಮುಖ್ಯಮಂತ್ರಿ ಡಾ. ಪರಮೇಶ್ವರ್, ಮಾಜಿ ಶಾಸಕರಾದ ಷಡಕ್ಷರಿ, ಎಂ ಟಿ ಕೃಷ್ಣಪ್ಪ, ಹೆಚ್ ನಿಂಗಪ್ಪ ಅವರೊಂದಿಗೆ ದೇವೇಗೌಡರು ಸಸ್ಯಾಹಾರಿ ಊಟ ಸೇವಿಸಿದರು.