ಹುಳಿಯಾರು
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಸೇರಿದ ಜಾನಕಲ್ಲು ಗ್ರಾಮದ ಬಳಿ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದು, ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ಬಿಟ್ಟಿದ್ದಾರೆ.
15 ದಿನಗಳಿಂದ ಜಾನಕಲ್ ಸೇರಿದಂತೆ ಇತರ ಗ್ರಾಮಗಳ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ರೈತರ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿತ್ತು. ರೈತರು ತಮ್ಮ ತೋಟಗಳಿಗೆ ಹೋಗಲು ಭಯಪಡುತ್ತಿದ್ದರು. ಚಿರತೆಯನ್ನು ಹಿಡಿದು ಬೇರೆಡೆ ಸಾಗಿಸುವಂತೆ ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.
ತಿಪಟೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಜಿ.ರವಿ ಅವರ ಮಾರ್ಗದರ್ಶನದಲ್ಲಿ ಚಿರತೆ ಸೆರೆಗೆ ಬಲೆ ಬೀಸಲಾಗಿತ್ತು. ಸೋಮವಾರ ನಸುಕಿನ ವೇಳೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.ಸೆರೆ ಸಿಕ್ಕ ಚಿರತೆ ಗಂಡು ಚಿರತೆಯಾಗಿದ್ದು, ಇದುವರೆಗೂ ಮಾನವರ ಮೇಲೆ ದಾಳಿ ಮಾಡಿಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಸ್ವಾಭಾವಿಕ ಅರಣ್ಯ ಪ್ರದೇಶಕ್ಕೆ ಬಿಡುವುದಕ್ಕೆ ಬದಲಾಗಿ ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ಬೀಡಲಾಯಿತು ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಎಚ್.ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬುಕ್ಕಾಪಟ್ಟಣ ಉಪ ವಲಯ ಅರಣ್ಯಾಧಿಕಾರಿ ಟಿ.ಕಿರಣ್, ಅರಣ್ಯ ರಕ್ಷಕರಾದ ಬಿ.ಪಿ.ಶಶಿಕುಮಾರ್, ಆರ್.ಶೇಖರ್, ಅರಣ್ಯ ವೀಕ್ಷಕ ಸುರೇಶ್, ಅರೆಕಾಲಿಕ ಸಿಬ್ಬಂದಿ ಲಿಂಗರಾಜು, ಪಾಂಡುರಂಗಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
